ಮಹೋತ್ಸವ-2018 ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಸುಧಾಮೂರ್ತಿ ಹೆಸರನ್ನು ಸೂಚಿಸಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಕುಮಾರಸ್ವಾಮಿ ಅನುಮೋದಿಸಿದರು. ಈಗಾಗಲೇ ಕುಮಾರಸ್ವಾಮಿಯವರು ಡಾ.ಸುಧಾಮೂರ್ತಿ ಅವರೊಂದಿಗೆ ಮಾತುಕತೆ ನಡೆಸಿ ಒಪ್ಪಿಗೆ ಪಡೆದಿರುವ ಹಿನ್ನೆಲೆಯಲ್ಲಿ ಸಭೆಯಲ್ಲಿ ಬೇರಾವುದೇ ಹೆಸರುಗಳೂ ಚರ್ಚೆಗೆ ಬರಲಿಲ್ಲ ಎನ್ನಲಾಗಿದೆ.
Advertisement
ಸರಳ ದಸರಾ: ಈ ಮಧ್ಯೆ, ಕೊಡಗಿನಲ್ಲಿ ಸುರಿದ ಮಹಾ ಮಳೆಯ ಅನಾಹುತದಿಂದ ಜನತೆ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಈ ವರ್ಷ ಮೈಸೂರು ದಸರಾ ಮಹೋತ್ಸವವನ್ನು ಸಾಂಪ್ರದಾಯಿಕವಾಗಿ ಆಚರಿಸಲು ನಿರ್ಧರಿಸಲಾಗಿದೆ. ಆದರೆ, ಪ್ರವಾಸಿಗರನ್ನು ಆಕರ್ಷಿಸಲು ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸಲು ಸಭೆ ಒಪ್ಪಿಗೆ ನೀಡಿದೆ. ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಗಜಪಡೆಯ ಮೊದಲ ತಂಡದ ಆರು ಆನೆಗಳನ್ನು ಮೈಸೂರಿಗೆ ಕರೆತರಲು ಸೆ.2ರಂದು ಗಜಪಯಣ ಕಾರ್ಯಕ್ರಮ ಏರ್ಪಡಿಸಲಾಗುವುದು. ಇದೇ ಮೊದಲ ಬಾರಿಗೆ ಅರಮನೆಯಿಂದ ಬನ್ನಿಮಂಟಪ ಮೈದಾನದವರೆಗೆ ಜಂಬೂಸವಾರಿ ಮೆರವಣಿಗೆ ಸಾಗುವ ಮಾರ್ಗದಲ್ಲಿ ಬೃಹತ್ ಎಲ್‌ಇಡಿ ಪರದೆಗಳನ್ನು ಅಳವಡಿಸಿ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.