ಶಿರಹಟ್ಟಿ: ಸ್ಥಳೀಯ ಪಟ್ಟಣ ಪಂಚಾಯಿತಿಗೆ ಬೆದರೆ ಬಡಾವಣೆ, ಸಿದ್ದರಾಮೇಶ್ವರ ನಗರ ಹಾಗೂ ಶಿವಲಿಂಗಪ್ಪ ಕಪ್ಪತ್ತನವರ ಬಡಾವಣೆಗಳಿಂದ ಎಲ್ಲ ರೀತಿಯ ತೆರಿಗೆ ಸಂದಾಯವಾಗಬೇಕು. ಆದರೆ, ಅಲ್ಲಿಯ ನಿವಾಸಿಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಮುಂದಾಗದ ಪಪಂ ಕಾರ್ಯವೈಖರಿಗೆ ಜನ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.
ಕಳೆದ ಎರಡು ದಶಕಗಳಿಂದ ಆ ಬಡಾವಣೆಗಳಲ್ಲಿ ವಾಸಿಸುತ್ತಿರುವ ಕುಟುಂಬಗಳ ನರಕ ಯಾತನೆಗೆ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಸ್ಪಂದಿಸುತ್ತಿಲ್ಲ. ಶುದ್ಧ ಕುಡಿಯುವ ನೀರು, ಚರಂಡಿ, ಉತ್ತಮ ರಸ್ತೆ, ಬೀದಿ ದೀಪ ಇವುಗಳನ್ನು ಹೊಂದುವುದು ಪ್ರತಿಯೊಬ್ಬ ಪ್ರಜೆಯ ಸಾಮಾನ್ಯ ಹಕ್ಕಾಗಿದೆ. ಈ ಹಕ್ಕನ್ನು ಪ್ರತಿಯೊಬ್ಬ ಪ್ರಜೆ ಹೊಂದಬೇಕು ಎಂಬುವುದಕ್ಕಾಗಿ ಸರ್ಕಾರ ಅನುದಾನವನ್ನು ನೀರನಂತೆ ವ್ಯಯಿಸುತ್ತಿದೆ. ಆದರೆ ಆ ಬಡಾವಣೆಯ ಜನರು ಮಾತ್ರ ಇವುಗಳಿಂದ ಕಳೆದ 20 ವರ್ಷಗಳಿಂದ ವಂಚಿತರಾಗಿದ್ದಾರೆ. ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುವಂತೆ ಅಲ್ಲಿಯ ನಿವಾಸಿಗಳು ಲಿಖೀತವಾಗಿ, ಮೌಕಿಖವಾಗಿ ಪಪಂ ಕಚೇರಿಗೆ, ಆಡಳಿತ ಮಂಡಳಿಗೆ ಮನವಿ ಸಲ್ಲಿಸುತ್ತ ಬಂದಿದ್ದರು ಕೂಡ ಯಾವುದೇ ಪ್ರಯೋಜನವಾಗಿಲ್ಲ ಎಂಬುವುದು ಜನರ ಅಂತರಾಳದ ಧ್ವನಿಯಾಗಿದೆ.
ತೆರಿಗೆ ಮಾತ್ರ ಬೇಕು: ವಾರ್ಡ್ ನಂ.18ಕ್ಕೆ ಒಳಪಡುವ ಸಿದ್ದರಾಮೇಶ್ವರ ನಗರ, ಬೆದರೆ ಬಡಾವಣೆ ಹಾಗೂ ಶಿವಲಿಂಗಪ್ಪ ಕಪ್ಪತ್ತನವರ ಬಡಾವಣೆಗಳಲ್ಲಿ ಸೂಮಾರು 500ಕ್ಕೂ ಹೆಚ್ಚು ಮನೆಗಳಿದ್ದು, ಪ್ರತಿ ವರ್ಷ ಪಪಂ ನಿಗದಿಪಡಿಸಿರುವ ಎಲ್ಲ ರೀತಿಯ ತೆರಿಗೆಗಳನ್ನು ಇಲ್ಲಿನ ನಿವಾಸಿಗಳು ತಪ್ಪದೆ ಕಟ್ಟುತ್ತಾ ಬರುತ್ತಿದ್ದಾರೆ. ಜನರಿಂದ ತೆರಿಗೆ ಭರಿಸಿಕೊಳ್ಳುವ ಪಪಂ ಪ್ರತಿ ವರ್ಷ ಸಿದ್ಧಪಡಿಸುವ ಕ್ರಿಯಾಯೋಜನೆಯಲ್ಲಿ ಮಾತ್ರ ಈ ಎಲ್ಲ ಬಡಾವಣೆಗಳ ಅಭಿವೃದ್ಧಿಗೆ ಅನುದಾನ ಮೀಸಲಿಡುತ್ತಿಲ್ಲ ಎಂಬುವುದು ಜನರ ಅಳಲಾಗಿದೆ.
