Advertisement

ಪೇದೆ ಕಿರುಕುಳಕ್ಕೆ ಬೇಸತ್ತು ಅಮಾಯಕ ಆತ್ಮಹತ್ಯೆ

06:29 AM Mar 19, 2019 | Team Udayavani |

ಬೆಂಗಳೂರು: ಆಭರಣ ಮಳಿಗೆಯಲ್ಲಿ ನಡೆದ ಕಳ್ಳತನ ಕೃತ್ಯ ತಾನೇ ನಡೆಸಿದ್ದು ಎಂದು ಒಪ್ಪಿಕೊಳ್ಳುವಂತೆ ಪೊಲೀಸ್‌ ಮುಖ್ಯ ಪೇದೆ ಸೇರಿ ಜ್ಯುವೆಲರಿ ಶಾಪ್‌ ಮಾಲೀಕರು ನೀಡುತ್ತಿದ್ದ ಕಿರುಕುಳದಿಂದ ಬೇಸತ್ತು ಜ್ಯುವೆಲ್ಲರಿ ಅಂಗಡಿ ಕೆಲಸಗಾರ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಾಕಮ್ಮ ಗಾರ್ಡ್‌ನ್‌ಲ್ಲಿ ನಡೆದಿದೆ. ಭಾನುವಾರ ಬೆಳಗಿನ ಜಾವ ಧನಂಜಯ್‌ ಎಂಬಾತ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

Advertisement

ಆತ್ಮಹತ್ಯಗೆ ಶರಣಾಗುವುದಕ್ಕೂ ಮೊದಲು ಧನಂಜಯ್‌ ಬರೆದಿಟ್ಟಿದ್ದ ಡೆತ್‌ನೋಟ್‌ ಆಧರಿಸಿ ಅವರ ಪತ್ನಿ ಶಶಿಕಲಾ ಅವರು ನೀಡಿದ ದೂರಿನ ಅನ್ವಯ ಜಯನಗರ ಠಾಣೆ ಪೊಲೀಸರು, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಪ್ರಕರಣದಲ್ಲಿ ಮುಖ್ಯ ಪೇದೆ ಶಿವಯೋಗಿ, ಚಂಪಕಧಾಮ ಜ್ಯುವೆಲ್ಲರ್ ಮಾಲೀಕರಾದ ರಾಜಶೇಖರ್‌ ಬಿ.ಸಿ. ಮತ್ತು ರಾಮಕೃಷ್ಣ ಬಿ.ಸಿ ಎಂಬುವವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ನಗರ ಪೊಲೀಸ್‌ ಆಯುಕ್ತರ ಕಚೇರಿಯ ವೈರ್‌ಲೆಸ್‌ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಮುಖ್ಯ ಪೇದೆ ಶಿವಯೋಗಿ, ಜ್ಯುವೆಲ್ಲರಿ ಅಂಗಡಿ ಮಾಲೀಕರಾದ ರಾಜಶೇಖರ್‌ ಸಹೋದರರಿಗೆ ಆಪ್ತನಾಗಿದ್ದ. ಅವರ ಜತೆ ಸೇರಿಕೊಂಡು, “ಆಭರಣ ಕಳ್ಳತನ ನೀನೆ ಮಾಡಿದ್ದೀಯಾ ಎಂದು ಒಪ್ಪಿಕೋ’ ಎಂದು ಧನಂಜಯ್‌ಗೆ ಕಿರುಕುಳ ನೀಡಿದ್ದ ಎಂಬುದು ಸಂಗತಿ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾವಿಗೆ ಮೂರು ಜನರೇ ಕಾರಣ: ಫೆ.15ರಂದು ರಾತ್ರಿ ಊಟ ಮುಗಿಸಿದ ಧನಂಜಯ್‌, ಎಂದಿನಂತೆ ಕೊಠಡಿಯಲ್ಲಿ ಮಲಗಿಕೊಂಡಿದ್ದರು. ಮುಂಜಾನೆ 4 ಗಂಟೆ ಸುಮಾರಿಗೆ ಪತ್ನಿ ಶಶಿಕಲಾ ಎದ್ದು ನೋಡಿದಾಗ ಪಕ್ಕದಲ್ಲಿ ಪತಿ ಇರಲಿಲ್ಲ. ಹೀಗಾಗಿ ಹೊರಗಡೆ ಬಂದು ನೋಡಿದಾಗ, ಧನಂಜಯ್‌ ಹಾಲ್‌ನಲ್ಲಿ ಫ್ಯಾನ್‌ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ಇದನ್ನು ಕಂಡು ಆತಂಕಗೊಂಡ ಶಶಿಕಲಾ, ಕೂಡಲೇ ಸ್ಥಳೀಯರನ್ನು ಸಹಾಯಕ್ಕೆ ಕರೆದು ಮೃತದೇಹ ಕೆಳಗೆ ಇಳಿಸಿದ್ದಾರೆ. ಈ ವೇಳೆ ಧನಂಜಯ್‌ ಅವರ ಮೊಬೈಲ್‌ ಹುಡುಕಾಡುತ್ತಿದ್ದಾಗ ಸ್ವಿಚ್‌ಬೋರ್ಡ್‌ ಸಮೀಪದಲ್ಲಿದ್ದ ಮಗಳ ನೋಟ್‌ಬುಕ್‌ನ ಮಧ್ಯಭಾಗದಲ್ಲಿ ಮೊಬೈಲ್‌ ಸಿಕ್ಕಿದೆ. ಜತೆಗೆ, ಧನಂಜಯ್‌ ಬರೆದಿಟ್ಟಿದ್ದ ಡೆತ್‌ನೋಟ್‌ ಕೂಡ ಸಿಕ್ಕಿದೆ. “ಚಂಪಕಧಾಮ ಜ್ಯುವೆಲರ್ ಶಾಪ್‌ನಲ್ಲಿ ಈ ಹಿಂದೆ ನಡೆದ ಕಳ್ಳತನ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿರಲಿಲ್ಲ.

