Advertisement

ಮನೆ ಬಾಗಿಲಿಗೆ ಸರಕಾರಿ ಸೌಲಭ್ಯಗಳ ಮಾಹಿತಿ

07:20 AM Aug 04, 2017 | Team Udayavani |

ಸರ್ವೆ ಯುವಕ ಮಂಡಲದಿಂದ ವಿನೂತನ ಕಾರ್ಯಕ್ರಮ

Advertisement

ಸವಣೂರು: ಯುವಕ ಮಂಡಲಗಳು ಕೇವಲ ಮಹಾಸಭೆ, ವಾರ್ಷಿಕೋತ್ಸವಕ್ಕೆ ಸೀಮಿತವಾಗದೆ ಸಮಾಜಮುಖೀ ಚಿಂತನೆಗೆ ಒಗ್ಗಿಕೊಂಡಾಗ ಸಮಾಜದಲ್ಲಿ ಗುಣಾತ್ಮಕ ಬದಲಾವಣೆ ಸಾಧ್ಯ ಹಾಗೂ ಜನರ ಪ್ರೀತಿ ಗೌರವಾದರಗಳಿಗೆ ಪಾತ್ರರಾಗಲು ಸಾಧ್ಯ ಎಂಬುದನ್ನು ಪುತ್ತೂರು ತಾಲೂಕಿನ ಸರ್ವೆ ಷಣ್ಮುಖ ಯುವಕ ಮಂಡಲವು ತೋರಿಸಿಕೊಟ್ಟಿದೆ. ಹಲವು ಸಮಾಜಮುಖೀ ಚಿಂತನೆಯ ಚಟುವಟಿಕೆ ನಡೆಸಿರುವ ಯುವಕ ಮಂಡಲವು ಈಗ ಮನೆಬಾಗಿಲಿಗೆ ಸರಕಾರಿ ಸೌಲಭ್ಯಗಳ ಮಾಹಿತಿ ನೀಡುವ ಕಾರ್ಯಕ್ಕೆ ಮುಂದಾಗಿದೆ.

ಹಲವು ಕಾರ್ಯಗಳು
ಈಗಾಗಲೇ ವಾರ್ಷಿಕೋತ್ಸವ, ಕ್ರೀಡೆ, ರಾಷ್ಟ್ರೀಯ ಹಬ್ಬಗಳ ಆಚರಣೆಯನ್ನು ಹೊರತುಪಡಿಸಿ ಸಮಾಜಕ್ಕೆ ಕೊಡುಗೆ ನೀಡುವ ಕೆಲಸ ಮಾಡುತ್ತಿದೆ. ಪ್ರಸಕ್ತ ವರ್ಷದಲ್ಲಿ ಈ ಯುವಕ ಮಂಡಲವು ಭಕ್ತಕೋಡಿ ಎಸ್‌.ಜಿ.ಎಂ. ಪ್ರೌಢ ಶಾಲೆಗೆ ಸುಮಾರು 22,500 ರೂ. ವೆಚ್ಚದಲ್ಲಿ ಬಾವಿಗೆ ರಿಂಗ್‌ ಅಳವಡಿಕೆ, 10,000 ರೂ. ವೆಚ್ಚದಲ್ಲಿ ಶಾಶ್ವತ ನಾಮಫಲಕ, ಭಕ್ತಕೋಡಿ ಪ್ರಾಥಮಿಕ ಶಾಲೆಗೆ ಬಣ್ಣ ಹಚ್ಚಲು 10,000 ರೂ., ಸರ್ವೆ ಸುಬ್ರಾಯ ದೇವಸ್ಥಾನಕ್ಕೆ 10,000 ರೂ. ವೆಚ್ಚದ ಸಿಮೆಂಟಿನಿಂದ ನಿರ್ಮಿಸಿದ ದಾರಿ ಸೂಚನ ಫಲಕ, ಬಡತನದಿಂದ ಶೈಕ್ಷಣಿಕವಾಗಿ ದೂರ ಉಳಿಯಲು ನಿರ್ಧರಿಸಿದ ಪರಿಸರದ 4 ವಿದ್ಯಾರ್ಥಿಗಳನ್ನು ಅವರ ಹೆತ್ತವರ ಜತೆ ಮಾತುಕತೆ ನಡೆಸಿ ಯುವಕ ಮಂಡಲದಿಂದ ಶಾಲಾ ಶುಲ್ಕ ಹಾಗೂ ಇತರ ಆವಶ್ಯಕತೆಗಳನ್ನು ಪೂರೈಸಿ ಸ್ಥಳೀಯ ಪ್ರೌಢಶಾಲೆಗೆ ಆ ನಾಲ್ಕು ಮಕ್ಕಳನ್ನು ಸೇರ್ಪಡೆಗೊಳಿಸಿದ್ದರು. ಹಸಿರು ಗ್ರಾಮ ಯೋಜನೆಯಡಿ ಸುಮಾರು 50ಕ್ಕೂ ಹೆಚ್ಚು ಮನೆಗಳಿಗೆ ಭೇಟಿ ನೀಡಿ ಸಸ್ಯನಾಟಿ ಹಾಗೂ ಯುವಕರಿಗೆ ವಿವಿಧ ವಿಚಾರಗಳ ಕುರಿತು ತರಬೇತಿ ಕಾರ್ಯಾಗಾರ ನಡೆಸಿದ್ದರು.

