ಮೂಡುಬಿದಿರೆ: ತಾಲೂಕು ವ್ಯಾಪ್ತಿಯ ಮೂಡುಬಿದಿರೆ ಮೈನ್ ಶಾಲೆಯಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ಸುಮಾರು 153 ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯಾಗಿದೆ. ಶತಮಾನೋತ್ತರ ಸುವರ್ಣ ಮಹೋತ್ಸವ ಆಚರಿಸಿದ ಶಾಲೆ ಯಲ್ಲಿ ಇದೀಗ ಮೂಲಸೌಕರ್ಯ ಸಹಿತ ಹಲವಾರು ಸಮಸ್ಯೆಗಳು ಸವಾಲಾಗಿ ಪರಿಣಮಿಸಿದೆ.
ಮಹಾತ್ಮಾ ಗಾಂಧೀಜಿ ಜನಿಸಿದ ವರ್ಷವೇ (1869- 153ನೇ ವರ್ಷ) ಮೂಡು ಬಿದಿರೆಯಲ್ಲಿ ವಿದ್ಯಾಭಿಮಾನಿ ಚೌಟರ ಅರಮನೆಯವರಿಂದಾಗಿ ಪ್ರಾರಂಭವಾಗಿ, ಬೋರ್ಡ್ ಎಲಿಮೆಂಟರಿ ಶಾಲೆಯಾಗಿ ಮುಂದುವರಿದು ಬಳಿಕ 1970ರಲ್ಲಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಾಗಿ ಮೇಲ್ದರ್ಜೆಗೇರಿದ “ಮೂಡುಬಿದಿರೆ ಮೈನ್ ಶಾಲೆ’ ಹದಿನೈದು ವರ್ಷಗಳಿಂದ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಾಗಿ ಮಾರ್ಪಾಡಾಯಿತು. ಒಂದು ಕಾಲಕ್ಕೆ ಸುಮಾರು 720 ವಿದ್ಯಾರ್ಥಿಗಳಿದ್ದ ಶಾಲೆಯೂ ಇದಾಗಿತ್ತು.
ಆಂಗ್ಲ ಮಾಧ್ಯಮ ಶಿಕ್ಷಣದ ವ್ಯಾಮೋಹ ದಿಂದಾಗಿ ಕ್ರಮೇಣ ಈ ಶಾಲೆಯ ಮಕ್ಕಳ ಸಂಖ್ಯೆಯಲ್ಲಿ ( ಎಲ್ಲ ಸರಕಾರಿ ಶಾಲೆಗಳಲ್ಲಿ ಆದಂತೆ) ತೀರಾ ಕುಸಿತ ಕಂಡಿದ್ದು ನಿಜ. ಆದರೆ ಶಾಲಾಭಿವೃದ್ಧಿ ಸಮಿತಿ ಹಾಗೂ ಹಳೆ ವಿದ್ಯಾರ್ಥಿ ಸಂಘದವರ ಸತತ ಪ್ರಯತ್ನದಿಂದಾಗಿ ಈ ಶಾಲೆಯ ಮಕ್ಕಳ ಸಂಖ್ಯೆಯಲ್ಲಿ ನಿಧಾನವಾಗಿ ಏರಿಕೆ ಕಾಣಲು ಪ್ರಾರಂಭವಾಯಿತು. ಉಚಿತ ಪುಸ್ತಕ, ಸಮವಸ್ತ್ರ, ಶೂ, ಬರವಣಿಗೆ ಸಾಮಗ್ರಿಗಳು, ಉತ್ತಮ, ಪೌಷ್ಟಿಕ ಆಹಾರದೊಂದಿಗೆ ಗುರುತಿನ ಚೀಟಿ ಇದಲ್ಲದೆ ಆವಶ್ಯಕತೆ ಇರುವಲ್ಲಿ ಉಚಿತ ಆಟೋರಿಕ್ಷಾ ಸೌಲಭ್ಯ ಹೀಗೆ ಹತ್ತಾರು ಬಗೆಯ ಆಕರ್ಷಣೆಗಳೊಂದಿಗೆ ಗುಣಮಟ್ಟದ ಶಿಕ್ಷಣ ಮೂಡುಬಿದಿರೆ ಮೈನ್ ಶಾಲೆಯಲ್ಲಿ ದೊರೆಯುತ್ತಿರುವ ಬಗ್ಗೆ ಸಾರ್ವಜನಿಕವಾಗಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಶಿಕ್ಷಕರ ಕೊರತೆ :
ಒಂದೊಮ್ಮೆ 148ಕ್ಕೆ ಇಳಿದ ವಿದ್ಯಾರ್ಥಿಗಳ ಸಂಖ್ಯೆ ಇದೀಗ 300 ದಾಟಿದೆ. ಇದಕ್ಕೆ ಪೂರಕವಾಗಿ ಹೇಳಿಕೊಳ್ಳುವ ಮೂಲ ಸೌಕರ್ಯಗಳಿಲ್ಲದೆ ಸಮಸ್ಯೆಯಾಗಿದೆ. 1ರಿಂದ 8ನೇ ತರಗತಿಯವರೆಗೆ ಕನ್ನಡ ಮಾಧ್ಯಮ, 6, 7, 8ನೇ ತರಗತಿಗಳು ಆಂಗ್ಲ ಮಾಧ್ಯಮ ಮತ್ತು ಇದೀಗ ಒಂದನೇ ತರಗತಿಯಿಂದಲೇ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಈ ಎಲ್ಲ ತರಗತಿಗಳಿಗೆ ಈಗಿನ ಸ್ಥಿತಿಯಲ್ಲಿ ಶಾಲೆಯಲ್ಲಿ ಕಂಡುಬಂದಿರುವುದು ಕೇವಲ 7 ಮಂದಿ ಮಾತ್ರ. ಇವರಲ್ಲಿ ಡಿಎಡ್ ಆದ ಮುಖ್ಯಶಿಕ್ಷಕಿ ಮತ್ತು ಮೂವರು ಸಹಶಿಕ್ಷಕಿಯರಿದ್ದಾರೆ. ವಿಶೇಷವಾಗಿ ಎಂಎಸ್‌ಸಿ ಬಿಎಡ್ (ಪ್ರೌಢಶಾಲಾ ಪದವೀಧರ ಸಹಶಿಕ್ಷಕಿ), ಎಂಎ ಬಿಎಡ್ (ಪದವೀಧರ ಪ್ರಾಥಮಿಕ ಶಾಲಾಶಿಕ್ಷಕಿ) ಅರ್ಹತೆಯ ಶಿಕ್ಷಕರು ಮತ್ತು ಓರ್ವ ದೈಹಿಕ ಶಿಕ್ಷಣ ಶಿಕ್ಷಕಿ ಇದ್ದಾರೆ. ಆದರೆ ಏರುತ್ತಿರುವ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರು ಇಲ್ಲಿಲ್ಲದಿರುವುದು ದೊಡ್ಡ ಕೊರತೆಯಾಗಿ ಪರಿಣಮಿಸಿದೆ.
