ಚೆನ್ನೈ: ಗಂಜಿ ಬೇಯಿಸುತ್ತಿದ್ದ ಬೃಹತ್ ಪಾತ್ರೆಯೊಳಗೆ ಬಿದ್ದು ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಮದುರೈಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಮುತು ಕುಮಾರ್ ಎಂದು ಗುರುತಿಸಲಾಗಿದೆ. ಈ ಘಟನೆ ಜುಲೈ 2ರಂದು ನಡೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಶತ ಕೋಟಿ ದಾಟಿದ ‘ವಿಕ್ರಾಂತ್ ರೋಣ’ ಗಳಿಕೆ: ತೆಲುಗು ಅಭಿಮಾನಿಗಳಿಗೆ ಧನ್ಯವಾದ ಹೇಳಿದ ಕಿಚ್ಚ
ಗಂಜಿ ಬೇಯುತ್ತಿದ್ದ ಪಾತ್ರೆಯೊಳಗೆ ಬಿದ್ದು, ಶೇ.65ರಷ್ಟು ದೇಹದ ಭಾಗ ಸುಟ್ಟು ಹೋಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ (ಜುಲೈ02) ಸಾವನ್ನಪ್ಪಿರುವುದಾಗಿ ವರದಿ ವಿವರಿಸಿದೆ. ಇಡೀ ಘಟನೆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಆಟಿ ವೆಲ್ಲಿ ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ದೇವರನ್ನು ಗೌರವಿಸುವ ನಿಟ್ಟಿನಲ್ಲಿ ತಮಿಳುನಾಡಿನಾದ್ಯಂತ ದೊಡ್ಡ ಪಾತ್ರೆಯಲ್ಲಿ ಗಂಜಿಯನ್ನು ಬೇಯಿಸಿ ಸಾರ್ವಜನಿಕರಿಗೆ ವಿತರಿಸುವುದು ಇಲ್ಲಿನ ವಾಡಿಕೆಯಾಗಿದೆ.
ಈ ಹಿನ್ನೆಲೆಯಲ್ಲಿ ಶುಕ್ರವಾರ ಮದುರೈಯ ಪಳಂಗನಾಥಂನ ಮುತು ಮರಿಯಮ್ಮಂ ದೇವಸ್ಥಾನದಲ್ಲಿ ಭಕ್ತರಿಗಾಗಿ ಬೃಹತ್ ಪಾತ್ರೆಯಲ್ಲಿ ಗಂಜಿಯನ್ನು ಬೇಯಿಸುತ್ತಿದ್ದರು. ಆಗ ಮುತು ಕುಮಾರ್ ಗಂಜಿ ಬೇಯಿಸಲು ಸಹಾಯ ಮಾಡುತ್ತಿದ್ದು, ದಿಢೀರನೆ ತಲೆ ಸುತ್ತು ಬಂದು ಗಂಜಿ ಬೇಯುತ್ತಿದ್ದ ಪಾತ್ರೆಯೊಳಗೆ ಬಿದ್ದುಬಿಟ್ಟಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಅಕ್ಕಪಕ್ಕದಲ್ಲಿ ನೆರೆದಿದ್ದ ಜನರು ಕೂಡಲೇ ಮುತು ಕುಮಾರ್ ನೆರವಿಗೆ ಆಗಮಿಸಿದ್ದರು, ಆದರೆ ದೊಡ್ಡ ಪಾತ್ರೆಯಿಂದ ಮೇಲಕ್ಕೆತ್ತಲು ಸಾಧ್ಯವಾಗಲಿಲ್ಲ. ಕೊನೆಗೆ ಪಾತ್ರೆಯನ್ನು ಅಡ್ಡ ಕೆಡವಿ ಮುತು ಕುಮಾರ್ ಅವರನ್ನು ರಕ್ಷಿಸಲಾಗಿತ್ತು. ಕೂಡಲೇ ರಾಜಾಜಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ತೀವ್ರವಾದ ಸುಟ್ಟ ಗಾಯಗಳಿಂದಾಗಿ ಚಿಕಿತ್ಸೆ ಫಲಕಾರಿಯಾಗದೆ ಮುತು ಕುಮಾರ್ ಸಾವನ್ನಪ್ಪಿರುವುದಾಗಿ ವರದಿ ವಿವರಿಸಿದೆ. ಈ ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ವರದಿ ತಿಳಿಸಿದೆ.