ಹಾವೇರಿ: ನೆರೆ ಸಂತ್ರಸ್ತರಿಗೆ ಮನೆ ಹಾನಿ ಪರಿಹಾರ ಹಂಚಿಕೆಯಲ್ಲಿ ತಾರತಮ್ಯ ಮಾಡಿ, ಅರ್ಹರಿಗೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾ ಘಟಕ ನೇತೃತ್ವದಲ್ಲಿ ದೇವಗಿರಿ ಗ್ರಾಮದ ನೂರಾರು ಸಂತ್ರಸ್ತರು ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು.
ಅತಿವೃಷ್ಟಿಯಿಂದ ಗ್ರಾಪಂ ವ್ಯಾಪ್ತಿಯ ದೇವಗಿರಿ ಹಾಗೂ ದೇವಗಿರಿ ಯಲ್ಲಾಪುರ ಗ್ರಾಮಗಳಲ್ಲಿ ಬಿ ಕೆಟಗರಿಯ 231, ಸಿ ಕೆಟಗರಿಯ 69 ಮನೆಗಳು ಬಿದ್ದಿವೆ ಎಂದು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಈ ವರದಿಯನ್ನು ಗ್ರಾಪಂ ಕಚೇರಿಯಲ್ಲಿ ಪ್ರಕಟಿಸುವಂತೆ ವಿನಂತಿಸಿದರೂ ಪಿಡಿಒ ಪ್ರಕಟಿಸಲಿಲ್ಲ. ಇದೀಗ ನಾವೇ ಅದನ್ನು ಪತ್ತೆ ಮಾಡಿದ್ದು, ಅದರಲ್ಲಿ ಅನರ್ಹರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಸಂತ್ರಸ್ತರು ದೂರಿದರು.
ಡಿ.24 ರಂದು ಗ್ರಾಮ ಪಂಚಾಯಿತಿ ಕಾರ್ಯಾಲಯದ ಮುಂದೆ ಗ್ರಾಮ ಸಂತ್ರಸ್ಥರೆಲ್ಲರೂ ಸೇರಿ ಬೆಳಗ್ಗೆ 9 ಗಂಟೆಯಿಂದ ಧರಣಿ ನಡೆಸಿದರೂ ಯಾರೂ ಬಂದು ಸಮಸ್ಯೆ ಆಲಿಸಲಿಲ್ಲ. ಮಧ್ಯಾಹ್ನ ವೇಳೆ ತಹಸೀಲ್ದಾರರು ಧರಣಿ ಸ್ಥಳಕ್ಕೆ ಖುದ್ದಾಗಿ ಆಗಮಿಸಿ ಸಮಸ್ಯೆಗಳಿಗೆ ಸ್ಪಂದಿಸಿ ಗ್ರಾಮ ಲೆಕ್ಕಾಧಿಕಾರಿಗಳು, ಎಂಜಿನಿಯರ್, ಪಿಡಿಒ ಬೇರೆಯರವನ್ನು ಕಳುಹಿಸಿ ಮರು ಪರಿಶೀಲನೆಯನ್ನು ಮಾಡಲು ಕ್ರಮ ಕೈಗೊಳ್ಳುತ್ತೇನೆ ಎಂದು ಆಶ್ವಾಸನೆ ನೀಡಿದ್ದರು. ಆದರೆ, ಈ ವರೆಗೂ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಪಿಡಿಒ, ತಲಾಟಿ, ಎಂಜಿನಿಯರ್, ತಲಾಟಿ ಸಹಾಯಕ ಸೇರಿ ಶ್ರೀಮಂತರನ್ನೇ ಪರಿಹಾರ ಪಟ್ಟಿಯಲ್ಲಿ ಸೇರಿಸಿದ್ದಾರೆ. ಪಟ್ಟಿಯಲ್ಲಿರುವ ಅನೇಕರಿಗೆ ಆರ್‌ಸಿಸಿ ಮನೆಗಳಿವೆ. ಅವರ ಹಳೆಯ ಮನೆಗಳು ಬಿದ್ದು, ಬಹುಕಾಲವಾಗಿದೆ. ಅಲ್ಲಿ ಯಾರು ವಾಸವಾಗಿಲ್ಲ. ಆದರೂ ಅವರನ್ನೆಲ್ಲ ಮನೆ ಕಳೆದುಕೊಂಡವರು ಎಂದು ನಮೂದಿಸಿ ಪರಿಹಾರ ನೀಡಿದ್ದಾರೆ.
ಈ ಅನ್ಯಾಯವನ್ನು ತಡೆಯವವರೇ ಇಲ್ಲದಂತಾಗಿದೆ. ಬಡವರು ಮನೆ ಬಿದ್ದ ಪರಿಹಾರ ಕೇಳಿದರೆ, ನಿಮಗೆ ಸರ್ಕಾರದಿಂದ 5 ಲಕ್ಷ ರೂ. ಬರುವಂತೆ ಮಾಡುತ್ತೇವೆ. ನಮಗೆ ಒಂದು ಲಕ್ಷ ರೂ. ಕೊಡುತ್ತೀರಾ ಎಂದು ಕೇಳುತ್ತಿದ್ದಾರೆ ಎಂದರು. ಕೂಡಲೇ ಜಿಲ್ಲಾ ಧಿಕಾರಿಗಳು, ತಹಸೀಲ್ದಾರರು ದೇವಗಿರಿ ಮತ್ತು ದೇವಗಿರಿ ಯಲ್ಲಾಪುರ ಗ್ರಾಮದ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.