ಬೆಂಗಳೂರು: ಐಪಿಎಲ್ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ. ತಂಡಗಳೆಲ್ಲ ಹುರಿಗೊಳ್ಳಬೇಕಾದ ಈ ಹೊತ್ತಿನಲ್ಲಿ ಆಟಗಾರರು ಗಾಯದ ಸಮಸ್ಯೆಯಿಂದಲೇ ಸುದ್ದಿಯಾಗುತ್ತಿದ್ದಾರೆ. ಇದಕ್ಕೆ ಆರ್‌ಸಿಬಿ ಕೂಡ ಹೊರತಲ್ಲ.
ತಂಡದ ಅಗ್ರ ಕ್ರಮಾಂಕದ ಬಿಗ್ ಹಿಟ್ಟಿಂಗ್ ಬ್ಯಾಟರ್ ರಜತ್ ಪಾಟೀದಾರ್ ಗಾಯಾ ಳಾಗಿದ್ದು, ಇವರ ಸೇವೆ ಕೂಟದ ಮೊದಲರ್ಧ ಲಭಿಸುವುದು ಕಷ್ಟ ಎನ್ನಲಾಗಿದೆ.
ಹಾಗೆಯೇ ಆಸ್ಟ್ರೇಲಿಯನ್ ವೇಗಿ ಜೋಶ್ ಹೇಝಲ್‌ವುಡ್ ಕೂಡ ಗಾಯದಿಂದ ಚೇತರಿಸಿಕೊಂಡಿಲ್ಲ. ಇವರು ಐಪಿಎಲ್‌ನಲ್ಲಿ ಆಡುವುದೇ ಅನು ಮಾನ ಎಂಬ ಸ್ಥಿತಿಯಲ್ಲಿದ್ದಾರೆ.
29 ವರ್ಷದ ರಜತ್ ಪಾಟೀದಾರ್ ಕಳೆದ ಸೀಸನ್‌ನಲ್ಲಿ ಉತ್ತಮ ನಿರ್ವಹಣೆ ತೋರಿದ ಕ್ರಿಕೆಟಿಗ. ಸದ್ಯ ಅವರು ಬೆಂಗಳೂರಿನ ಎನ್‌ಸಿಎಯಲ್ಲಿ ಪುನಶ್ಚೇತನ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಚೇತರಿಕೆಗೆ ಎಷ್ಟು ಸಮಯ ಬೇಕೆಂಬುದು ತಿಳಿದಿಲ್ಲ.
ಪಾಟೀದಾರ್ ಕಳೆದ ವರ್ಷದ ಮೆಗಾ ಹರಾಜಿನಲ್ಲಿ ಮಾರಾಟಗೊಂಡಿ ರಲಿಲ್ಲ. ಆದರೆ ವಿಕೆಟ್ ಕೀಪರ್ ಲವ್‌ನಿತ್ ಸಿಸೋಡಿಯಾ ಗಾಯಾಳಾದ ಕಾರಣ ಬದಲಿ ಆಟಗಾರನಾಗಿ ಆರ್‌ಸಿಬಿ ಕ್ಯಾಂಪ್ ಸೇರಿದ್ದರು. ಕೂಟದ ಚರಿತ್ರೆಯಲ್ಲಿ ಅತೀ ವೇಗದ ಶತಕ ಬಾರಿಸಿದ ಭಾರತೀಯನೆಂಬ ಹಿರಿಮೆ ಪಾಟೀದಾರ್ ಆವರದಾಗಿತ್ತು.
ಜೋಶ್ ಹೇಝಲ್‌ವುಡ್ ಅವರನ್ನು ಕಳೆದ ಮೆಗಾ ಹರಾಜಿನಲ್ಲಿ 7.75 ಕೋಟಿ ರೂ.ಗೆ ಖರೀದಿಸಲಾಗಿತ್ತು. ಆದರೆ ಅವರಿನ್ನೂ ಸ್ನಾಯುರಜ್ಜು ಸೆಳೆತದಿಂದ ಬಳಲುತಿದ್ದು, ಕೂಟದಲ್ಲಿ ಪಾಲ್ಗೊಳ್ಳುತ್ತಾರೋ ಇಲ್ಲವೋ ಎಂಬುದು ಇನ್ನೂ ಖಾತ್ರಿಯಾಗಿಲ್ಲ. ಇವರಿಬ್ಬರೂ ಗೈರಾದರೆ ಅದು ಆರ್‌ಸಿಬಿಗೆ ಬಲವಾದ ಹಿನ್ನಡೆಯಾಗುವುದರಲ್ಲಿ ಅನುಮಾನವಿಲ್ಲ.