ತೆಲಂಗಾಣ : ಕೇರಳದಲ್ಲಿ ಪಟಾಕಿಯಿಟ್ಟು ಗರ್ಭಿಣಿ ಆನೆಯನ್ನು ಕೊಂದ ಘಟನೆ ಮಾಸುವ ಮುನ್ನವೇ ಆಹಾರದ ಆಶ್ರಯವನ್ನು ಹುಡುಕಿ ಬಂದ ಕೋತಿಯನ್ನು ಅಮಾನವೀಯವಾಗಿ ಗಲ್ಲಿಗೇರಿಸಿದ ಘಟನೆ ತೆಲಂಗಾಣದ ಖಮ್ಮಂ ಜಿಲ್ಲೆಯ ಅಮ್ಮಪಲೆಂ ಗ್ರಾಮದಲ್ಲಿ ನಡೆದಿದೆ.
ಹಸಿವಿನಿಂದ ಆಹಾರವನ್ನು ಹುಡುಕಿ ಬಂದ ಕೋತಿಯನ್ನು ಹೊಂಚು ಹಾಕಿದ ಹಳ್ಳಿಗರ ಗುಂಪೊಂದು ಕೋತಿಯನ್ನು ಸೆರೆ ಹಿಡಿದು ಅದನ್ನು ಹಿಂಸಾತ್ಮಕವಾಗಿ ಥಳಿಸಿದ ಜನರು, ನಂತರ ಹಗ್ಗದಿಂದ ಕೋತಿಯನ್ನು ಕಟ್ಟಿ ಮನಬಮದಂತೆ ಹೊಡೆದು ಘಾಸಿಗೊಳಿಸಿದ್ದಾರೆ.ಹಗ್ಗದ ಸಹಾಯದಿಂದ ಕೋತಿಯನ್ನು ಗಲ್ಲಿಗೇರಿಸಿದ ಹೇಯ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.
ಕೋತಿಯನ್ನು ಹಗ್ಗದಿಂದ ಗಲ್ಲಿಗೇರಿಸಿದ್ದು ಮಾತ್ರವಲ್ಲದೆ. ಅದು ಬಿಡುಗಡೆಯ ಭಿಕ್ಷೆಯನ್ನು ಬೇಡುತ್ತಾ ತನ್ನ ತೋಳುಗಳನ್ನು ಹಾರಿಸುವಾಗ ಅಲ್ಲಿರುವ ಜನರ ಮನಸ್ಸು ಒಂಚೂರು ಕುಂದದೆ ಕೋತಿಯ ಮೇಲೆ ದಾಳಿ ಮಾಡಲು ನಾಯಿಗಳನ್ನು ಬಿಟ್ಟು ತಮಾಷೆ ನೋಡಿದ್ದಾರೆ. ಇದು ಟ್ವಿಟರ್ ನಲ್ಲಿ ನೆಟ್ಟಿಗರ ಆಕ್ರೋಶ ನೆತ್ತಿಗೇರುವಂತೆ ಮಾಡಿದೆ.
“ಇದು ಅಮಾನವೀಯ, ಕ್ರೂರ ಮತ್ತು ನಾಚಿಕೆಗೇಡಿನ ಕೃತ್ಯ. ಮಾನವರು ಎಲ್ಲಿಗೆ ಹೋಗುತ್ತಿದ್ದಾರೆಂದು ತಿಳಿಯುತ್ತಿಲ್ಲ” ಎಂದು ಟ್ವಿಟರ್ ಬಳಕೆದಾರರೊಬ್ಬರು ಬರೆದಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ, ಅಮ್ಮಪಲೆಂ ನಿವಾಸಿ ವೆಂಕಟೇಶ್ವರ ರಾವ್ ಮತ್ತು ಇತರ ಆರೋಪಿಗಳ ಮೇಲೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಅರಣ್ಯ ಅಧಿಕಾರಿಗಳು ಆರೋಪ ಮಾಡಿ ಬಂಧಿಸಿದ ಬಳಿಕ ಜಾಮೀನಿನ ಆಧಾರದ ಮೇಲೆ ಬಿಡುಗಡೆಗೊಳಿಸಲಾಗಿದೆ.
ರಾವ್ ತನ್ನ ಮನೆಗೆ ಆಹಾರ ಹುಡುಕಿ ಬಂದಿದ್ದ ಕೋತಿಯನ್ನು ನೋಡಿ ಅದನ್ನು ಕೋಲಿನಿಂದ ಹೊಡೆದಿದ್ದ. ನಂತರ ತನ್ನ ಸ್ನೇಹಿತನ ಸಹಾಯದಿಂದ ಮರಕ್ಕೆ ನೇತು ಹಾಕಿದ್ದರೆಂದು ವರದಿಯಾಗಿದೆ.