Advertisement

ಇನ್ನಂಜೆ –ಹೇರೂರು : ರಸ್ತೆಗೆ ಇನ್ನೂ ಸಿಕ್ಕಿಲ್ಲ ಡಾಮರು ಭಾಗ್ಯ !

01:00 AM Feb 27, 2019 | Team Udayavani |

ಕಾಪು : ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿ ನಿರ್ಮಾಣಗೊಂಡಿರುವ ನಾಲ್ಕೂವರೆ ಕಿ.ಮೀ ಉದ್ದದ ಇನ್ನಂಜೆಯಿಂದ ಕಲ್ಲುಗುಡ್ಡೆ – ಹೇರೂರು ರಸ್ತೆಯ ನಡುವಿನ 120 ಮೀಟರ್‌ ರಸ್ತೆಗೆ ಡಾಮರು ಭಾಗ್ಯವಿಲ್ಲದೇ ಜಲ್ಲಿ ಹಾಕಿದ ಸ್ಥಿತಿಯಲ್ಲೇ ಉಳಿದುಬಿಟ್ಟಿದ್ದು ವಾಹನ ಸವಾರರು ಸುಗಮ ಸಂಚಾರಕ್ಕೆ ಪರದಾಡುವಂತಾಗಿದೆ. 

Advertisement

2014ರಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿ ಈ ರಸ್ತೆ ನಿರ್ಮಾಣಗೊಂಡಿತ್ತು. ಆದರೆ ಈ ರಸ್ತೆಯು ಅರ್ಧದವರೆಗೆ ಸಾಗಿ ಬರುವಾಗ ಸಿಗುವ ರವೀಂದ್ರ ಶೆಟ್ಟಿ ಎಂಬವರ ಮನೆ ಬಳಿಯ 120 ಮೀಟರ್‌ ಉದ್ದದ ಪ್ರದೇಶದಲ್ಲಿ ಡಾಮರೀಕರಣ ನಡೆಸದೇ ಹಾಗೆಯೇ ಉಳಿಸಲಾಗಿತ್ತು. ರಸ್ತೆ ಪೂರ್ಣಗೊಂಡಿದ್ದರೂ, ಅದರ ನಿರ್ವಹಣಾ ಅವಧಿ ಮುಗಿದರೂ ಕೂಡಾ ಸಣ್ಣ ಅಂತರದ ಪ್ರದೇಶದಲ್ಲಿನ ಅಪೂರ್ಣ ಕಾಮಗಾರಿ ಮಾತ್ರಾ ಹಾಗೆಯೇ ಉಳಿದು ಹೋಗಿದೆ. 

ರಸ್ತೆ ಡಾಮರೀಕರಣಗೊಳ್ಳದ ಪರಿಣಾಮ ರಸ್ತೆ ನಿರ್ಮಾಣ ಸಂದರ್ಭದಲ್ಲಿ ಹಾಕಲಾಗಿದ್ದ ಜಲ್ಲಿ ಕಲ್ಲುಗಳು ಕಿತ್ತು ಹೋಗಿ ಸಂಚಾರಕ್ಕೆ ಭಾರೀ ಅಪಾಯವನ್ನು ತಂದೊಡ್ಡಲಾರಂಭಿಸಿವೆ. ಸಣ್ಣ ಅಂತರದಲ್ಲಿನ ರಸ್ತೆಯ ಅಪೂರ್ಣ ಕಾಮಗಾರಿಯಿಂದಾಗಿ ದ್ವಿಚಕ್ರ ವಾಹನ ಸವಾರರ‌ಂತೂ ಬಹಳಷ್ಟು ಪರದಾಡುವಂತಾಗಿದೆ. ಮಳೆಗಾಲದಲ್ಲಿ ಹೊಂಡದ ಭೀತಿಯಾದರೆ, ಉಳಿದ ಸಮಯದಲ್ಲಿ ಧೂಳು ಮತ್ತು ಜಲ್ಲಿಗೆ ಹೆದರಿಕೊಂಡೇ ವಾಹನ ಚಲಾಯಿಸುವ ಅನಿವಾರ್ಯತೆ ಇಲ್ಲಿನ ಜನರದ್ದಾಗಿದೆ. 

