ವಿಜಯಪುರ: ತಮ್ಮ ಗ್ರಾಮದಲ್ಲಿ ಇಸ್ಪೀಟ್ ಆಡುತ್ತಿರುವ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ ಯುವಕನನ್ನೇ ಠಾಎಗೆ ಹೊತ್ತೊಯ್ದು ಥಳಿಸಿರುವ ಪೊಲೀಸರು, ಯುಕನ ಬಾಯಿಗೆ ಬೂಟು ಇಟ್ಟು ಸಮಾನವಾಗಿ ದೌರ್ಜನ್ಯ ಎಸಗಿ, ನಂತರ ಚರಂಡಿಗೆ ಎಸೆದ ಘಟನೆ ಇಂಡಿ ತಾಲೂಕಿನಿಂದ ವರದಿಯಾಗಿದೆ.
ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದ ಸಂತೋಷ ನಂದ್ಯಾಳ ಎಂಬ ಯುವಕನೇ ಪೊಲೀಸರ ದೌರ್ಜನ್ಯದಿಂದ ಬಾಧಿತ ವ್ಯಕ್ತಿ.
ಶುಕ್ರವಾರ ಸಂಜೆ ಹಿರೇಮಸಳಿ ಗ್ರಾಮದಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿರುವ ಕುರಿತು ಗ್ರಾಮದ ಬೀಟ್ ಪೊಲೀಸ್ ಮಹೇಶ್ ಪವಾರ್ ಅವರಿಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದ್ದ.
ಇದನ್ನೂ ಓದಿ : ತವರು ಜಿಲ್ಲೆಗೆ ತೆಲಂಗಾಣ ಐಪಿಎಸ್ ಅಧಿಕಾರಿ ವಿಶ್ವನಾಥ ಸಜ್ಜನರ ನೆರವು
ಇದನ್ನು ಆಧರಿಸಿ ಗ್ರಾಮಕ್ಕೆ ಬಂದ ಪೊಲೀಸ್ ಪೇದೆ ಮಾಹಿತಿ ನೀಡಿದ ಯುವಕನನ್ನೇ ಥಳಿಸಿ ಠಾಣೆಗೆ ಕರೆದೊಯ್ದಿದ್ದಾನೆ. ಠಾಣೆಯಲ್ಲಿ ಪಿಎಸ್ಐ ಮಾಳಪ್ಪ ಪೂಜಾರಿ ಮಾಹಿತಿದಾರ ಮಹೇಶ ಪವಾರ ಮತ್ತು ಖಾಸಗಿ ವ್ಯಕ್ತಿ ಎನ್ನಲಾದ ಎಲಿಗಾರ್ ಅವರು ಸೇರಿಕೊಂಡು ಯುವಕನಿಗೆ ಥಳಿಸಿದ್ಧಾರೆ. ಅಲ್ಲದೇ ಪಿಎಸ್ಐ ಮಾಳಪ್ಪ ಪೂಜಾರಿ ಅವರು ಯುವಕನ ಬಾಯಿಗೆ ಬೂಟು ಇಟ್ಟಿದ್ದಾರೆ ಎಂದು ಥಳಿತಕ್ಕೊಳಗಾದ ಯುವಕ ಆರೋಪಿಸಿದ್ದಾನೆ.
ಈ ಕುರಿತು ಪ್ರಕರಣ ದಾಖಲಿಸಲು ಬಾಧಿತ ಯುಕನ ತಂದೆ ಪೊಲೀಸ್ ಠಾಣೆಗೆ ಹೋದಾಗ ಪೊಲೀಸರು ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ದೂರು ಪಡೆಯದೇ ಕಳಿಸಿದ್ದಾರೆ ಎಂದು ಬಾಧಿತ ಯುವಕನ ತಂದೆ ತಿಳಿಸಿದ್ದಾರೆ.