Advertisement

ಉದ್ಯೋಗ ನಿರೀಕ್ಷೆಯಲ್ಲಿರುವವರಿಗೆ ಸಿಹಿ ಸುದ್ದಿ: ಡಿಪ್ಲೊಮಾ ಕಲಿತವರಿಗೆ ಉದ್ಯೋಗ ಮಾಹಿತಿ

11:57 PM Nov 14, 2020 | sudhir |

ಬೆಂಗಳೂರು: ರಾಜ್ಯದ ಸರಕಾರಿ ಪಾಲಿಟೆಕ್ನಿಕ್‌ಗಳಲ್ಲಿ ವ್ಯಾಸಂಗ ಮಾಡಿ, ತೇರ್ಗಡೆ ಹೊಂದಿರುವವರಿಗೆ ಉದ್ಯೋಗ ಹಾಗೂ ಉದ್ಯೋಗಾವಕಾಶದ ಮಾಹಿತಿ ಕಲ್ಪಿಸುವುದಕ್ಕಾಗಿಯೇ ಉದ್ಯೋಗ ಮಾಹಿತಿ ವಿನಿಮಯ ಯೋಜನೆ ಸಿದ್ಧವಾಗಿದೆ.

Advertisement

2017-20ರ ಅವಧಿಯಲ್ಲಿ ಶಿಕ್ಷಣ ಪೂರೈಸಿದವರ ಮಾಹಿತಿ ಸಂಗ್ರಹಿಸಿ ಉದ್ಯೋಗ ಮಾಡುತ್ತಿರುವ ಮತ್ತು ಉದ್ಯೋಗ ಹುಡುಕುತ್ತಿರುವವರ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ. ಈ ವರೆಗೆ ವಿದ್ಯಾರ್ಥಿಗಳು ಕಾಲೇಜಿನಿಂದ ಹೊರಹೋದ ಬಳಿಕ ಉದ್ಯೋಗ ಒದಗಿಸಿಕೊಡುವ ನಿಟ್ಟಿನಲ್ಲಿ ಆಡಳಿತ ಮಂಡಳಿಗಳು ಮುತುವರ್ಜಿ ವಹಿಸುತ್ತಿರಲಿಲ್ಲ. ಇನ್ನು ಮುಂದೆ ತೇರ್ಗಡೆಯಾಗಿ ಮೂರ್‍ನಾಲ್ಕು ವರ್ಷ ಕಳೆದರೂ ಕಾಲೇಜಿನಿಂದಲೇ ಉದ್ಯೋಗಾವಕಾಶದ ಮಾಹಿತಿ ಸಿಗಲಿದೆ ಎಂದು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ತಿಳಿಸಿದೆ.

ಉದ್ಯೋಗ ಮಾರ್ಗದರ್ಶಕರು
ಎಲ್ಲ ಪಾಲಿಟೆಕ್ನಿಕ್‌ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಮತ್ತು 2017ರ ಅನಂತರ ತೇರ್ಗಡೆ ಹೊಂದಿದವರಿಗೆ ಉದ್ಯೋಗಾವಕಾಶ ಮತ್ತು ಉದ್ಯೋಗದ ಮಾಹಿತಿ ನೀಡಲು ವಿದ್ಯಾರ್ಥಿ ಮಾರ್ಗದರ್ಶಕರನ್ನು (ಮೆಂಟರ್‌) ನೇಮಿಸಲಾಗುತ್ತದೆ.

ಈಗಾಗಲೇ ಎಲ್ಲ ಸಂಸ್ಥೆಗಳಲ್ಲೂ ಉದ್ಯೋಗ ಮತ್ತು ತರಬೇತಿ ಅಧಿಕಾರಿಗಳ ನಿಯೋಜನೆ ಮಾಡಲಾಗಿದೆ. ಆಯಾ ಕಾಲೇಜಿನ ಪ್ರಾಂಶುಪಾಲರು ಉದ್ಯೋಗ ಮತ್ತು ತರಬೇತಿ ಅಧಿಕಾರಿಗಳ ಮೂಲಕ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಉಪನ್ಯಾಸಕರನ್ನು ಮೆಂಟರ್‌ ಆಗಿ ನೇಮಿಸಲು ಇಲಾಖೆ ಸ್ಪಷ್ಟ ನಿರ್ದೇಶನ ನೀಡಿದೆ.