ಡಾಮರೀಕರಣಕ್ಕೆ ತಡೆ ಯಾಕೆ ?  
ರಸ್ತೆ ಅಭಿವೃದ್ಧಿಯ ಸಂದರ್ಭ ಎಂಜಿನಿಯರ್‌ಗಳು ಮತ್ತು ಗುತ್ತಿಗೆದಾರರು ಎರಡೂ ಭಾಗದಲ್ಲಿ ಒಂದೇ ರೀತಿಯಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ನಡೆಸಿ ಒಂದು ಭಾಗದಲ್ಲಿ ಹೆಚ್ಚು, ಮತ್ತೂಂದು ಭಾಗದಲ್ಲಿ ಕಡಿಮೆ ಎಂಬಂತೆ ರಸ್ತೆ ಅಗೆಯಲಾಗಿತ್ತು. ಇದರಿಂದ ಕುಪಿತಗೊಂಡಿದ್ದ ಸ್ಥಳೀಯರಲ್ಲಿ ಒಂದು ಭಾಗದವರು ಕಾಮಗಾರಿಗೆ ಆಕ್ಷೇಪ ವ್ಯಕ್ತಪಡಿಸಿ, ಕಾಮಗಾರಿ ಮುಂದುವರಿಕೆಗೆ ತಡೆಯೊಡ್ಡಿದ್ದರು. ಆ ಕಾರಣದಿಂದ ಸುಮಾರು 120ಮೀಟರ್‌ ಉದ್ದದ ರಸ್ತೆಗೆ ಡಾಮರೀಕರಣಗೊಂಡಿರಲಿಲ್ಲ. 

ಗ್ರಾ.ಪಂ. ವತಿಯಿಂದ ತೇಪೆ ಕಾಮಗಾರಿ 
ಈ ರಸ್ತೆಯು ಮಧ್ಯ ಭಾಗದಲ್ಲಿ ಜಲ್ಲಿ ಮಿಶ್ರಿತವಾಗಿ ಹಾಗೆಯೇ ಉಳಿದು ಬಿಟ್ಟಿರುವುದನ್ನು ಸರಿಪಡಿಸಿಕೊಡುವಂತೆ ಸ್ಥಳೀಯರು ಹಲವು ಬಾರಿ ಗ್ರಾಮ ಪಂಚಾಯತ್‌ಗೆ ಒತ್ತಡ ಹೇರಿದ್ದರು. ಇದನ್ನು ಮನಗಂಡು ಗ್ರಾಮ ಪಂಚಾಯತ್‌ ವತಿಯಿಂದಲೂ ರಸ್ತೆಗೆ ತಾತ್ಕಲಿಕ ತೇಪೆ ಹಾಕುವ ಕಾಮಗಾರಿ ನಡೆಸಿದ್ದು, ಆದರೆ ತೇಪೆ ಕಾಮಗಾರಿ ಕೂಡಾ ಮಳೆಗಾಲದಲ್ಲಿ ಮತ್ತೆ ಮತ್ತೆ ಕಿತ್ತು ಹೋಗಿ ಸಂಚಾರಕ್ಕೆ ಮತ್ತಷ್ಟು ಅನಾನುಕೂಲತೆಯಾಗುತ್ತಿದೆ. 

Advertisement

ಶಾಸಕರ ಅನುದಾನದಿಂದ ರಸ್ತೆ ಅಭಿವೃದ್ಧಿಗೆ ಚಿಂತನೆ 
ರಸ್ತೆ ನಿರ್ಮಾಣಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದವರ ಜೊತೆಗೆ ಸ್ಥಳೀಯರನ್ನು ಸೇರಿಸಿಕೊಂಡು ಈಗಾಗಲೇ ಮಾತುಕತೆ ನಡೆಸಲಾಗಿದೆ. ಮಾತುಕತೆಯ ವೇಳೆ ರಸ್ತೆ ಪೂರ್ಣಗೊಳಿಸಲು ಸಹಕರಿಸಲುವುದಾಗಿ ಅವರು ಒಪ್ಪಿಗೆ ನೀಡಿದ್ದಾರೆ. ಅದಕ್ಕೆ ಅನುಗುಣವಾಗಿ ಕಾಪು ಶಾಸಕ ಲಾಲಾಜಿ ಆರ್‌. ಮೆಂಡನ್‌ ಅವರ ಬಳಿ ಅನುದಾನಕ್ಕಾಗಿ ಮನವಿ ಮಾಡಲಾಗಿದ್ದು, ಅವರು 3 ಲಕ್ಷ ರೂ. ಅನುದಾನವನ್ನು ಒದಗಿಸಿದ್ದಾರೆ. ರಸ್ತೆ ಅಭಿವೃದ್ಧಿ ಕಾಮಗಾರಿಯ ಬಗ್ಗೆ ಈಗಾಗಲೇ ಇಂಜಿನಿಯರ್‌ ಅವರ ಮೂಲಕ ತಾಂತ್ರಿಕ ಮಂಜೂರಾತಿಗೆ ಹೋಗಿದ್ದು, ತಾಂತ್ರಿಕ ಮಂಜೂರಾತಿ ದೊರಕಿದ ಕೂಡಲೇ ಕಾಮಗಾರಿ ಪ್ರಾರಂಭಗೊಳ್ಳಲಿದೆ. 
-ಮಾಲಿನಿ ಶೆಟ್ಟಿ , ಉಪಾಧ್ಯಕ್ಷರು, ಇನ್ನಂಜೆ ಗ್ರಾಮ ಪಂಚಾಯತ್‌
 

Advertisement

Udayavani is now on Telegram. Click here to join our channel and stay updated with the latest news.

Next