Advertisement

ಅಪ್ಪ ಮಾಡಿದ ಕಾನೂನಿಂದಲೇ ಮಗ ಫಾರೂಕ್ ಅರೆಸ್ಟ್ ?

10:07 AM Sep 17, 2019 | Hari Prasad |

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫೆರೆನ್ಸ್ ಹಿರಿಯ ನಾಯಕ ಫಾರೂಕ್ ಅಬ್ದುಲ್ಲಾ ಅವರನ್ನು ಸಾರ್ವಜನಿಕ ಸುರಕ್ಷತಾ ಕಾಯ್ದೆ ಅಡಿಯಲ್ಲಿ ಬಂಧಿಸಲಾಗಿದೆ. ಜಮ್ಮು-ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರಕಾರ ರದ್ದುಗೊಳಿಸಿದ ಸಂದರ್ಭದಲ್ಲೇ ಈ ಬೆಳವಣಿಗೆ ನಡೆದಿದ್ದು, ಕಳೆದ ಒಂದು ತಿಂಗಳಿನಿಂದ ಅವರು ಸೆರೆವಾಸ ಅನುಭವಿಸುತ್ತಿದ್ದಾರೆ.

Advertisement

ಹಾಗಾದರೆ ಅವರ ಬಂಧನಕ್ಕೆ ಕಾರಣವಾದ ಕಾಯ್ದೆ ಯಾವುದು? ಈ ಕಾಯ್ದೆ ಏನು ಹೇಳುತ್ತದೆ ಎಂಬೆಲ್ಲಾ ವಿವರಗಳು ಇಲ್ಲಿವೆ:

ಏನಿದು ಸಾರ್ವಜನಿಕ ಸುರಕ್ಷತಾ ಕಾಯ್ದೆ?
ರಾಜ್ಯದಲ್ಲಿ ಸಂರಕ್ಷಿತ ಹಾಗೂ ನಿಷೇಧಿತ ವಲಯಗಳೆಂದು ಪರಿಗಣಿಸಲಾಗಿರುವ ಪ್ರದೇಶಗಳಲ್ಲಿ ಕೋಮು ಗಲಭೆ- ಹಿಂಸಾಚಾರ ಕೃತ್ಯಗಳು ನಡೆಯದಂತೆ ತಡೆಗಟ್ಟುವುದು. ಹಾಗೇ ರಾಜ್ಯ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸುವ್ಯವಸ್ಥೆ ಕಾಯ್ದುಕೊಳ್ಳಬೇಕೆಂಬ ಹಿತದೃಷ್ಟಿಯಿಂದ ಈ ಕಾನೂನು ಜಾರಿಗೊಂಡಿತ್ತು.

1978 ರಲ್ಲಿ ಜಾರಿ
ಜಮ್ಮು-ಕಾಶ್ಮೀರ ಸಾರ್ವಜನಿಕ ಸುರಕ್ಷತಾ ಕಾಯ್ದೆಯನ್ನು ಅಂದಿನ ಮುಖ್ಯಮಂತ್ರಿಯಾಗಿದ್ದ ಶೇಕ್ ಅಬ್ದುಲ್ಲಾ ಅವರು 1978ರಲ್ಲಿ ಜಾರಿಗೊಳಿಸಿದ್ದರು. ಅಂದ ಹಾಗೆ ಶೇಕ್ ಅಬ್ದುಲ್ಲಾ ಅವರು ಫಾರುಕ್ ಅಬ್ದುಲ್ಲಾ ಅವರ ತಂದೆ! ಹಾಗಾಗಿ ನಾಲ್ಕು ದಶಕಗಳ ಹಿಂದೆ ಅಪ್ಪ ಶೇಕ್ ಅಬ್ದುಲ್ಲಾ ಮಾಡಿದ ಕಾನೂನೊಂದು ಇಂದು ಅವರ ಮಗ ಫಾರುಖ್ ಅಬ್ದುಲ್ಲಾ ಅವರ ಪಾಲಿಗೆ ಕಂಟಕವಾಗಿ ಪರಿಣಮಿಸಿದಂತಾಗಿದೆ.

