ವಿಜಯಪುರ : ಅತಿವೃಷ್ಟಿ-ನೆರೆ ಪರಿಹಾರ ನೀಡಿಕೆಯಲ್ಲಿ ಉತ್ತರ ಕರ್ನಾಟಕಕ್ಕೆ ರಾಜ್ಯ ಸರ್ಕಾರ ಮತ್ತೆ ಮಲತಾಯಿ ಧೋರಣೆ ಅನುಸರಿಸಿದೆ. ಇಂತ ಸಂದರ್ಭದಲ್ಲಿ ಜನರ ಪರವಾಗಿ ಧ್ವನಿ ಎತ್ತಲು ನಾನು ಸದಾ ಸಿದ್ಧನಾಗಿದ್ದು, ಅನ್ಯಾಯದ ಪರವಾಗಿ ಮಾತನಾಡಿದ ಮಾತ್ರಕ್ಕೆ ಪಕ್ಷ ವಿರೋಧಿ ಹೇಳಿಕೆಯಾಗಲು ಹೇಗೆ ಸಾಧ್ಯ ಎಂದು ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಮತ್ತೊಮ್ಮೆ ಸ್ವಪಕ್ಷೀಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಶುಕ್ರವಾರ ಸಂಜೆ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು, ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜನರಿಂದ ಆಯ್ಕೆಯಾಗಿರುವ ನನಗೆ ನನ್ನ ಜನರು ಸಂಕಷ್ಟದಲ್ಲಿದ್ದಾಗ ಅವರ ಹಿತ್ಕಕಾಗಿ ಧ್ವನಿ ಎತ್ತುವುದು ನನ್ನ ಧರ್ಮ. ಜನರ ಹಿತಕ್ಕಾಗಿ ನಾನು ಧ್ವನಿ ಎತ್ತುತ್ತಲೇ ಇರುತ್ತೇನೆ. ಇಂತ ಸಂದರ್ಭದಲ್ಲಿ ಯಾರು, ಯಾರಿಗೆ, ಏನೆಲ್ಲ ದೂರು ನೀಡಿ ಪತ್ರ ಬರೆಯುತ್ತಾರೋ ಬರೆಯಲಿ. ನಮ್ಮ ಕ್ಷೇತ್ರಕ್ಕೆ ಅನ್ಯಾಯವಾದರೆ ನಾವು ಕೇಳುವವರೆ. ಅದು ಸಿಎಂ ಆದರೂ ಸರಿ, ಯಾರಾದರೂ ಸರಿ ಧ್ವನಿ ಎತ್ತಲು ಸಿದ್ಧ ಎಂದು ಪುನರುಚ್ಛರಿಸಿದ್ದಾರೆ.
ಅತೀವೃಷ್ಟಿ-ಪ್ರವಾಹ ಸಂತ್ರಸ್ತ ಉತ್ತರ ಕರ್ನಾಟಕ ಜನರಿಗೆ 10 ಸಾವಿರ ರೂ. ನೀಡಿದರೆ, ದಕ್ಷಿಣ ಕರ್ನಾಟಕಕ್ಕೆ 25 ಸಾವಿರ ರೂ. ನೀಡಿದ್ದಾರೆ. ದುರಂತ ಹಾಗೂ ದುರ್ದೈವದ ಸಂಗತಿ ಎಂದರೆ ನಮ್ಮ ಭಾಗದಿಂದಲೇ ಆಯ್ಕೆಯಾಗಿರುವ ಮಂತ್ರಿಗಳು ದಕ್ಷಿಣ ಕರ್ನಾಟಕ ಓಡಾಡಿ ಸಂತ್ರಸ್ತರಿಗೆ ಪರಿಹಾರ ಹಂಚುತ್ತಿದ್ದಾರೆ. ನಮ್ಮ ಭಾಗಕ್ಕೆ ಆಗಿರುವ ಅನ್ಯಾಯ ಪ್ರಶ್ನಿಸುತ್ತಿಲ್ಲ. ಇದನ್ನು ಪ್ರಶ್ನಿಸುವ ನನ್ನ ಹೇಳಿಕೆಯನ್ನೇ ಕೆಲವರು ಪಕ್ಷ ವಿರೋಧಿ ಎಂದು ಬಿಂಬಿಸಲು ಮುಂದಾಗಿದ್ದಾರೆ. ಇಂಥವರ ಕುತಂತ್ರಕ್ಕೆ ನಾನು ಅಂಜುವುದಿಲ್ಲ ಎಂದು ಪಕ್ಷದಲ್ಲಿರುವ ತಮ್ಮ ವಿರೋಧಿಗಳಿಗೆ ತಿರುಗೇಟು ನೀಡಿದ್ದಾರೆ.
ನನ್ನ ಹೋರಾಟದ ಫಲವಾಗಿಯೇ ನಗರದ ಅಭಿವೃದ್ಧಿಗೆ 125 ಕೋಟಿ ರೂ. ಹಾಗೂ ಜಿಲ್ಲೆಗೆ 195 ಕೋಟಿ ರೂ. ಅನುದಾನ ಬಂದಿದೆ. ರಾಜ್ಯದ ಎಲ್ಲ ಪಾಲಿಕೆಗಳಿಗೆ 1300 ಕೋಟಿ ಎಲ್ಲ ಪಾಲಿಕೆಗಳಿಗೆ ಸಿಕ್ಕಿದೆ. ನಗರದ ಅಭಿವೃದ್ಧಿಗಾಗಿ ಹಲವು ಬಾರಿ ಮುಖ್ಯಮಂತ್ರಿಗಳನ್ನೇ ಭೇಟಿ ಮಾಡಿ ಮನವಿ ಮಾಡಿದ್ದರೂ ಅನುಮೋದನೆ ಸಿಕ್ಕಿರಲಿಲ್ಲ. ನಾನು ಧ್ವನಿ ಎತ್ತಿದ್ದರಿಂದ ಹಾಗೂ ಈ ಕುರಿತು ನನ್ನ ಹೋರಾಟದ ಫಲವಾಗಿ ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಿಗೆ ಅನುದಾನ ಸಿಕ್ಕಿದೆ ಎಂದು ವಿವರಿಸಿದರು.
ನಾನು ಮಂತ್ರಿ ಮಾಡಿರೆಂದು ಯಾರ ಬಳಿಯೂ ಕೇಳಿಲ್ಲ, ಬದಲಾಗಿ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಕೇಳಿದ್ದೇನೆ. ಸಂಕಷ್ಟದಲ್ಲಿರುವ ಜನರ ನೆರವಿಗೆ ಬನ್ನಿ ಎಂದು ಕೇಳಿದ್ದೇನೆ, ಅಭಿವೃದ್ಧಿ ಬಗ್ಗೆ ಮಾತನಾಡಿದರೆ ಪಕ್ಷ ವಿರೋಧಿ ಎಂದರೆ ಅದೊಂದು ದುರ್ದೈವದ ಸಂಗತಿ ಎಂದರು.