ಬೆಂಗಳೂರು: ನಗರದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಆವರಣದಲ್ಲಿ 103 ಕೋಟಿ ರೂ. ವೆಚ್ಚದಲ್ಲಿ ಇನ್ಫೋಸಿಸ್ ಫೌಂಡೇಶನ್‌ನಿಂದ ನಿರ್ಮಿಸಿರುವ 350 ಹಾಸಿಗೆಗಳ ನೂತನ ಘಟಕವನ್ನು ಬುಧವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೋಕಾರ್ಪಣೆಗೊಳಿಸಿದರು.
ಈ ಹೆಚ್ಚುವರಿ ಹಾಸಿಗೆಗಳ ಸೇರ್ಪಡೆ ಮೂಲಕ ಬೆಂಗಳೂರಿನ ಜಯದೇವ ಆಸ್ಪತ್ರೆ ಹಾಸಿಗೆಗಳ ಸಂಖ್ಯೆ 1,050ಕ್ಕೆ ಹೆಚ್ಚಳವಾಗಿದೆ. ಕಲಬುರಗಿ 350, ಮೈಸೂರು 400 ಸೇರಿ ಒಟ್ಟಾರೆ 1,800ಕ್ಕೆ ಏರಿಕೆಯಾಗಿದೆ. ಅತಿ ಹೆಚ್ಚು ಹಾಸಿಗೆಗಳು, 105 ಹೃದೋಗ ತಜ್ಞರು, ವಾರ್ಷಿಕ 40 ಸಾವಿರ ಹೃದ್ರೋಗ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ವಿಶ್ವದ ಅತಿ ದೊಡ್ಡ ಹೃದ್ರೋಗ ಸಂಸ್ಥೆ ಎಂಬ ಖ್ಯಾತಿಗೆ ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆ ಪಾತ್ರವಾಗಿದೆ.
ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ: “ಇನ್ಫೋಸಿಸ್ ಫೌಂಡೇಶನ್ ಸ್ವಯಂ ಪ್ರೇರಿತ ವಾಗಿ ಜಯದೇವ ನೂತನ ಕಟ್ಟಡ ನಿರ್ಮಾಣ ಮಾಡಿಕೊಟ್ಟು ಬಡಜನರಿಗೆ ನೆರವಾಗಿದೆ. ಇದರಲ್ಲಿ ಸರ್ಕಾರದ ಪಾತ್ರವಿಲ್ಲ, ಇದೇ ರೀತಿ ಜನ ಕಲ್ಯಾಣ ಕೆಲಸಗಳನ್ನು ಮಾಡುವವರಿಗೆ ರಾಜ್ಯ ಸರ್ಕಾರ ಎಂದಿಗೂ ಅಡ್ಡಿಯಾಗುವುದಿಲ್ಲ.
ಇದನ್ನೂ ಓದಿ:- ಕೆಆರ್‍ಎಸ್ ಸಂಪೂರ್ಣ ಭರ್ತಿ: ನಿಮಿಷಾಂಭ ದೇಗುಲದ ಬಳಿ ನದಿಗೆ ಭಕ್ತರ ಪ್ರವೇಶ ನಿರ್ಬಂಧ
ಸ್ವಯಂಪ್ರೇರಿತವಾಗಿ ಸೇವಾ ಕಾರ್ಯಕ್ಕೆ ಮುಂದಾಗುವವರಿಗೆ ಅಗತ್ಯ ಅನುಕೂಲಗಳನ್ನು ಮಾಡಿಕೊಟ್ಟು ನೆರವಿಗೆ ನಿಲ್ಲುತ್ತದೆ ಎಂದರು. ಅಮೆರಿಕದಲ್ಲಿ ಈ ಹಿಂದೆ ಆರಂಭಗೊಂಡಿದ್ದ ಒಬಾಮಾ ಕೇರ್‌ನಂತಹ ಸಾರ್ವಜನಿಕ ಆರೋಗ್ಯ ಚಿಕಿತ್ಸಾ ಯೋಜನೆಗೆ ಜಯದೇವ ಆಸ್ಪತ್ರೆ ಮಾದರಿ ಯಾಗಿದೆ. ಹೃದ್ರೋಗಕ್ಕೆ ಎಲ್ಲರಿಗೂ ತುರ್ತು ಚಿಕಿತ್ಸೆ ಬೇಕಿರುತ್ತದೆ. ಇಂತಹ ಸಂದರ್ಭದಲ್ಲಿ ಇನ್ಫೋಸಿಸ್ 350 ಹಾಸಿಗೆ ನೂತನ ಘಟಕವನ್ನು ಕೊಡುಗೆಯಾಗಿ ನೀಡಿ ಬಡವರಿಗೆ ಮಾಡಿರುವ ಮಹಾ ಉಪಕಾರ ಮಾಡಿದ್ದಾರೆ ಎಂದರು.