ಅಭ್ಯರ್ಥಿಗಳ ಸಮಾನ ಹಂಚಿಕೆ
ಸರಕಾರಿ ಪಾಲಿಟೆಕ್ನಿಕ್‌ಗಳಲ್ಲಿ 2017 ರಿಂದ 2020ನೇ ಸಾಲಿನ ತನಕ ತೇರ್ಗಡೆ ಯಾಗಿರುವವರನ್ನು ವಿದ್ಯಾರ್ಥಿ ಮಾರ್ಗ ದರ್ಶಕರಿಗೆ ಸಮಾನವಾಗಿ ಹಂಚಿಕೆ ಮಾಡಲಾಗುತ್ತದೆ. ಕಾಲೇಜಿನ ಉದ್ಯೋಗ ಮತ್ತು ತರಬೇತಿ ಅಧಿಕಾರಿಗಳು ನೀಡುವ ಉದ್ಯೋಗ ಮಾಹಿತಿಯನ್ನು ವಿದ್ಯಾರ್ಥಿ ಮಾರ್ಗದರ್ಶಕರು ಕ್ಲಪ್ತ ಸಮಯದಲ್ಲಿ ಅಭ್ಯರ್ಥಿಗಳಿಗೆ ಒದಗಿಸಬೇಕು. ಸಂದರ್ಶನಕ್ಕೆ ಸೂಕ್ತ ತರಬೇತಿ ನೀಡಿ ಉದ್ಯೋಗ ಪಡೆಯಲು ಅನುಕೂಲ ವಾಗುವಂತೆ ವಿದ್ಯಾರ್ಥಿ ಮಾರ್ಗದರ್ಶಕರು ಕಾರ್ಯನಿರ್ವಹಿಸಲಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

ಕಾರ್ಯಪಡೆ ರಚನೆ
ಸರಕಾರಿ ಕಾಲೇಜುಗಳಲ್ಲಿ  ವ್ಯಾಸಂಗ ಮಾಡುತ್ತಿರುವ/ಮಾಡಿರುವ ವಿದ್ಯಾರ್ಥಿಗಳಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ವ್ಯಾಪ್ತಿಯಲ್ಲಿ ಕಾರ್ಯಪಡೆ ರಚಿಸಲಾಗಿದೆ. ಕಾರ್ಪೊರೆಟ್‌ ಸಂಸ್ಥೆಗಳಲ್ಲಿ ವಿವಿಧ ಅರ್ಹತೆಗೆ ಅನುಗುಣವಾಗಿ ಉದ್ಯೋಗಾವಕಾಶ ಇರುತ್ತದೆ. ಅವುಗಳನ್ನು ಪತ್ತೆಹಚ್ಚಿ ಅಭ್ಯರ್ಥಿಗಳಿಗೆ ಒದಗಿಸುವ ಕೆಲಸವನ್ನು ಈ ಕಾರ್ಯಪಡೆ ಮಾಡಲಿದೆ. ಬಳಿಕ ಉದ್ಯೋಗಾವಕಾಶಕ್ಕೆ ಅನುಗುಣವಾಗಿ ಸಂದರ್ಶನಕ್ಕೆ ಸಜ್ಜುಗೊಳಿಸುವ ಕಾರ್ಯವಾಗಲಿದೆ ಎಂದು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಪಿ. ಪ್ರದೀಪ್‌ ಮಾಹಿತಿ ನೀಡಿದರು.

ಕಾಲೇಜು ಸಂದರ್ಶನ ಅಥವಾ ಕಾಲೇಜು ಹಂತದ ಉದ್ಯೋಗಾವ ಕಾಶಗಳು ಹೆಚ್ಚೆಚ್ಚು ನಗರ ಭಾಗದ ವಿದ್ಯಾರ್ಥಿಗಳ ಪಾಲಾಗುತ್ತಿದ್ದವು. ಗ್ರಾಮೀಣ ವಿದ್ಯಾರ್ಥಿಗಳಿಗೂ ಹೆಚ್ಚಿನ ಉದ್ಯೋಗಾವಕಾಶದ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಉದ್ಯೋಗ ಮಾಹಿತಿ ವಿನಿಮಯ ಕಾರ್ಯಕ್ರಮ ರೂಪಿಸಲಾಗಿದೆ.
– ಪಿ. ಪ್ರದೀಪ್‌, ಆಯುಕ್ತ, ಕಾಲೇಜು ಶಿಕ್ಷಣ ಇಲಾಖೆ

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next