ಲಕ್ನೋ: ಸರ್ಕಾರಿ ಕಟ್ಟಡವೊಂದರ ಸಮೀಪ ತೀವ್ರ ಗಾಯಗೊಂಡಿದ್ದ 13 ವರ್ಷದ ಬಾಲಕಿಯೊಬ್ಬಳು ಸಹಾಯ ಮಾಡುವಂತೆ ಅಂಗಲಾಚುತ್ತಿದ್ದರೆ, ನೆರೆದಿದ್ದ ಜನರ ಗುಂಪು ಮೊಬೈಲ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡುವುದರಲ್ಲಿ ನಿರತರಾಗಿದ್ದ ಘಟನೆ ಉತ್ತರಪ್ರದೇಶದ ಕನ್ನೌಜ್ ನಲ್ಲಿ ನಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:ಬಿಜೆಪಿಯ ಶಿಸ್ತು ಖಾಕಿ ಚಡ್ಡಿ ಹಾಕಿಕೊಳ್ಳುವುದಕ್ಕೆ ಮಾತ್ರ ಮೀಸಲು: ಕಾಂಗ್ರೆಸ್ ಟೀಕೆ
ತಲೆ, ಕೈ, ಕಾಲುಗಳಲ್ಲಿ ರಕ್ತ ಸುರಿಯುತ್ತಿದ್ದು, ಕಟ್ಟಡದ ಮುಂಭಾಗದಲ್ಲಿ ಕುಸಿದು ಬಿದ್ದಿದ್ದ ಬಾಲಕಿ ಸಹಾಯ ಮಾಡುವಂತೆ ಬೇಡಿಕೊಳ್ಳುತ್ತಿದ್ದರು ಕೂಡಾ ಜನರು ಮಾತ್ರ ವಿಡಿಯೋ ರೆಕಾರ್ಡ್ ಮಾಡುವುದರಲ್ಲಿ ಬ್ಯುಸಿಯಾಗಿರುವ ದೃಶ್ಯ ವಿಡಿಯೋದಲ್ಲಿದೆ.
ಪೊಲೀಸರಿಗೆ ಮಾಹಿತಿ ನೀಡಿದ್ದೀಯಾ ಎಂದು ಒಬ್ಬಾತ ಕೇಳುತ್ತಿದ್ದು, ಮತ್ತೊಬ್ಬ ಪೊಲೀಸ್ ಅಧಿಕಾರಿಯ ನಂಬರ್ ಕೊಡಿ ಎಂದು ಕೇಳುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಆದರೆ ಯಾರೊಬ್ಬರು ಆಕೆಯ ನೆರವಿಗೆ ಧಾವಿಸಿಲ್ಲ. ಕೊನೆಗೆ ಪೊಲೀಸ್ ಕಾನ್ಸ್ ಟೇಬಲ್ ಬಂದು ಬಾಲಕಿಯನ್ನು ಎರಡು ಕೈಯಲ್ಲಿ ಎತ್ತಿಹಿಡಿದುಕೊಂಡು ರಿಕ್ಷಾದತ್ತ ಓಡುತ್ತಿರುವುದು ಮತ್ತೊಂದು ವಿಡಿಯೋದಲ್ಲಿ ದಾಖಲಾಗಿದೆ.
ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಕುನ್ವಾರ್ ಅನುಪಮ್ ಸಿಂಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಾಲಕಿ ಭಾನುವಾರ ಹಣ ಹಾಕಿ ಇಡುವ ಹುಂಡಿ ಖರೀದಿಸಲು ಅಂಗಡಿಗೆ ಬಂದಿದ್ದು, ನಂತರ ಆಕೆ ಮನೆಗೆ ವಾಪಸ್ ಬಂದಿರಲಿಲ್ಲವಾಗಿತ್ತು ಎಂದು ಪಿಟಿಐ ವರದಿ ತಿಳಿಸಿದೆ. ಒಬ್ಬ ಯುವಕ ಆಕೆ ಜತೆ ಬಂದಿರುವುದು ಅತಿಥಿಗೃಹದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಆತನ ಗುರುತನ್ನು ಇನ್ನಷ್ಟೇ ಪತ್ತೆ ಹಚ್ಚಬೇಕಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ.
ಬಾಲಕಿಯ ಮೇಲೆ ದೈಹಿಕ ದೌರ್ಜನ್ಯ ನಡೆದಿದೆಯೇ ಇಲ್ಲವೇ ಎಂಬ ಬಗ್ಗೆ ವೈದ್ಯಕೀಯ ವರದಿ ಬಂದ ಬಳಿಕ ತಿಳಿದು ಬರಲಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದು, ಘಟನೆ ಬಗ್ಗೆ ಬಾಲಕಿಯ ಮನೆಯವರು ನೀಡಿದ ದೂರಿನ ಆಧಾರದ ಮೇಲೆ ಎಫ್ ಐಆರ್ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.