Advertisement

ಹಾಗಿದ್ದರೂ, ಮಾಲೀಕರಾದ ರಾಜಶೇಖರ್‌, ರಾಮಕೃಷ್ಣ ಮತ್ತು ಮುಖ್ಯ ಪೇದೆ ಶಿವಯೋಗಿ, ನಾನೇ ಕಳ್ಳತನ ಮಾಡಿದ್ದೇನೆ ಎಂದು ಒಪ್ಪಿಕೊಳ್ಳುವಂತೆ 2018ರ ಮೇ ತಿಂಗಳಿನಿಂದಲೂ ಇನ್ನಿಲ್ಲದ ಕಿರುಕುಳ ನೀಡಿದ್ದಾರೆ. ಹೀಗಾಗಿ ನನಗೆ ಬದುಕಲು ಇಷ್ಟವಿಲ್ಲ. ನನ್ನ ಸಾವಿಗೆ ಈ ಮೂರು ಜನರೇ ಕಾರಣ ಎಂದು ಬರೆದು ಸಹಿಮಾಡಿಟ್ಟಿದ್ದರು. ಇದನ್ನು ದೂರುದಾರರು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಡೆತ್‌ನೋಟ್‌ ವಾಟ್ಸ್‌ಆ್ಯಪ್‌: ಆತ್ಮಹತ್ಯೆಗೆ ಮುನ್ನ ಡೆತ್‌ನೋಟ್‌ ಅನ್ನು ತನ್ನ ಸಹೋದರ ಹಾಗೂ ಕೆಲ ಸ್ನೇಹಿತರಿಗೆ ವಾಟ್ಸ್‌ಆ್ಯಪ್‌ ಮೂಲಕ ಧನಂಜಯ್‌ ಕಳುಹಿಸಿದ್ದಾರೆ. ಮುಂಜಾನೆ ಮೂರು ಗಂಟೆ ಸುಮಾರಿಗೆ ಧನಂಜಯ್‌ ಈ ಸಂದೇಶ ರವಾನಿಸಿದ್ದಾರೆ. ಆದರೆ ಸಹೋದರ ಹಾಗೂ ಸ್ನೇಹಿತರು ಬೆಳಗ್ಗೆ 7 ಗಂಟೆ ಸುಮಾರಿಗೆ ಸಂದೇಶ ನೋಡಿಕೊಂಡಿದ್ದು, ಆತಂಕಗೊಂಡು ಧನಂಜಯ್‌ ಮನೆಯ ಬಳಿ ಬಂದಿದ್ದರು. ಅಷ್ಟರಲ್ಲಿ ಧನಂಜಯ್‌ ಮೃತಪಟ್ಟಿದ್ದರು ಎಂದು ಅಧಿಕಾರಿ ಮಾಹಿತಿ ನೀಡಿದರು. 

