ಇಸ್ಲಾಮಾಬಾದ್ : ರಾವಲ್ಪಿಂಡಿಯ ಅದಿಯಾಲಾ ಜೈಲಿನಲ್ಲಿರುವ ಪದಚ್ಯುತ, ಮೂರು ಬಾರಿಯ ಪಾಕ್ ಪ್ರಧಾನಿ ನವಾಜ್ ಷರೀಫ್ ಅವರಿಗೆ ಈಗ ಹಿಂದಿನಂತೆ ಪಾರ್ಕ್ ನಲ್ಲಿ ನಡೆದಾಡುವುದು ಕನಸಿನ ಮಾತಾಗಿದೆ; ತಮ್ಮ ಜೈಲು ಕೋಣೆಯಿಂದ ಹೊರ ಬಂದು ಹಜಾರದೆಡೆಗೆ ಹೋಗುವುದು ಕೂಡ ಷರೀಫ್ ಗೆ ಅಪಾಯಕಾರಿಯಾಗಿದೆ.
ಷರೀಫ್ ಅವರು ಹೀಗೆ ತಮ್ಮ ಜೈಲು ಕೋಣೆಯಿಂದ ಹೊರ ಬಂದಾಗಲೆಲ್ಲ ಈ ಜೈಲಿನ ಇತರ ಕೋಣೆಗಳಲ್ಲಿರುವ ಕೈದಿಗಳು ಷರಿಫ್ ಮತ್ತು ಅವರ ಪಿಎಂಎಲ್‌ಎನ್ ಪಕ್ಷದ ವಿರುದ್ಧ ಘೋಷಣೆಗಳನ್ನು ಕೂಗುತ್ತಾರೆ. ಇದರಿಂದ ಷರೀಫ್ ಗೆ ತೀರ ಕಿರಿಕಿರಿ ಆಗುತ್ತಿದೆ.
ಇದಕ್ಕಿಂತಲೂ ಮಿಗಿಲಾಗಿ ಈಗ ಷರೀಫ್ಗೆ ಜೈಲಿನಲ್ಲಿ ಪ್ರಾಣ ಭಯ ಎದುರಾಗಿದೆ. ಸಹ ಕೈದಿಗಳಲ್ಲಿರಬಹುದಾದ ರಾಜಕೀಯ ವಿರೋಧಿ ಕೈದಿಗಳು ನವಾಜ್ ಷರೀಫ್ ಮೇಲೆ ಮಾರಣಾಂತಿಕ ದಾಳಿ ನಡೆಸಬಹುದಾದ ಸಾಧ್ಯತೆಗಳಿವೆ ಎಂದು ಅವರ ವಕೀಲರೇ ಕೋರ್ಟಿನಲ್ಲಿ ಭೀತಿ ವ್ಯಕ್ತಪಡಿಸಿದ್ದಾರೆ. ಅಂತಹ ಸನ್ನಿವೇಶ ಈಗ ಬಹುತೇಕ ವಾಸ್ತವವೇ ಆಗಿದೆ ಎನ್ನಲಾಗಿದೆ.
ನವಾಜ್ ಷರೀಫ್ ಅವರಿಗೆ ಜೈಲಿನಲ್ಲಿ ಮೂಲ ಸೌಕರ್ಯಗಳ ಕೊರತೆ ಇರುವುದು ಢಾಳಾಗಿ ಕಾಣಿಸುತ್ತಿದೆ. ತಮ್ಮ ಜೈಲು ಕೋಣೆಯಲ್ಲಿನ ಟಾಯ್ಲೆಟ್ ತುಂಬಾ ಶಿಥಿಲವಾಗಿರುವುದು ಷರೀಫ್ ಗೆ ಜುಗುಪ್ಸೆ ಉಂಟುಮಾಡಿದೆ.
ಸಾಮಾನ್ಯವಾಗಿ ರಾಜಕೀಯ ಪ್ರತಿಷ್ಠಿತರನ್ನು ಜೈಲಿಗೆ ಹಾಕುವ ಪ್ರಸಂಗಗಳಲ್ಲಿ ಇಸ್ಲಾಮಾಬಾದ್ ಜೈಲನ್ನೇ ಸರಕಾರ ಆಯ್ಕೆ ಮಾಡುತ್ತದೆ; ಆದರೆ ಷರೀಫ್ ಸಂದರ್ಭದಲ್ಲಿ ಅವರನ್ನು ಸರ್ವ ಬಗೆಯ ಕೈದಿಗಳನ್ನು ಕೂಡಿ ಹಾಕುವ ರಾವಲ್ಪಿಂಡಿಯ ಕುಖ್ಯಾತ ಅದಿಯಾಲಾ ಜೈಲಿನಲ್ಲಿ ಇರಿಸಲಾಗಿದೆ.
ನಿಜಕ್ಕಾದರೆ ಅದಿಯಾಲಾ ಜೈಲು ಅಧಿಕಾರಿಗಳಿಗೆ ಷರೀಫ್ ಅವರನ್ನು ಇಲ್ಲಿ ಇರಿಸಿಕೊಳ್ಳಲು ಮನಸ್ಸಿಲ್ಲ; ಈ ಜೈಲಿನಲ್ಲಿ ಕಟ್ಟರ್ ಉಗ್ರರನ್ನು ಇಡಲಾಗಿದೆ. ಷರೀಫ್ ಅವರನ್ನು ಇಲ್ಲಿನ ಜೈಲಿನಲ್ಲಿ ಇರಿಸಲಾದ ಬಳಿಕ ಜೈಲಿನ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಷರೀಫ್ ಅವರನ್ನು ಇಸ್ಲಾಮಾಬಾದಿನ ಸಿಹಾಲಾ ರೆಸ್ಟ್ ಹೌಸ್ ಗೆ ಸ್ಥಳಾಂತರಿಸುವ ಸಾಧ್ಯತೆ ಇದೆ. ಈ ರೆಸ್ಟ್ ಹೌಸ್ ಒಂದು ಉಪ ಜೈಲಾಗಿದೆ ಮತ್ತು ಈಗ ಇದನ್ನು ಷರೀಫ್ ಮತ್ತು ಅವರ ಪುತ್ರಿ ಮರ್ಯಾಮ್ ಅವರಿಗಾಗಿ ಸಿದ್ಧಪಡಿಸಿಡಲಾಗಿದೆ.