ತುಮಕೂರು: ಅತಿ ವೇಗವಾಗಿ ಚಲಿಸುತ್ತಿದ್ದ ಖಾಸಗಿ ಬಸ್ ರಸ್ತೆ ವಿಭಜಕಕ್ಕೆ ಅಪ್ಪಳಿಸಿ ಪಕ್ಕದ ರಸ್ತೆಗೆ ಹಾರಿ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಸುಮಾರು 8ಕ್ಕೂ ಅಧಿಕ ಮಂದಿ ತೀವ್ರವಾಗಿ ಗಾಯಗೊಂಡಿರುವ ಧಾರುಣ ಘಟನೆ ಇಲ್ಲಿನ ಕ್ಯಾತ್ಸಂದ್ರ ಪೊಲೀಸ್ ಠಾಣೆ ಸರಹದ್ದಿನ ಹಿರೇಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಶುಕ್ರವಾರ ನಡೆದಿದೆ.
ಗೋವಿಂದ ನಾಯಕ (58), ತಿಪ್ಪಮ್ಮ, (52), ದಿನೇಶ್ (12), ಪಿಂಕಿ (15) ಹಾಗೂ ಕುಣಿಗಲ್ ತಾಲೂಕಿನ ನಿವಾಸಿ ಕಾರು ಚಾಲಕ ರಾಜೇಶ್ ಎಂಬವರು ಮೃತ ದುರ್ದೈವಿಗಳು. ಮೃತ ಗೋವಿಂದ ನಾಯಕ ಅವರು ಮೂಲತಃ ಚಳ್ಳಕೆರೆ ತಾಲ್ಲೂಕಿನ ನಿವಾಸಿಗಳಾಗಿದ್ದಾರೆ. ಬೆಂಗಳೂರಿನ ವಿಜಯನಗರದಲ್ಲಿ ಪತ್ನಿ ಜತೆ ವಾಸವಿದ್ದರು ಎನ್ನಲಾಗಿದೆ.
ಸಿರಾ ಕಡೆಯಿಂದ ಬೆಂಗಳೂರು ಮಾರ್ಗವಾಗಿ ಚಲಿಸುತ್ತಿದ್ದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕ ಹಾರಿ ಬೆಂಗಳೂರು ಕಡೆಯಿಂದ ಜಗಳೂರಿಗೆ ತೆರಳುತ್ತಿದ್ದ ಇನ್ನೋವಾ ಕಾರಿಗೆ ಡಿಕ್ಕಿ ಹೊಡೆದಿದೆ. ಈ ಪರಿಣಾಮ ಕಾರಿನಲ್ಲಿದ್ದವರ ಪೈಕಿ ಐವರು ಸ್ಥಳದಲ್ಲೇ ಅಸುನೀಗಿದ್ದಾರೆ.
ಬಸ್‌ನಲ್ಲಿ ಸುಮಾರು 30 ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ಈ ಪೈಕಿ ಶ್ರೀಕಂಠಪ್ಪ, ಮಂಜುನಾಥ್, ಬುಡ್ಡಮ್ಮ, ಭಾಗ್ಯಮ್ಮ ಸೇರಿದಂತೆ 8ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಕಾರಿಗೆ ಢಿಕ್ಕಿ ಹೊಡೆದ ನಂತರ ಬಸ್ ರಸ್ತೆ ಪಕ್ಕದಲ್ಲಿದ್ದ ತೆಂಗಿನ ಮರಕ್ಕೆ ಅಪ್ಪಳಿಸಿದೆ.
ರಸ್ತೆ ವಿಭಜಕ ಹಾರಿ ಬಸ್ ಅಪ್ಪಳಿಸಿದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಬಸ್‌ನ ಮುಂಭಾಗ ಸಹ ಜಖಂಗೊಂಡಿದೆ. ಘಟನೆಯ ಸುದ್ದಿ ತಿಳಿದ ಕೂಡಲೇ ಕ್ಯಾತ್ಸಂದ್ರ ಪೊಲೀಸರು ಸ್ಥಳಕ್ಕೆ ಧಾವಿಸಿ ಕಾರಿನಲ್ಲಿ ಸಿಲುಕಿಕೊಂಡಿದ್ದ ಮೃತದೇಹಗಳನ್ನು ಹೊರ ತೆಗೆದು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ಸಾಗಿಸುವಲ್ಲಿ ಶ್ರಮಿಸಿದ್ದಾರೆ.
ಈ ಅಪಘಾತದಿಂದ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಕೆಲಹೊತ್ತು ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡಿತ್ತು.ಕೂಡಲೇ ಕ್ಯಾತ್ಸಂದ್ರ ಪೊಲೀಸರು ಕಾರ್ಯಪ್ರವೃತ್ತರಾಗಿ ಅಪಘಾತಕ್ಕೀಡಾಗಿದ್ದ ವಾಹನಗಳ ಸ್ಥಳದಿಂದ ತೆರವುಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಈ ಸಂಬಂಧ ಕ್ಯಾತ್ಸಂದ್ರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್, ಅಡಿಷನಲ್ ಎಸ್ಪಿ ಮರಿಯಪ್ಪ, ಡಿವೈಎಸ್ಪಿ ಹೆಚ್. ಶ್ರೀನಿವಾಸ್ ಹಾಗೂ ಕ್ಯಾತ್ಸಂದ್ರ ಸಿಪಿಐ ಚನ್ನೇಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.