ಪೊಲೀಸರಿಂದ ಸಿಕ್ಕಿತ್ತು ಕ್ಲೀನ್‌ಚಿಟ್‌: ಚಂಪಕಧಾಮ ಜ್ಯುವೆಲರ್ ಶಾಪ್‌ನಲ್ಲಿ ಧನಂಜಯ್‌ 10 ವರ್ಷಗಳಿಂದ ಕೆಲಸ ಮಾಡುತ್ತಿದ್ದ. ಇದೇ ವರ್ಷ ಜನವರಿ 22ರಂದು ಅಂಗಡಿಯಲ್ಲಿ ಚಿನ್ನಾಭರಣಗಳ ಕಳ್ಳತನವಾಗಿತ್ತು. ಈ ಕುರಿತು ಮಾಲೀಕರು ನೀಡಿದ ದೂರಿನ ಅನ್ವಯ ಪ್ರಕರಣದ ತನಿಖೆ ನಡೆಸಿದ್ದ ಹಲಸೂರು ಗೇಟ್‌ ಪೊಲೀಸರು, ಕೆಲಸಗಾರರಾದ ಧನಂಜಯ್‌ ಹಾಗೂ ಆತನ ಸ್ನೇಹಿತನನ್ನು ವಿಚಾರಣೆಗೆ ಒಳಪಡಿಸಿದ್ದರು.

ಈ ವೇಳೆ ಧನಂಜಯನ ಸ್ನೇಹಿತ ಕಳ್ಳತನ ಮಾಡಿರುವುದು ಪತ್ತೆಯಾಗಿದ್ದು, ಕೆಲವು ಆಭರಣಗಳನ್ನೂ ಜಪ್ತಿ ಮಾಡಿದ್ದರು. ಪ್ರಕರಣದಲ್ಲಿ ಧನಂಜಯ್‌ ಪಾತ್ರವಿಲ್ಲ ಎಂಬುದು ಸಾಬೀತಾದ ಹಿನ್ನೆಲೆಯಲ್ಲಿ ಆತನನ್ನು ಬಿಟ್ಟು ಕಳುಹಿಸಿದ್ದರು. ಇದಾದ ಬಳಿಕ ಮೂವರೂ ಆರೋಪಿಗಳು ಈ ಹಿಂದೊಮ್ಮೆ ನಡೆದಿದ್ದ ಕಳ್ಳತನ ಘಟನೆಯನ್ನು ನೆಪವಾಗಿಸಿಕೊಂಡು “ನೀನೆ ಕಳ್ಳತನ ಮಾಡಿದ್ದೀಯ ಎಂದು ಒಪ್ಪಿಕೋ’ ಎಂದು ಧನಂಜಯ್‌ಗೆ ಕಿರುಕುಳ ನೀಡುತ್ತಿದ್ದರು ಎಂಬ ಮಾಹಿತಿ ಇದೆ ಎಂದು ಅಧಿಕಾರಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next