Advertisement

ಸರ್ಕಾರದಿಂದ ಕಲ್ಯಾಣದ ದೇವರಿಗೂ ಅನ್ಯಾಯ: ಪಾಟೀಲ

09:54 AM Feb 06, 2022 | Team Udayavani |

ಕಲಬುರಗಿ: ರಾಜ್ಯ ಸರ್ಕಾರ ಕಲ್ಯಾಣ ನಾಡಿನ ಜನತೆಗೆ ಅನ್ಯಾಯ ಮಾಡಿದ್ದಲ್ಲದೇ ಈಗ ದೇವರುಗಳಿಗೂ ಅನ್ಯಾಯ ಮಾಡಿದೆ ಎಂದು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷ ಎಂ.ಎಸ್‌. ಪಾಟೀಲ ನರಿಬೋಳ ಟೀಕಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿ ಭಾಗ ಹಾಗೂ ದಕ್ಷಿಣ ಕರ್ನಾಟಕದ ದೇಗುಲಗಳ ಅಭಿವೃದ್ಧಿಗೆ ಕೋಟ್ಯಂತರ ರೂ ಅನುದಾನ ಬಿಡುಗಡೆ ಮಾಡಿರುವ ಸರ್ಕಾರ ಈಗ ಕಲ್ಯಾಣ ನಾಡಿನ ದೇವರುಗಳಿಗೆ ಅನ್ಯಾಯ ಮಾಡುವ ಮೂಲಕ ಬರೆ ಎಳೆದಿದೆ. ಆದರೆ ಇದರ ವಿರುದ್ಧ ಪ್ರಶ್ನಿಸದ ಕಲ್ಯಾಣ ಕರ್ನಾಟಕದ ಬಿಜೆಪಿ ಜನಪ್ರತಿನಿ ಧಿಗಳು ರಾಜೀನಾಮೆ ನೀಡಿ ಮನೆಗೆ ಹೋಗಬೇಕು ಎಂದು ಆಗ್ರಹಿಸಿದರು.

ರಾಜ್ಯಾದ್ಯಂತ ಮುಜರಾಯಿ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ದೇವಾಲಯಗಳ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರವು ದೈವ ಸಂಕಲ್ಪ ಯೋಜನೆ ಜಾರಿಗೆ ತಂದಿದೆ. ಪ್ರಸಕ್ತ ಯೋಜನೆಯಡಿ ಇಲಾಖೆಯು ಉದ್ದೇಶಪೂರ್ವಕವಾಗಿ ಕಲ್ಯಾಣ ಕರ್ನಾಟಕದ ಬಹುತೇಕ ದೇವಾಲಯಗಳನ್ನು ನಿರ್ಲಕ್ಷಿಸಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ಈ ಉದ್ದೇಶಕ್ಕಾಗಿ ಒಟ್ಟು 1163.61 ಕೋಟಿ ರೂ. ಅನುದಾನವನ್ನು ಮೀಸರಿಸಿದ್ದು, ಕೇವಲ ಮೈಸೂರು, ಮಂಡ್ಯ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ದೇವಾಲಯಗಳನ್ನು ಗಮನದಲ್ಲಿಟ್ಟುಕೊಂಡು ಅನುದಾನ ನಿಗದಿಪಡಿಸಲಾಗಿದೆ.

ಕೇವಲ ನಾಮ್‌ ಕಾ ವಾಸ್ತೆ ಎಂಬಂತೆ ಕೊಪ್ಪಳ ಜಿಲ್ಲೆಯ ಹುಲಗಿ ಗ್ರಾಮದ ಹುಲಿಗೆಮ್ಮ ದೇವಾಲಯಕ್ಕೆ 46 ಕೋಟಿ ರೂ. ಅನುದಾನ ತೆಗೆದಿರಿಸಲಾಗಿದೆ. ಈ ಮೂಲಕ ಬಿಜೆಪಿ ಪ್ರಾಬಲ್ಯವಿರುವ ಜಿಲ್ಲೆಗಳನ್ನು ಮಾತ್ರ ಯೋಜನೆಯಡಿ ಆಯ್ಕೆ ಮಾಡಿಕೊಳ್ಳಲಾಗಿದೆ. ಹಾಗೆ ನೋಡಿದರೆ, ಮೈಸೂರಿನ ಶ್ರೀ ಚಾಮುಂಡೇಶ್ವರಿ ದೇವಾಲಯ, ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಗಳು ಅತಿ ಹೆಚ್ಚು ಆದಾಯ ಗಳಿಕೆಯ ದೇವಾಲಯಗಳು ಎಂದು ಇಡೀ ಜಗತ್ತಿಗೆ ಗೊತ್ತಿದೆ.