ಕಟ್ಟಡದ ಕೊರತೆ :
1974ರಲ್ಲಿ ಶತಮಾನೋತ್ಸವ ಕಟ್ಟಡವಾಗಿ ನಿರ್ಮಾಣವಾದ, ಪಂಜೆ ಮಂಗೇಶರಾವ್ ಕಲಾಮಂಟಪ ಸಹಿತ ತರಗತಿ ಕೋಣೆಗಳಿರುವ ಕಟ್ಟಡ ತೀರಾ ನಾದುರಸ್ತಿಯಲ್ಲಿದೆ. ಹೊಸ ಕಟ್ಟಡ ನಿರ್ಮಾಣಕ್ಕಾಗಿ 10 ಲಕ್ಷ ರೂ. ಮಂಜೂರಾಗಿದ್ದರೂ ಇನ್ನೂ ಕಾಮಗಾರಿ ಆರಂಭವಾಗಿಲ್ಲ. ಇದಷ್ಟೇ ಸಾಲದು. ಈ ಮೊತ್ತವನ್ನು ಏರಿಸಿ ದೊಡ್ಡ ಮಟ್ಟದಲ್ಲಿ ಕಟ್ಟಡವನ್ನು ನಿರ್ಮಿಸಬೇಕಾಗಿದೆ.
ಪೀಠೊಪಕರಣ, ಶೌಚಾಲಯ ಸಮಸ್ಯೆ :
ಈಗಿರುವ ಮಕ್ಕಳ ಸಂಖ್ಯೆಗನುಗುಣವಾಗಿ ಹೆಚ್ಚಿನ ಪೀಠೊಪಕರಣಗಳನ್ನು ಒದಗಿಸಬೇಕಾಗಿದೆ. ಈಗಿರುವ ಶೌಚಾಲಯಗಳು ತೀರಾ ಅರೆಬರೆ ಕಾಮಗಾರಿಯಿಂದ ಕೂಡಿದ್ದು, ವೈಜ್ಞಾನಿಕವಾದ, ಎಲ್ಲ ಸೌಕರ್ಯಗಳಿರುವ ಶೌಚಾಲ ಯಗಳನ್ನು ನಿರ್ಮಿಸ ಬೇಕಾಗಿದೆ.
ಈಶಾನ್ಯ ದಿಕ್ಕಿನಲ್ಲಿದ್ದ ಒಳ್ಳೆಯ ನೀರಿನ ಬಾವಿಯನ್ನು ಮುಚ್ಚಿ ಅದರ ಮೇಲೆಯೇ ಶೌಚಾಲಯ ನಿರ್ಮಿಸಲಾಗಿದೆ. ಸದ್ಯ ಪುರಸಭೆಯ ನಳ್ಳಿನೀರು ಪೂರೈಕೆಯಾಗುತ್ತಿದೆ.
- ಕಳೆದ ವರ್ಷ 154 ವಿದ್ಯಾರ್ಥಿಗಳು
- ಈ ವರ್ಷ 307 ವಿದ್ಯಾರ್ಥಿಗಳು
ಇಲ್ಲಿನ ಶಿಕ್ಷಕರು ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳೆಂದೇ ಪರಿಭಾವಿಸಿ ಉತ್ತಮ ಶಿಕ್ಷಣ ನೀಡಲು ಉತ್ಸಾಹದಿಂದಿದ್ದಾರೆ. ಆದರೆ ಕಟ್ಟಡ, ಪೀಠೊಕರಣ, ಶೌಚಾಲಯ ಮತ್ತಿತರ ಬೇಡಿಕೆಗಳಿಗೆ ಸರಕಾರ ಮಾತ್ರವಲ್ಲ ಈ ಶಾಲೆಯ ಹಳೆ ವಿದ್ಯಾರ್ಥಿಗಳಾಗಿ ಜೀವನದಲ್ಲಿ ಉತ್ತಮ ಸ್ಥಾನಮಾನಗಳಿಸಿದವರು, ಉದ್ಯಮಿಗಳು ಮುಂದೆ ಬಂದು ಸಹಕಾರ ನೀಡಬೇಕಾಗಿ ಮನವಿ ಮಾಡುತ್ತಿದ್ದೇನೆ.
-ಅನಸೂಯಾ, ಮುಖ್ಯೋಪಾಧ್ಯಾಯಿನಿ
-ಧನಂಜಯ ಮೂಡುಬಿದಿರೆ