Advertisement

ಪುಣೆ ಇನ್‌ಫೋಸಿಸ್‌ ಮಹಿಳಾ ಟೆಕ್ಕಿ ಕೊಲೆ, ಸೆಕ್ಯುರಿಟಿ ಗಾರ್ಡ್‌ ಸೆರೆ

10:52 AM Jan 30, 2017 | udayavani editorial |

ಪುಣೆ : ಇಲ್ಲಿನ ಹಿಂಜವಾಡಿಯಲ್ಲಿನ ರಾಜೀವ್‌ ಗಾಂಧಿ ಇನ್‌ಫೋಟೆಕ್‌ ಪಾರ್ಕ್‌ ನಲ್ಲಿರುವ ಇನ್‌ಫೋಸಿಸ್‌ ಕಂಪೆನಿಯ ಕಾನ್ಫರೆನ್ಸ್‌  ರೂಮ್‌ ನಲ್ಲಿ ನಿನ್ನೆ ರಾತ್ರಿ 23ರ ಹರೆಯದ ಮಹಿಳಾ ಐಟಿ ಉದ್ಯೋಗಿಯ ಶವ ಪತ್ತೆಯಾಗಿರುವುದನ್ನು ಅನುಸರಿಸಿ 26ರ ಹರೆಯದ ಸೆಕ್ಯುರಿಟಿ ಗಾರ್ಡ್‌ ನನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಮಹಿಳಾ ಐಟಿ ಉದ್ಯೋಗಿಯ ಶವ ಪತ್ತೆಯಾದ ಬಳಿಕ ನಾಪತ್ತೆಯಾಗಿದ್ದ ಸೆಕ್ಯುರಿಟಿ ಗಾರ್ಡ್‌ ನನ್ನು ಮುಂಬಯಿಯಲ್ಲಿ ಪತ್ತೆ ಹಚ್ಚಿ ಬಂಧಿಸಲಾಗಿದೆ. ಆತ ಮೂಲತಃ ಅಸ್ಸಾಂ ನವನಾಗಿದ್ದಾನೆ. ಸಿಸಿಟಿವಿ ಚಿತ್ರಿಕೆಗಳು ಹಾಗೂ ಇನ್ನೂ ಕೆಲವು ಸುಳಿವುಗಳನ್ನು ಆಧರಿಸಿ ಆತನನ್ನು ಬಂಧಿಸಲಾಗಿದೆ ಎಂದು ಹಿಂಜವಾಡಿ ಪೊಲೀಸ್‌ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್‌ ಅರುಣ್‌ ವಾಯ್‌ಕರ್‌ ತಿಳಿಸಿದ್ದಾರೆ.

ಸೆಕ್ಯುರಿಟಿ ಗಾರ್ಡ್‌ ನ ಹೆಸರು ಭಾಭೇನ್‌ ಸೈಕಿಯಾ ಎಂದು ಗೊತ್ತಾಗಿದೆ. ಇನ್‌ಫೋಸಿಸ್‌ ಘಟಕದಲ್ಲಿ ಆತನನ್ನು ಸೆಕ್ಯುರಿಟಿ ಗಾರ್ಡ್‌ ಆಗಿ ನಿಯೋಜಿಸಲಾಗಿತ್ತು. ಮುಂಬಯಿಯಲ್ಲಿ ಬಂಧಿಸಲ್ಪಟ್ಟ ಆತನನ್ನುಇದೀಗ ಪುಣೆಗೆ ಕರೆತರಲಾಗುತ್ತಿದೆ ಎಂದವರು ಹೇಳಿದ್ದಾರೆ. 

ಕೊಲೆಗೀಡಾಗಿರುವ ಮಹಿಳಾ ಟೆಕ್ಕಿ ಕೇರಳದ ಮೂಲಕ ಓ ಪಿ ರಸೀಲಾ ಎಂದು ಗೊತ್ತಾಗಿದೆ. ಅಕೆಯ ಕುತ್ತಿಗೆಗೆ ಕಂಪ್ಯೂಟರ್‌ ವಯರ್‌ ಬಿಗಿದು ಮುಖಕ್ಕೆ ಬಲವಾದ ಏಟು ಕೊಟ್ಟು ಸಾಯಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿನ್ನೆ ಸಂಜೆ 5 ಗಂಟೆಯ ಸುಮಾರಿಗೆ ಈ ಕೊಲೆ ಕೃತ್ಯ ನಡೆದಿರಬಹುದು; ರಾತ್ರಿ 8 ಗಂಟೆಯ ಹೊತ್ತಿಗೆ ಕೊಲೆ ನಡೆದಿರುವ ಬಗ್ಗೆ ನಮಗೆ ಫೋನ್‌ ಕರೆ ಬಂತು ಎಂದು ಪೊಲೀಸ್‌ ಅಧಿಕಾರಿ ಹೇಳಿದ್ದಾರೆ. 

Advertisement

ಮಹಿಳಾ ಟೆಕ್ಕಿಯು ಇನ್‌ಫೋಸಿಸ್‌ ಎರಡನೇ ಹಂತದ ಕ್ಯಾಂಪಸ್‌ನಲ್ಲಿರುವ ಕಟ್ಟಡದ 9ನೇ ಮಹಡಿಯಲ್ಲಿ, ತನ್ನ ಬೆಂಗಳೂರು ತಂಡದ ಸದಸ್ಯರ ಜತೆಗೆ ಆನ್‌ಲೈನ್‌ನಲ್ಲಿ ಕಾರ್ಯನಿರತಳಾಗಿದ್ದ ವೇಳೆ ಆಕೆಯನ್ನು ಸಾಯಿಸಲಾಗಿದೆ ಎಂದು ಎಸಿಪಿ ವೈಶಾಲಿ ಜಾಧವ್‌ ಮಾನೆ ಹೇಳಿದ್ದಾರೆ. 

‘ಮಹಿಳಾ ಟೆಕ್ಕಿ ಕಾರ್ಯನಿರತಳಾಗದ್ದ ವೇಳೆ ಆ ಕಡೆಯಿಂದ ಆಕೆಯ ಮ್ಯಾನೇಜರ್‌ ಫೋನ್‌ ಕರೆ ಮಾಡುತ್ತಿದ್ದರು. ಆದರೆ ಈ ಕಡೆಯಿಂದ ಅವರಿಗೆ ಯಾವುದೇ ಉತ್ತರ ಹೋಗುತ್ತಿರಲಿಲ್ಲ. ಆಗ  ಆ ಕಡೆ ಇದ್ದವರು ಒಡನೆಯೇ ಸೆಕ್ಯುರಿಟಿ ಗಾರ್ಡ್‌ಗಳಿಗೆ ಫೋನ್‌ ಮಾಡಿದರು. ಅವರು ಬಂದು ನೋಡಿದಾಗ ಆಕೆ ಸತ್ತು ಬಿದ್ದಿರುವುದು ಗಮನಕ್ಕೆ ಬಂತು’ ಎಂದು ವೈಶಾಲಿ ಮಾನೆ ಹೇಳಿದ್ದಾರೆ. 

ಪೊಲೀಸರು ಈ ಕೊಲೆ ಕೃತ್ಯದ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ ಎಂದು ಮಾನೆ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next