ಈವರೆಗೆ 20 ಸಾವಿರ ಜನರ ಬಂಧನ
ಮಾನವ ಹಕ್ಕು ಹೋರಾಟಗಾರರು ನೀಡಿರುವ ಮಾಹಿತಿ ಪ್ರಕಾರ 1978 ರಿಂದ ಇಲ್ಲಿಯವರೆಗೆ ಸುಮಾರು 20 ಸಾವಿರ ಜನರನ್ನು ಈ ಕಾಯ್ದೆ ಅಡಿಯಲ್ಲಿ ಬಂಧಿಸಲಾಗಿದೆ.

Advertisement

ಕಾಯ್ದೆ ಏನು ಹೇಳುತ್ತದೆ, ಬಂಧನ ಅಧಿಕಾರ ಯಾರಿಗೆ ?
– ಕಾಯ್ದೆಯ 8ನೇ ಸೆಕ್ಷನ್ ಪ್ರಕಾರ ಯಾರು ಸಮಾಜದ ಶಾಂತಿಯನ್ನು ಕದಡುವ ಕಾರ್ಯದಲ್ಲಿ ಭಾಗಿಯಾಗುತ್ತಾರೋ ಅವರನ್ನು ಬಂಧಿಸುವ ಅಧಿಕಾರವನ್ನು ಅಧಿಕಾರಿಗಳಿಗೆ ನೀಡಲಾಗಿದೆ.

– ಸಮಾಜ ಘಾತುಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ವ್ಯಕ್ತಿಗಳನ್ನು ಈ ಕಾಯ್ದೆಯ ಅಡಿಯಲ್ಲಿ ಬಂಧಿಸುವಂತೆ ಸರಕಾರ ಆದೇಶ ನೀಡಬಹುದು.

– ರಾಜ್ಯದಲ್ಲಿ ಕಾನೂನಿನ ಸುವ್ಯವಸ್ಥೆಯನ್ನು ಹಾಳು ಮಾಡಲು ಪ್ರಯತ್ನ ಮಾಡಿದವರನ್ನು ಬಂಧಿಸುವುದು.

2 ವರ್ಷ ಜೈಲು
ಈ ಕಾಯ್ದೆ ಅಡಿಯಲ್ಲಿ ಬಂಧಿತರಾದವರಿಗೆ ಎರಡು ವರ್ಷಗಳ ಜೈಲು ವಾಸವನ್ನು ನಿಗದಿಪಡಿಸಲಾಗಿದೆ.

ಇನ್ನೆಷ್ಟು ದಿನ ಕಾನ್ಫೆರೆನ್ಸ್ ನಾಯಕನಿಗೆ ಜೈಲುವಾಸ?
ಈ ಕಾಯ್ದೆ ಅಡಿಯಲ್ಲಿ ಯಾವುದೇ ವ್ಯಕ್ತಿ ಬಂಧಿತನಾದರೂ ಆ ವ್ಯಕ್ತಿಗೆ ಎರಡು ವರ್ಷ ನ್ಯಾಯಾಂಗ ಬಂಧನ ಎಂದು ಈ ಕಾನೂನಿನಲ್ಲಿ ಹೇಳಲಾಗಿದ್ದರೂ, ಪ್ರಸ್ತುತ ಮಾಜೀ ಮುಖ್ಯಮಂತ್ರಿ ಫಾರೂಕ್ ಅವರು ಮಾತ್ರ ಎಷ್ಟು ದಿನ ಸೆರೆಮನೆ ವಾಸ ಅನುಭವಿಸಲ್ಲಿದ್ದಾರೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ.

ಫಾರುಕ್ ಅಬ್ದುಲ್ಲಾ ಅವರು ಮೂರು ಅವಧಿಗೆ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು ಮತ್ತು ಐದು ಬಾರಿ ಸಂಸತ್ತಿಗೆ ಆಯ್ಕೆಯಾಗಿರುವ ಹಿರಿಯ ರಾಜಕಾರಣಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next