ಆರೋಗ್ಯ ಮೂಲಸೌಕರ್ಯಕ್ಕೆ ಆದ್ಯತೆ: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರಿಗೆ ರಾಜ್ಯದ ಆರೋಗ್ಯ ಮೂಲ ಸೌಕರ್ಯ ಉತ್ತಮಗೊಳಿಸುವ ನಿಟ್ಟಿನಲ್ಲಿ ದೂರದೃಷ್ಟಿ ಒಳಗೊಂಡ ಹೆಲ್ತ್ ವಿಷನ್ ಡಾಕ್ಯುಮೆಂಟ್ ಮಾಡಲು ಸೂಚಿಸಿದ್ದೇನೆ. ಇನ್ನು ಕೇಂದ್ರ ಸರ್ಕಾರದ ನೆರವಿನಿಂದ ಈ ವರ್ಷ 250, ಮುಂದಿನ ವರ್ಷ 250 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಉನ್ನತೀಕರಿಸಲಾಗುತ್ತಿದೆ ಎಂದರು.
ವಿಶ್ವದ ಅತಿ ದೊಡ್ಡ ಹೃದ್ರೋಗ ಸಂಸ್ಥೆ: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ಬೆಂಗಳೂರಿನ ಜಯದೇವ ಆಸ್ಪತ್ರೆ ಹಾಸಿಗೆಗಳ ಸಂಖ್ಯೆ 1,050ಕ್ಕೆ ಹೆಚ್ಚಳವಾಗಿದೆ. ವಿಶ್ವದಲ್ಲಿ ದೊಡ್ಡ ಹೃದ್ರೋಗ ಸಂಸ್ಥೆಯಾಗಿ ಹೊರಹೊಮ್ಮಿದೆ. ಕೊರೊನಾ ಸಂದರ್ಭದಲ್ಲಿ ಇನ್ಫೋಸಿಸ್ ಫೌಂಡೇಷನ್ 2ತಿಂಗಳಲ್ಲಿ 100 ಹಾಸಿಗೆ ಆಸ್ಪತ್ರೆ ನಿರ್ಮಿಸಿಕೊಟ್ಟಿತ್ತು. ಆರೋಗ್ಯ ಕ್ಷೇತ್ರಕ್ಕೆ ಇನ್ಫೋಸಿಸ್ ನೆರವಿನಿಂದ ಬಡಜನರಿಗೆ ಹೆಚ್ಚು ಅನುಕೂಲವಾಗುತ್ತಿದೆ ಎಂದರು.
ಹೃದಯ ಕಾಳಜಿ ಮಾಡಿ: ಜಿಮ್‌ನಿಂದ ಸಮಸ್ಯೆ ಇಲ್ಲ: ದೇಶದಲ್ಲಿ ಮರಣ ಹೊಂದುತ್ತಿರುವವರಲ್ಲಿ ಶೇ.24 ಮಂದಿಗೆ ಹೃದ್ರೋಗವಿದೆ. ಈ ಅಂಶಗಳನ್ನು ಅರ್ಥ ಮಾಡಿಕೊಂಡು ನಮ್ಮ ಚಟುವಟಿಕೆ ಉತ್ತಮ ವಾಗಿಟ್ಟಿಕೊಳ್ಳ ಬೇಕು. ದುಷcಟಗಳಿಂದ ದೂರವಿದ್ದು, ಆರೋಗ್ಯಕ್ಕೆ ಆದ್ಯತೆ ನೀಡಬೇಕು. ಇನ್ನು ನಟ ಪುನೀತ್ ಸಾವಿನಿಂದ ಹಲವರು ಆಸ್ಪತ್ರೆಗೆ ಬಂದು ಹೃದಯ ಪರೀ ಕ್ಷೆಗೆ ಮುಂದಾಗುತ್ತಿದ್ದಾರೆ. ಹೃದ್ರೋಗ ಕೌಟುಂಬಿಕ ಹಿನ್ನೆಲೆ ಇದ್ದರೆ ಮಾತ್ರ ಎಚ್ಚರಿಕೆ ಇರಲಿ ಎಂದರು. ಶಾಸಕಿ ಸೌಮ್ಯರೆಡ್ಡಿ ಲೋಕಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಆಸ್ಪತ್ರೆ ಆಡಳಿತ ಮಂಡಳಿ ಸದಸ್ಯರು, ಆರೋಗ್ಯ ಇಲಾಖೆ ಕಾರ್ಯದರ್ಶಿ ನವೀನ್ ರಾಜ್‌ಸಿಂಗ್, ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಸಿ. ಎನ್.ಮಂಜುನಾಥ್, ವರ್ಚುಯಲ್ ಮೂಲಕ ಇನ್ಫೋ ಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ, ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ಪಾಲ್ಗೊಂಡಿದ್ದರು.
