Advertisement

ಬಿಬಿಎಂಪಿ ಕೇಂದ್ರ ಕಚೇರಿಗೆ ಅನೌಪಚಾರಿಕ ನಿರ್ಬಂಧ!

06:34 AM Jun 29, 2020 | Lakshmi GovindaRaj |

ಬೆಂಗಳೂರು: ಬಿಬಿಎಂಪಿ ಕೇಂದ್ರ ಕಚೇರಿಗೆ ಸದ್ಯ ಸಾರ್ವಜನಿಕರ ಪ್ರವೇಶವನ್ನು ಪಾಲಿಕೆ ಅನೌಪಚಾರಿಕವಾಗಿ ನಿಷೇಧಿಸಿದೆ. ಕೋವಿಡ್‌ 19 ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅತ್ಯಂತ ತುರ್ತು ಕೆಲಸಗಳಿ‌ದ್ದರೆ ಮಾತ್ರ  ಸಾರ್ವಜನಿಕರಿಗೆ ಪಾಲಿಕೆ ಕಚೇರಿಯ ಒಳಗೆ ಪ್ರವೇಶ ನೀಡಲಾಗು  ತ್ತಿದೆ. ಅರ್ಜಿಗಳನ್ನು ಪಾಲಿಕೆಯ  ಮುಖ್ಯ ದ್ವಾರಗಳ ಬಳಿಯೇ ತೆಗೆದುಕೊಳ್ಳಲಾಗುತ್ತಿದೆ. ಮುಖ್ಯದ್ವಾರದಲ್ಲಿ ಟಪಾಲು ಮತ್ತು ಒಂದು ಬಾಕ್ಸ್‌ ಇರಿಸಲಾಗಿದೆ.

Advertisement

ಬಿಬಿಎಂಪಿಯ ಅಧಿಕಾರಿಗಳು ಸಿಬ್ಬಂದಿ ಹಾಗೂ ಸುದ್ದಿಗಾರರಿಗೆ ಮಾತ್ರ ಸದ್ಯ ಅವಕಾಶ ನೀಡಲಾಗಿ ದ್ದು, ಉಳಿದವರನ್ನು ಮಾರ್ಷಲ್‌ ಹಾಗೂ ಭದ್ರತಾ ಸಿಬ್ಬಂದಿ ಪಾಲಿಕೆಯ ಕೇಂದ್ರ ಕಚೇರಿಯ ಮುಖ್ಯದ್ವಾರದಲ್ಲೇ ತಡೆಯುತ್ತಿದ್ದು, ಒಳಗೆ  ಹೋಗಲೇ ಬೇಕಾದ ತುರ್ತು ಇದ್ದರೆ ಮಾತ್ರ ಬಿಡುತ್ತಿದ್ದಾರೆ. ರಾಜಕೀಯ ನಾಯಕರ ಬೆಂಬಲಿಗರನ್ನೂ ಮುಖ್ಯ ದ್ವಾರದಲ್ಲೇ ತಡೆಹಿಡಿಯಲಾಗುತ್ತಿದೆ. ಈ ಸಂಬಂಧ ಪ್ರತಿಕ್ರಿಯಿಸಿದ ಅನ್ಬುಕುಮಾರ್‌ ಅವರು, ನಗರದಲ್ಲಿ ಸೋಂಕು  ಹೆಚ್ಚಾಗುತ್ತಿರುವ ಮಧ್ಯೆಯೇ ಬಿಬಿಎಂಪಿ ಕೇಂದ್ರ ಕಚೇರಿಗೆ ಬರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ.

ಇದರಿಂದ ಸೋಂಕು ಹೆಚ್ಚಾಗುವ ಆತಂಕ ಎದುರಾಗಿದೆ. ಅಲ್ಲದೆ, ಪಾಲಿಕೆಯ ಆವರಣದಲ್ಲಿ ಪಾರ್ಕಿಂಗ್‌ ಮಾಡುವುದು ಹಾಗೂ ಹೆಚ್ಚು ‌  ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಗುಂಪು  ಸೇರುವುದು ಆಗುತ್ತಿದೆ. ಹೀಗಾಗಿ, ಅಗತ್ಯ ಇದ್ದರೆ ಮಾತ್ರ ಒಳಗೆ ಬಿಡುವಂತೆ ಸೂಚನೆ ನೀಡಲಾಗಿದೆ. ನಿರ್ಬಂಧ ವಿಧಿಸಿಲ್ಲ ಎಂದು ಸ್ಪಷ್ಟಪಡಿಸಿದರು. ಜನ ಕೇಂದ್ರ ಕಚೇರಿಗೆ ಬರುವುದನ್ನು ತಪ್ಪಿಸುವ  ಉದ್ದೇಶದಿಂದ ಬಿಬಿಎಂಪಿ ಸಹಾಯ, ಸಕಾಲ ಹಾಗೂ ಸಹಾಯವಾಣಿಗೆ ಬರುವ ಎಲ್ಲ ದೂರುಗಳನ್ನು ಶೀಘ್ರವಾಗಿ ಪರಿಹರಿಸಲಾಗುತ್ತಿದೆ.

ಸದ್ಯ ಸಹಾಯದಲ್ಲಿ ಮೂರು ಸಾವಿರ ದೂರುಗಳಿವೆ. ಸಾರ್ವಜನಿಕರು ಸಾಧ್ಯವಾದಷ್ಟು ಆನ್‌ಲೈನ್‌  ಸೇವೆಗಳನ್ನು ಬಳಸಿಕೊಂಡು ಸೋಂಕು ನಿಯಂತ್ರಣಕ್ಕೆ ಸಹಕರಿಸಬೇಕು. ಕೆಲವರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಅದರ ಪ್ರಗತಿಯ ಬಗ್ಗೆ ಕಚೇರಿಗೆ ಬಂದು ಪರಿಶೀಲಿಸುತ್ತಿದ್ದಾರೆ. ಇದನ್ನು ತಪ್ಪಿಸಲು ಅವರ ಮೊಬೈಲ್‌ಗೆ ಕಡತದ ವಿವರ  ಮತ್ತು ಪ್ರಗತಿ ಮೆಸೇಜ್‌ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next