ಸರಕಾರಿ ಸೌಲಭ್ಯಗಳ ಮಾಹಿತಿ
ಪ್ರಸ್ತುತ ಯುವಕ ಮಂಡಲದ ಸದಸ್ಯರು ಗ್ರಾಮದ ಹಿಂದುಳಿದ ಪ್ರದೇಶದ ಜನರಿಗೆ ಸರಕಾರಿ ಸೌಲಭ್ಯಗಳ ಮಾಹಿತಿ ಹಾಗೂ 94ಸಿ ಮೊದಲಾದ ಯೋಜನೆಗಳು ತಳಮಟ್ಟದ ಫಲಾನುಭವಿಗಳಿಗೂ ದೊರಕಬೇಕೆಂಬ ನಿಟ್ಟಿನಲ್ಲಿ  ಅಂಥವರ ಮನೆಗೆ ಭೇಟಿ ನೀಡಿ ಅವರಿಗೆ ಮಾಹಿತಿ ನೀಡಲಾಗುತ್ತಿದೆ. ಮನೆ ಬಾಗಿಲಿಗೆ ಸರಕಾರಿ ಸೌಲಭ್ಯಗಳ ಮಾಹಿತಿ ನೀಡುವ ಸಂದರ್ಭದಲ್ಲಿ ಯುವಕ ಮಂಡಲದ ಅಧ್ಯಕ್ಷ ಕಮಲೇಶ್‌ ಎಸ್‌.ಡಿ., ನಿಕಟಪೂರ್ವ ಅಧ್ಯಕ್ಷ  ಸುಬ್ರಹ್ಮಣ್ಯ ಕರುಂಬಾರು, ಯುವಕ ಮಂಡಲದ ಪ್ರಧಾನ ಕಾರ್ಯದರ್ಶಿ ತಿಲಕ್‌ರಾಜ್‌ ಕರುಂಬಾರು, ಕೋಶಾಧಿಕಾರಿ ವಸಂತ ಪೂಜಾರಿ ಕೈಪಂಗಳ ದೋಳ, ಮಾಜಿ ಅಧ್ಯಕ್ಷ ರಾಜೇಶ್‌ ಎಸ್‌.ಡಿ., ಉಪಾಧ್ಯಕ್ಷರಾದ ನಾಗೇಶ್‌ ಪಟ್ಟೆಮಜಲು, ದಿನೇಶ್‌ ಭಕ್ತಕೋಡಿ, ನಿಕಟ ಪೂರ್ವ ಕಾರ್ಯದರ್ಶಿ ಶರೀಫ್‌ ಎಸ್‌.ಎಂ., ಸಂಘಟನಾ ಕಾರ್ಯದರ್ಶಿ ಹರೀಶ್‌ ಅಲೇಕಿ, ಸದಸ್ಯರಾದ ಕರಿಯ ಕೆ.ಎಸ್‌., ಸಾಂತಪ್ಪ ಕಲ್ಕಾರು, ಕಿರಣ್‌ ಸರ್ವೆದೋಳಗುತ್ತು, ಲೋಕೇಶ್‌ ಗೌಡ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next