Advertisement

ಆದಾಗ್ಯೂ, ಈ ದೇವಾಲಯಗಳಿಗೆ ಅನುಕ್ರಮವಾಗಿ 102 ಕೋಟಿ ರೂ. ಹಾಗೂ 340 ಕೋಟಿ ರೂ. ಅನುದಾನ ಮೀಸಲಿರಿಸುವ ಮೂಲಕ ಸರ್ಕಾರ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯತ್ನಿಸುತ್ತಿರುವುದು ಬಹಿರಂಗವಾಗಿ ಎದ್ದು ಕಾಣುತ್ತಿದೆ. ಐತಿಹಾಸಿಕ ಸವದತ್ತಿ ಯಲ್ಲಮ್ಮ ದೇವಾಲಯಕ್ಕೆ ಅತಿ ಹೆಚ್ಚು ಆದಾಯ ಇದ್ದರೂ, .47.48 ಕೋಟಿ ರೂ. ಅನುದಾನ ನೀಡುವ ಮೂಲಕ ಕಲ್ಯಾಣ ಕರ್ನಾಟಕದ ಪ್ರಸಿದ್ಧ ದೇವಾಲಯಗಳಾಗಿರುವ ದಂಡಗುಂಡ ಬಸವೇಶ್ವರ ದೇವಲ ಗಾಣಗಾಪುರದ ದತ್ತ ದೇವಾಲಯ, ಘತ್ತರಗಿಯ ಭಾಗ್ಯವಂತಿ ದೇವಾಲಯ, ಸನ್ನತಿಯ ಐತಿಹಾಸಿಕ ಚಂದ್ರಲಾಂಬ ದೇವಾಲಯ, ಕಾಳಗಿಯ ನೀಲಕಂಠೇಶ್ವರ ದೇವಾಲಯಗಳನ್ನು ನಿರ್ಲಕ್ಷಿಸಲಾಗಿದೆ. ಈ ಮೂಲಕ ಕಲ್ಯಾಣ ಕರ್ನಾಟಕ ಭಾಗದ ಕುರಿತು ಇರುವ ತಾರತಮ್ಯ ಧೋರಣೆಯನ್ನು ರಾಜ್ಯ ಸರ್ಕಾರ ತೋರಿಸಿಕೊಟ್ಟಿದೆ ಎಂದು ವಾಗ್ಧಾಳಿ ನಡೆಸಿದರು.

ಪ್ರಮುಖವಾಗಿ ರಾಜ್ಯ ಸರಕಾರವು ಮುಜರಾಯಿ ಇಲಾಖೆಯನ್ನು ಬಳಸಿಕೊಂಡು ನಡೆಸುತ್ತಿರುವ ರಾಜಕೀಯ ತಂತ್ರಗಾರಿಕೆ ನಿಲ್ಲಿಸಿ, ತಕ್ಷಣ ಕಲ್ಯಾಣ ಕರ್ನಾಟಕ ಭಾಗದ ಐತಿಹಾಸಿಕ ಸುಕ್ಷೇತ್ರಗಳನ್ನು ದೈವ ಸಂಕಲ್ಪ ಯೋಜನೆ ಅಡಿ ಸೇರ್ಪಡೆ ಮಾಡಿ 1000 ಕೋಟಿ ರೂ. ಅನುದಾನ ಘೋಷಿಸಬೇಕು ಎಂದು ಆಗ್ರಹಿಸಿದರು. ಲಕ್ಷ್ಮೀಕಾಂತ ಸ್ವಾದಿ, ತಾತಾಗೌಡ ಪಾಟೀಲ ನಾಲ್ಕುಚಕ್ರ ತಂಡದ ಮಾಲಾ ದಣ್ಣೂರ್‌, ಮಾಲಾ ಕಣ್ಣಿ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next