Advertisement

ಎಸ್‌ಸಿ, ಎಸ್‌ಟಿ ವಿಧೇಯಕ ಮಂಡನೆ

06:00 AM Dec 18, 2018 | |

ವಿಧಾನಸಭೆ: ಕರ್ನಾಟಕ ಸಿವಿಲ್‌ ಸೇವೆಗಳ ನೇಮಕಾತಿಯಲ್ಲಿ ಎಸ್ಸಿ, ಎಸ್ಟಿ ಹಾಗೂ ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳ ನೇಮಕಾತಿಯಲ್ಲಿ ಅರ್ಹತೆ ಆಧಾರದಲ್ಲಿ ಸಾಮಾನ್ಯ ವರ್ಗದಡಿ ಯಲ್ಲಿಯೂ ಅವಕಾಶ ಕಲ್ಪಿಸಲು ಕರ್ನಾಟಕ ಸಿವಿಲ್‌ ಸೇವೆಗಳ(ನೇಮಕಾತಿ ಸಮಯದಲ್ಲಿ ಅಭ್ಯರ್ಥಿಗಳ ಆಯ್ಕೆಯ ಕಾರ್ಯಧಾನ) ವಿಧೇಯಕ 2018ನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು.

Advertisement

1995ರ ಸಿವಿಲ್‌ ನೇಮಕಾತಿಯಲ್ಲಿರುವ ಅನುಸೂಚಿತ ಜಾತಿ, ಅನುಸೂಚಿತ ಪಂಗಡ ಹಾಗೂ ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಸ್ಪರ್ಧಾತ್ಮಕವಾಗಿ ಅರ್ಹತೆ ಹೊಂದಿ ದ್ದರೆ, ಸಾಮಾನ್ಯ ವರ್ಗದ ಅಡಿಯಲ್ಲಿ ಹುದ್ದೆ ಪಡೆಯಲು ಅವಕಾಶ ವಂಚಿತರಾಗುತ್ತಿದ್ದರು. ಸಿವಿಲ್‌ ಸೇವೆಗಳ ನೇಮಕಾತಿಗಳಲ್ಲಿ ಎಸ್ಸಿ, ಎಸ್ಟಿ ಹಾಗೂ ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೂ ಸಾಮಾನ್ಯ ವರ್ಗದ ಹುದ್ದೆಗಳಿಗೆ ಅವಕಾಶ ಕಲ್ಪಿಸಿ 1995ರಿಂದಲೇ ಅನ್ವಯವಾಗುವಂತೆ ತಿದ್ದುಪಡಿ ತರಲು ವಿಧೇಯಕ ಮಂಡಿಸಲಾಗಿದೆ.

ಗುತ್ತಿಗೆ ನೇಮಕಾತಿಯಲ್ಲಿಯೂ ಮೀಸಲಾತಿಗೆ ತಿದ್ದುಪಡಿ:
ಗುತ್ತಿಗೆ ನೇಮಕಾತಿ ಹಾಗೂ ನೇರ ನೇಮಕಾತಿಯಲ್ಲಿ ಎಸ್ಸಿ, ಎಸ್ಟಿ ಹಾಗೂ ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ
ಮೀಸಲಾತಿ ಕಲ್ಪಿಸಲು 1990ರ ಕರ್ನಾಟಕ ಅನುಸೂಚಿತ ಜಾತಿ ಗಳು, ಅನುಸೂಚಿತ ಬುಡಕಟ್ಟುಗಳು ಮತ್ತು ಇತರ ಹಿಂದುಳಿದ ವರ್ಗಗಳ ನೇಮಕಾತಿ ಮತ್ತು ಮೀಸಲಾತಿ ವಿಧೇಯಕ ತಿದ್ದುಪಡಿ ಮಾಡಲು ವಿಧೇಯಕ ಮಂಡಿಸಲಾಯಿತು. ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ ವಿಧೇಯಕ ಮಂಡಿಸಿದರು. ಸಂಶೋಧನೆ ಮತ್ತು ಮಾರ್ಗದರ್ಶನ ನೀಡುವ ಎ ದರ್ಜೆಯ ಕಿರಿಯ ಶ್ರೇಣಿಯ ವೃಂದಕ್ಕಿಂತ ಮೇಲಿನ ಹುದ್ದೆಗಳು, ಸರ್ಕಾರದ ಇಲಾಖೆಗಳು, ಮಂಡಳಿಗಳು, ನಿಗಮಗಳು ಹಾಗೂ ವಿಶ್ವದ್ಯಾಲಯಗಳಲ್ಲಿ ಗುತ್ತಿಗೆ
ಆಧಾರಿತ, ತಾತ್ಕಾಲಿಕ ಹಾಗೂ ಅರೆಕಾಲಿಕ ನೇಮಕಾತಿಯಲ್ಲಿ ಸಿ ಮತ್ತು ಡಿ ದರ್ಜೆಯ ಹುದ್ದೆಗಳಿಗೆ ಮೀಸಲಾತಿ ಮೂಲಕ ನೇಮಕ ಮಾಡಿಕೊಳ್ಳಲು ಈ ವಿಧೇಯಕದ ಮೂಲಕ ಅವಕಾಶ ಕಲ್ಪಿಸಲು ಸರ್ಕಾರ ನಿರ್ಧರಿಸಿದೆ. ಈ ವಿಧೇಯಕದ ಮೇಲಿನ ಚರ್ಚೆಯಲ್ಲಿ ಬಿಜೆಪಿ ಶಾಸಕ ಜೆ.ಸಿ. ಮಾಧುಸ್ವಾಮಿ ಗುತ್ತಿಗೆ ಆಧಾರದ ನೇಮಕಾತಿಗೆ ಸುಪ್ರೀಂ ಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಅವಕಾಶ ಇಲ್ಲದಿರುವುದರಿಂದ ಗುತ್ತಿಗೆ ಆಧಾರದ ನೇಮಕಾತಿಯಲ್ಲಿ ಮೀಸಲಾತಿ ಕಲ್ಪಿಸಲು ಅವಕಾಶ ಎಲ್ಲಿ ದೊರೆಯುತ್ತದೆ ಎನ್ನುವ ಬಗ್ಗೆ ಸ್ಪಷ್ಟಣೆ ನೀಡಬೇಕು ಹಾಗೂ 45 ದಿನಗಳಿಗಿಂತ ಕಡಿಮೆ ಅವಧಿ ಸೇವೆ ಸಲ್ಲಿಸಿದವರಿಗೆ ಮೀಸಲಾತಿ ಕಲ್ಪಿಸಲು ಈ ವಿಧೇಯಕ ಜಾರಿಗೆ
ತರಲಾಗಿದೆ ಎಂದು ಹೇಳಲಾಗಿದೆ. ಈ ವಿಧೇಯಕದಲ್ಲಿ ಸ್ಪಷ್ಟತೆ ನೀಡುವಂತೆ ಮನವಿ ಮಾಡಿದರು. ಸಭಾಧ್ಯಕ್ಷ ರಮೇಶ್‌ ಕುಮಾರ್‌, ವಿಧೇಯಕಗಳ ಬಗ್ಗೆ ಸ್ಪಷ್ಟತೆ ನೀಡಲು ಸೂಚಿಸಿ, ಮಂಗಳವಾರ ಚರ್ಚೆಗೆ ಅವಕಾಶ ನೀಡುವುದಾಗಿ ತಿಳಿಸಿದರು.

