ಯಳಂದೂರು: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ತಮ್ಮ ಅಧಿಕಾರದ ಅವಧಿಯಲ್ಲಿ ಗಿರಿಜನರಿಗೆ ಬಂದಿರುವ ಅನುದಾನವನ್ನು ವಾಪಸ್ಸು ಪಡೆದು ಘೋರ ಅನ್ಯಾಯ ಎಸೆಗಿದ್ದಾರೆ ಎಂದು ಕರ್ನಾಟಕ ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಬಿ.ಜೆ. ಪುಟ್ಟಸ್ವಾಮಿ ಆರೋಪಿಸಿದರು.
ತಾಲೂಕಿನ ಬಿಳಿಗಿರಿರಂಗನಬೆಟ್ಟದ ವಿವೇಕಾನಂದ ಗಿರಿಜನ ಕಲ್ಯಾಣಕೇಂದ್ರದಲ್ಲಿ ಮಂಗಳವಾರ ನಡೆದ ಆದಿವಾಸಿ ಜನರ ಸಭೆಯಲ್ಲಿ ಸೋಲಿಗರ ಅಹವಾಲುಗಳನ್ನು ಸ್ವೀಕರಿಸಿ ನಂತರ ಬಿಳಿಗಿರಿರಂಗನಾಥ ಸ್ವಾಮಿ ದೇಗುಲ ದರ್ಶನ ಮಾಡಿ ಮಾತನಾಡಿದರು.
ಸಭೆಯಲ್ಲಿ ಅಘಾತಕಾರಿ ವಿಷಯವನ್ನು ತಿಳಿದುಕೊಂಡಿದ್ದೇನೆ. ಈ ಹಿಂದಿನ ಮೈತ್ರಿ ಸರ್ಕಾರದಲ್ಲಿ ಗಿರಿಜನರ ಅಭಿವೃದ್ಧಿಗೆ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮಕ್ಕೆ 2015-16 ನೇ ಸಾಲಿನಲ್ಲಿ ಹಾಕಲಾಗಿದ್ದ 9.5 ಕೋಟಿ ರೂ.ಗಳನ್ನು ಕುಮಾರಸ್ವಾಮಿ ಸರ್ಕಾರದಲ್ಲಿ ಮತ್ತೆ ವಾಪಸ್ಸು ಪಡೆಯಲಾಗಿದೆ. ಇದೊಂದು ಘೋರ ಅನ್ಯಾಯವಾಗಿದೆ ಎಂದು ಬೇಸಕ ವ್ಯಕ್ತಪಡಿಸಿದರು.
ಸರಿಯಾದ ಕ್ರಮವಲ್ಲ: ಸಮಾಜದ ಕಟ್ಟಕಟ್ಟೆಯ ಸಮುದಾಯಕ್ಕೆ ನೀಡಿರುವ ಹಣ ಪಡೆಯುವಷ್ಟು ತೊಂದರೆ ಇವರಿಗಿತ್ತೆ? ಮಾತೆಯರು, ಬಡವರ ಪರ, ಶೋಷಿತರ ಪರ ಧ್ವನಿಯಾಗುತ್ತೇನೆಂದು ಕಣ್ಣೀರಿಡುವ ಎಸ್‌ಡಿಕೆ ಅವರು ಅನುದಾನವನ್ನು ಕಿತ್ತುಕೊಂಡಿದ್ದು, ಸರಿಯಾದ ಕ್ರಮವಲ್ಲ. ಇದನ್ನು ನಾನು ಖಂಡಿಸುತ್ತೇನೆ. ವಾಪಸ್ಸಾಗಿರುವ ಹಣವನ್ನು ಮತ್ತೆ ತರಲು ಸಿಎಂ ಯಡಿಯೂರಪ್ಪ ಜೊತೆ ಸಮಾಲೋಚಿಸಿ ಕ್ರಮ ವಹಿಸುತ್ತೇನೆ ಎಂದು ಭರವಸೆ ನೀಡಿದರು.
ನ್ಯಾಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ: ಈ ವರ್ಗದವರಿಗೆ ನ್ಯಾಯವನ್ನು ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾಗುವುದು. ಬೆಟ್ಟದ ಪುರಾಣಿ ಪೋಡಿನ ವಿದ್ಯುತ್ ಸಮಸ್ಯೆಯ ಬಗೆಹರಿಸಲೂ ಕ್ರಮ ವಹಿಸಲಾಗುವುದು. ಈ ವರ್ಗದ ಅಪೌಷ್ಠಿಕತೆ ನೀಗಿಸುವ ನಿಟ್ಟಿನಲ್ಲಿ ಪಿಡಿಎಸ್ ಯೋಜನೆಯಲ್ಲಿ ನೀಡಲಾಗುವ ಪೌಷ್ಠಿಕ ಆಹಾರವನ್ನು ಕಡಿತಗೊಳಿಸಿರುವುದು ನನ್ನ ಗಮನಕ್ಕೆ ಬಂದಿದೆ. ಇದನ್ನು ಮೊದಲಿನ ಹಾಗೇ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಈ ವೇಳೆ ಆಪ್ತ ಕಾರ್ಯದರ್ಶಿ ಬಸವರಾಜು, ಲೋಕೋಪಯೋಗಿ ಇಲಾಖೆಯ ಎಇಇ ಮಹಾದೇವ ಸ್ವಾಮಿ ದೇವಸ್ಥಾನದ ಇಒ ವೆಂಕಟೇಶ್ ಪ್ರಸಾದ್, ಪಿಎಸ್‌ಐ ರವಿ ಕುಮಾರ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಎಸ್.ಹೊನ್ನೇಗೌಡ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಚಿಕ್ಕಬಸವಯ್ಯ, ಗಿರಿಜನ ಅಭಿವೃದ್ಧಿ ಸಂಘದ ಅಧ್ಯಕ್ಷ ಸಿ.ಮಹಾದೇವ, ಸಂಯೋಜಕ ಸಿ.ಮಾದಪ್ಪ, ಜಂಟಿ ಕಾರ್ಯದರ್ಶಿ ಎಸ್. ಮಹಾದೇವಯ್ಯ, ಎಂ. ರಂಗೇಗೌಡ ಬೊಮ್ಮಯ್ಯ ಹಾಜರಿದ್ದರು.