ಮಂಡ್ಯ: ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗಲೇ ಕಾವೇರಿ, ಮಹದಾಯಿ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕಾಂಗ್ರೆಸ್ ನಾಯಕರನ್ನು ಕುಟುಕಿದರು.
ನಗರದ ಹೊರವಲಯದ ಖಾಸಗಿ ಸಮುದಾಯ ಭವನದಲ್ಲಿ ನಡೆದ ಜನತಾ ಜಲಧಾರೆ ಕಾರ್ಯಕ್ರಮದ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ನೀರಿಗಾಗಿ ಕಾಂಗ್ರೆಸ್ ಮಾಡಿರುವ ಹಾಗೂ ಇದೀಗ ಮಾಡುತ್ತಿರುವ ಹೋರಾಟದ ಬಗ್ಗೆ ಜನರಿಗೆ ಗೊತ್ತಿದೆ. ಇದೀಗ ಅಧಿಕಾರ ಹಿಡಿಯಲು ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಮಾಡುತ್ತಿರುವುದು ರಾಜ್ಯದ ಜನತೆಗೆ ಗೊತ್ತಿರದ ವಿಚಾರವೇನಲ್ಲ ಎಂದು ಹೇಳಿದರು.
ರಾಜ್ಯಕ್ಕೆ ನೀರಿನ ವಿಚಾರದಲ್ಲಿ ಅನ್ಯಾಯವಾದಾಗ ಜನರ ಪರ ನಿಂತಿದ್ದು ಪ್ರಾದೇಶಿಕ ಪಕ್ಷ ಜೆಡಿಎಸ್. ನಾನು ಸಂಸತ್‌ನಲ್ಲಿ ನೀರಿನ ಬಗ್ಗೆ ಹೋರಾಟ ಮಾಡಿದರೆ, ನಮ್ಮ ಪಕ್ಷದ ಮುಖಂಡರು ಬೀದಿಗಿಳಿದು ಹೋರಾಡಿದ್ದಾರೆ. ಸಂಸತ್‌ನಲ್ಲಿ ರಾಜ್ಯದ ಜನರಿಗೆ ನ್ಯಾಯ ಒದಗಿಸಲು ಶಕ್ತಿ ಮೀರಿ ಹೋರಾಡಿದ್ದೇನೆ ಎಂದು ಹೇಳಿದರು.
ಕಾವೇರಿ, ಮಹದಾಯಿ, ಕೃಷ್ಣಾ ಸೇರಿದಂತೆ ನದಿ ನೀರು ಹಂಚಿಕೆ ವಿಚಾರ ಬಂದಾಗ ಹಿಂದಿನಿಂದಲೂ ರಾಜ್ಯಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಲೇ ಬಂದಿದೆ. ಮುಂದೆ ಇದು ಮುಂದುವರೆಯಬಾರದೆಂದು ಜೆಡಿಎಸ್ ದೃಢ ನಿಲುವು ಕೈಗೊಂಡು ಹೋರಾಟ ನಡೆಸುತ್ತಿದ್ದು, ಜಲಧಾರೆ ಯಶಸ್ಸಿಗೆ ಪ್ರತಿಯೊಬ್ಬರೂ ಸಹಕರಿಸಿ ಎಂದು ಮನವಿ ಮಾಡಿದರು.
ಶಾಸಕ ಸಿ.ಎಸ್.ಪುಟ್ಟರಾಜು ಮಾತನಾಡಿ, ೨೦೨೩ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ಕ್ಕೆ ಕನಿಷ್ಟ ೧೨೩ ಸ್ಥಾನ ಕೊಟ್ಟು ಸ್ವತಂತ್ರವಾಗಿ ಅಧಿಕಾರ ನೀಡಿ. ನೆಲ, ಜಲ, ಭಾಷೆ ವಿಚಾರದಲ್ಲಿ ಪಕ್ಷ ನಿಮ್ಮ ಪರ ಇರಲಿದೆ. ಮಂಡ್ಯ ಜಿಲ್ಲೆಯ ಮೇಲೆ ದೇವೇಗೌಡರಿಗೆ ವಿಶೇಷ ಕಾಳಜಿ ಇದ್ದು, ಅವರ ನೆಲ, ಜಲ, ಭಾಷೆಯ ಹೋರಾಟಕ್ಕೆ ನಿಮ್ಮ ಆಶೀರ್ವಾದ ಇರಬೇಕು. ಜೆಡಿಎಸ್ ಅನ್ನು ಬೆಂಬಲಿಸಬೇಕೆಂದು ಕರೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಶಾಸಕ ಎಂ.ಶ್ರೀನಿವಾಸ್, ಜಿಲ್ಲಾಧ್ಯಕ್ಷ ಡಿ.ರಮೇಶ್, ನಗರಸಭೆ ಅಧ್ಯಕ್ಷ ಎಚ್.ಎಸ್.ಮಂಜು, ಉಪಾಧ್ಯಕ್ಷೆ ಇಶ್ರತ್‌ಫಾತೀಮಾ, ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ, ದಕ್ಷಿಣ ಪದವೀಧರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಚ್.ಕೆ.ರಾಮು, ತಾಲೂಕು ಅಧ್ಯಕ್ಷ ತಿಮ್ಮೇಗೌಡ, ಜಿಪಂ ಮಾಜಿ ಸದಸ್ಯ ಯೋಗೇಶ್, ನಗರಸಭೆ ಸದಸ್ಯೆ ಮಂಜುಳಾ ಉದಯಶಂಕರ್, ಎಸ್ಸಿ, ಎಸ್ಟಿ ವಿಭಾಗದ ಜಿಲ್ಲಾಧ್ಯಕ್ಷ ಸಾತನೂರು ಜಯರಾಂ, ಉಪಸ್ಥಿತರಿದ್ದರು.