ಶಿಕ್ಷಕರ ವರ್ಗಾವಣೆ ವಿಧೇಯಕ ಮಂಡನೆ
ವಿಧಾನಸಭೆ: ಶಿಕ್ಷಕರ ವರ್ಗಾವಣೆ ಕಾಯ್ದೆಯಲ್ಲಿನ ತಾಂತ್ರಿಕ ಸಮಸ್ಯೆಯಿಂದಾಗಿ ಕಳೆದ ಮೂರು ವರ್ಷಗಳಿಂದ ಕಗ್ಗಂಟಾಗಿದ್ದ ಶಿಕ್ಷಕರ ವರ್ಗಾವಣೆ ವಿಧೇಯಕ ಸೋಮವಾರ ಮಂಡಿಸಲಾಗಿದೆ. ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) ತಿದ್ದುಪಡಿ ವಿಧೇಯಕವನ್ನು ಮುಖ್ಯಮಂತ್ರಿಗಳ ಪರವಾಗಿ ಕಾನೂನು ಸಚಿವ ಕೃಷ್ಣ ಬೈರೇಗೌಡ ಮಂಡಿಸಿದರು. ಶಿಕ್ಷಕರ ವಿವಿಧ ವೃಂದಗಳ ವಲಯಗಳಲ್ಲಿನ ವರ್ಗಾವಣೆ ಸೇವಾವಧಿಯನ್ನು 5 ವರ್ಷಗಳಿಂದ 3 ವರ್ಷಗಳಿಗೆ ಕಡಿಮೆಗೊಳಿಸುವುದು. ಪದವಿಪೂರ್ವ ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದಂತೆ ನಗರಪಾಲಿಕೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳನ್ನು ನಗರ ಪ್ರದೇಶದಿಂದ
ಹೊರಗಿಡುವುದು. ಪತಿ, ಪತ್ನಿ ಪ್ರಕರಣದಲ್ಲಿ ಅವರ ಕುಟುಂಬದವರು ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಲ್ಲಿ ಅವರಿಗೆ ಕಡ್ಡಾಯ ವರ್ಗಾವಣೆಯಿಂದ ವಿನಾಯಿತಿ ನೀಡುವುದು. ಅಲ್ಲದೇ ಶಿಕ್ಷಕರ ಪತಿ ಅಥವಾ ಪತ್ನಿ ಸರ್ಕಾರಿ ಅಥವಾ ಸಾರ್ವಜನಿಕ ಉದ್ಯಮದಲ್ಲಿ ಸೇವೆ ಸಲ್ಲಿಸುತ್ತಿದ್ದರೆ, ಅದೇ ಸ್ಥಳಕ್ಕೆ ವರ್ಗಾವಣೆ ಮಾಡಲು ಅವಕಾಶ ಕಲ್ಪಿಸಲು ವಿಧೇಯಕದಲ್ಲಿ ತಿದ್ದುಪಡಿಗೆ ಸರ್ಕಾರ ತೀರ್ಮಾನಿಸಿದೆ.

ಚರ್ಚೆಯಾಗದೆ ಅಂಗೀಕಾರ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಲ್ಲಿ ಐವರು ಸದಸ್ಯರಲ್ಲಿ ಓರ್ವ ಮಹಿಳೆಯನ್ನು ನೇಮಿಸಲು ತಿದ್ದುಪಡಿ ಮಾಡಿ, ವಿಧೇಯಕಕ್ಕೆ ಯಾವುದೇ ಚರ್ಚೆಯಿಲ್ಲದೇ ಅಂಗೀಕರಿಸಲಾಯಿತು. 

Advertisement
Advertisement

Udayavani is now on Telegram. Click here to join our channel and stay updated with the latest news.

Next