ಬಡಾವಣೆಯ ಪಕ್ಕದಲ್ಲಿಯೇ ಸರ್ಕಾರಿ ಶಾಲೆಯಿದೆ. ಅಲ್ಲದೇ, ನವೋದಯ ತರಬೇತಿ ಕೇಂದ್ರವೂ ಇದೆ. ಅಲ್ಲಿಗೆ ಮಕ್ಕಳು ಹೋಗಲು ಆಗದಷ್ಟು ರಸ್ತೆ ಹದಗೆಟ್ಟಿದ್ದು, ಬೀದಿ ದೀಪಗಳಿಲ್ಲದೇ ಇರುವುದರಿಂದ ಸಂಜೆ ವೇಳೆ ಮಕ್ಕಳು, ವೃದ್ಧರು ಸಂಚರಿಸುವುದು ಕಷ್ಟವಾಗಿದೆ.
ಜಿಲ್ಲಾಧಿಕಾರಿಗಳು ಸೂಚಿಸಿದ್ದರಂತೆ: -2018ರಲ್ಲಿ ಅಂದಿನ ಜಿಲ್ಲಾಧಿಕಾರಿ ಮನೋಜ ಜೈನ್ ಅವರು ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ, ಬಡಾವಣೆಯ ನಿವಾಸಿಗಳು ಪಟ್ಟಣ ಪಂಚಾಯಿತಿಯವರು ಪೂರೈಕೆ ಮಾಡುತ್ತಿರುವ ಅಶುದ್ಧ ನೀರನ್ನು ತೆಗೆದುಕೊಂಡು ಹೋಗಿ. ಇಂಥ ನೀರನ್ನು ನಿತ್ಯ ನಾವು ಹೇಗೆ ಕುಡಿಯಬೇಕು? ಒಮ್ಮೆ ಕಣ್ತೆರೆದು ನೋಡಿ. ನಿಮ್ಮ ಹಾಗೆ ನಾವು ಮನುಷ್ಯರೇ ಎಂದು ಅಳಲು ತೋಡಿಕೊಂಡಿದ್ದರಂತೆ. ಆಗ ಜಿಲ್ಲಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದ ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆದರೆ ನಾಲ್ಕು ವರ್ಷ ಕಳೆದರೂ ಯಾವುದೇ ಮೂಲಭೂತ ಸೌಲಭ್ಯ ಕಲ್ಪಿಸಿಲ್ಲ ಎಂದು ಶ್ರೀನಿವಾಸ ಬಾರಬರ, ಶರಣಪ್ಪ ಹರ್ತಿ, ಬಸವರಾಜ ಪೂಜಾರ, ಹನಮವ್ವ ಪೂಜಾರ, ಸಲೀಮಾ ಹಣಗಿ ಆರೋಪಿಸುತ್ತಾರೆ.
ತುರ್ತು ಮೂಲಭೂತ ಸೌಲಭ್ಯ ಕಲ್ಪಿಸಲು ಪಟ್ಟಣ ಪಂಚಾಯತಿ ಅಧಿಕಾರಿಗಳು ಮತ್ತು ಆಡಳಿತ ಮಂಡಳಿ ಕ್ರಮ ತೆಗೆದುಕೊಳ್ಳದಿದ್ದರೆ ಪಂಚಾಯತಿ ಎದುರು ಪ್ರತಿಭಟನೆ ನಡೆಸುವುದಾಗಿ ನಿವಾಸಿಗಳು ಎಚ್ಚರಿಸಿದ್ದಾರೆ.
ಪಟ್ಟಣ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಸೌಲಭ್ಯ ಕಲ್ಪಿಸಿ ಕೊಡುವಂತೆ ಚರ್ಚೆ ಮಾಡಲಾಗಿದೆ. ಬಡಾವಣೆಯ ನಿವಾಸಿಗಳು ನಾವು ಸೇರಿ ಲಿಖೀತ ಮನವಿ ಸಲ್ಲಿಸಲಾಗಿದೆ. ಎಲ್ಲ ಬಗೆಯ ತೆರಿಗೆ ಹಣವನ್ನು ಭರಣಾ ಮಾಡಲಾಗುತ್ತಿದ್ದು, ನಮ್ಮ ಬಡಾವಣೆಗಳಿಗೆ ಯಾವುದೇ ಮೂಲಭೂತ ಸೌಲಭ್ಯ ಒದಗಿಸಿಲ್ಲ. ನನಗೆ ಮತಹಾಕಿ ಆರಿಸಿ ಕಳಿಸಿದ ಜನ ನಿತ್ಯ ಛೀಮಾರಿ ಹಾಕುತ್ತಿದ್ದಾರೆ. ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ಮೂಲಭೂತ ಸೌಲಭ್ಯ ಕಲ್ಪಿಸಿಕೊಡಬೇಕು. –
ಅನಿತಾ ಬಾರಬರ, 18ನೇ ವಾರ್ಡ್ ಸದಸ್ಯೆ
-ಪ್ರಕಾಶ ಶಿ. ಮೇಟಿ