ಸೋಮವಾರದಿಂದ ಕಾರ್ಯಾರಂಭ-
“ಇನ್ಫೋಸಿಸ್ ನಿರ್ಮಿಸಿರುವ ನೂತನ ಘಟಕವು ಸೋಮವಾರದಿಂದ ಕಾರ್ಯಾಚರಣೆ ಆರಂಭಿಸಲಿದೆ. ಅಗತ್ಯ ಸಿಬ್ಬಂದಿಗಳಿದ್ದು, ಹೊರ ಮತ್ತು ಒಳರೋಗಿಗಳ ಚಿಕಿತ್ಸೆ ಲಭ್ಯವಾಗಲಿದೆ
”.
“ಕಳೆದ ವರ್ಷದಲ್ಲಿ 12 ವರ್ಷದಲ್ಲಿ ಜಯದೇವ ಸಂಸ್ಥೆಯು ಸಾಕಷ್ಟು ಅಭಿವೃದ್ಧಿಯಾಗಿದೆ. ಅತಿ ಹೆಚ್ಚು ಹೃದ್ರೋಗ ತಜ್ಞರು, ಹಾಸಿಗೆಗಳು, ಹೃದ್ರೋಗ ಶಸ್ತ್ರಚಿಕಿತಾ ಕೊಠಡಿಗಳನ್ನು ಒಳಗೊಂಡಿದೆ. ಪ್ರತಿ ವರ್ಷ 40,000ಕ್ಕೂ ಅಧಿಕ ಹೃದ್ರೋಗ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗುತ್ತದೆ. ಪ್ರತಿ ಐದು ನಿಮಿಷಕ್ಕೆ ಒಬ್ಬ ರೋಗಿ ತುರ್ತು ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗುತ್ತಿದ್ದು, ಇನ್ಫೋಸಿಸ್ ಕೊಡುಗೆಯಿಂದ ಹಾಸಿಗೆ ಕೊರತೆ ತಗ್ಗಿ ಬಡರೋಗಿಗಳ ಚಿಕಿತ್ಸೆಗೆ ಸಾಕಷ್ಟು ಅನುಕೂಲವಾಗಲಿದೆ
.” – ಡಾ.ಸಿ.ಎನ್.ಮಂಜುನಾಥ್, ನಿರ್ದೇಶಕರು, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ.
“ಬಡ ಜನರು ಸರ್ಕಾರಿ ಆಸ್ಪತ್ರೆಗಳನ್ನೇ ಅವಲಂಬಿಸಿದ್ದಾರೆ. ಅಂತಹ ಜನರಿಗಾಗಿ ಜಯದೇವ ಸಂಸ್ಥೆ ಸಾಕಷ್ಟು ಶ್ರಮಿಸುತ್ತಿದೆ. ಆ ಸಂಸ್ಥೆ ಜತೆ ಕೈಜೋಡಿಸಿದೆವು. ನಾವು ಸಮಾಜದಿಂದ ಪಡೆದ ಹಣವನ್ನು ಸಮಾಜಕ್ಕೆ ನೀಡುತ್ತಿದ್ದು, ಇನ್ಫೋಸಿಸ್ ಫೌಂಡೇಷನ್ ಕಾರ್ಯಗಳು ನಿರಂತರವಾಗಿ ನಡೆಯುತ್ತವೆ.”
– ಸುಧಾ ಮೂರ್ತಿ, ಅಧ್ಯಕ್ಷೆ, ಇನ್ಫೋಸಿಸ್ ಫೌಂಡೇಶನ್
“ರಾಜ್ಯದ ಬಡರೋಗಿಗಳಿಗೆ ಜಯದೇವ ಆಸ್ಪತ್ರೆಯ ಸೇವೆ, ಸೌಲಭ್ಯಗಳನ್ನು ಮತ್ತಷ್ಟು ಹೆಚ್ಚಿಸಲು ಇನ್ಫೋಸಿಸ್ ಫೌಂಡೇಷನ್ ಕೈಜೋಡಿಸಿದೆ. ಡಾ.ಸಿ.ಎನ್.ಮಂಜುನಾಥ್‌ರಂಥ ವೈದ್ಯರನ್ನು ಪಡೆದಿರುವುದು ಬೆಂಗಳೂರಿನ ಜನರ ಅದೃಷ್ಟ
.” – – ಎನ್.ಆರ್.ನಾರಾಯಣ ಮೂರ್ತಿ, ಇನ್ಫೋಸಿಸ್ ಸಂಸ್ಥಾಪಕ