Advertisement

ಮೈಷುಗರ್‌ ಆಸ್ತಿ ಮೇಲೆ ಪ್ರಭಾವಿಗಳ ಕಣ್ಣು!

04:18 PM Nov 01, 2020 | Suhan S |

ಮಂಡ್ಯ: ಸಾವಿರಾರು ಕೋಟಿ ರೂ. ಮೌಲ್ಯದ ಮೈಷುಗರ್‌ ಕಾರ್ಖಾನೆಯ ಆಸ್ತಿಯ ಮೇಲೆ ಪ್ರಭಾವಿಗಳ ಕಣ್ಣು ಬಿದ್ದಿದ್ದು, ಅದರಂತೆ 40 ವರ್ಷಗಳ ಅವಧಿಗೆ ಖಾಸಗಿಗೆ ಗುತ್ತಿಗೆ ನೀಡಲು ಸರ್ಕಾರದ ಮಟ್ಟದಲ್ಲಿ ಪ್ರಕ್ರಿಯೆಗಳು ನಡೆಯುತ್ತಿವೆ ಎಂಬ ಆರೋಪ ಕೇಳಿ ಬಂದಿದೆ.

Advertisement

ಮೈಷುಗರ್‌ ಕಂಪನಿ ಎಂಪ್ಲಾಯೀಸ್‌ ಅಸೋಸಿಯೇಷನ್‌ಗೆ ಕಾರ್ಖಾನೆಯ ಆಸ್ತಿ ಮಾರಾಟ ಮಾಡಲು ಯಾವುದೇ ಅಧಿಕಾರವಿಲ್ಲದಿದ್ದರೂ, ಅದರ ಪದಾಧಿಕಾರಿಗಳಾಗಿದ್ದ ಅಧ್ಯಕ್ಷ ಸಿದ್ದರಾಜು, ಗೌರವಾಧ್ಯಕ್ಷ ಬಸವರಾಜು, ಉಪಾಧ್ಯಕ್ಷ ಪಿ.ರಾಜೇಂದ್ರಕುಮಾರ್‌, ಪ್ರಧಾನ ಕಾರ್ಯದರ್ಶಿ ಎಂ.ಆರ್‌.ಬೋರೇಗೌಡ, ಗೌರವ ಕಾರ್ಯದರ್ಶಿ ವೆಂಕಟೇಶ್‌ ಹಾಗೂ ಖಜಾಂಚಿ ಕೆ.ಎಲ್‌.ಮಧುಸೂದನ್‌ ಎಂಬುವವರು ಬೆಂಗಳೂರು-ಮೈಸೂರು ಹೆದ್ದಾರಿಯ ಸ್ವರ್ಣಸಂದ್ರದ ಬಳಿ ಇರುವ 38 ಗುಂಟೆ ಜಮೀನಿನನ್ನು ಬೆಂಗಳೂರಿನ ಶರತ್‌ಗೌಡ ಎಂಬುವರಿಗೆ 10 ಕೋಟಿ ರೂ.ಗೆ ಮಾರಾಟ ಹಕ್ಕು ಕರಾರು ಪತ್ರ ಮಾಡಿಕೊಂಡು 10 ಲಕ್ಷ ರೂ. ಮುಂಗಡ ಹಣ ಪಡೆದಿರುವುದು ಬೆಳಕಿಗೆ ಬಂದಿದೆ. ಇದರ ವಿರುದ್ಧ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ತಡೆಯಾಜ್ಞೆ ನೀಡಿದ್ದು, ತನಿಖೆಗೆ ಆದೇಶಿಸಿದ್ದಾರೆ. ಇದಕ್ಕೆ ಸಾರ್ವಜನಿಕರು, ರೈತರು, ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಾವುದೇ ಕ್ರಮ ಕೈಗೊಂಡಿಲ್ಲ: ಈ ಹಿಂದೆಯೂ ಬೆಂಗಳೂರು-ಮೈಸೂರು ಹೆದ್ದಾರಿಯ ರಾಜಕುಮಾರ್‌ ಬಡಾವಣೆಯ ಪಕ್ಕದಲ್ಲಿರುವ 3 ಎಕರೆ ಜಮೀನನನ್ನು ಬೇರೆ ಉದ್ದೇಶಕ್ಕೆ ಬಳಕೆ ಮಾಡಲು ಸರ್ಕಾರದ ಮತ್ತೂಂದು ಇಲಾಖೆಗೆ ಗುತ್ತಿಗೆ ನೀಡಲು ಅಧಿಕಾರಿಗಳು ಮುಂದಾಗಿದ್ದರು. ಅಲ್ಲದೆ, ಕಾರ್ಖಾನೆಗೆ ಹೊಂದಿಕೊಂಡಂತಿರುವ ಜಮೀನನ್ನು ಖಾಸಗಿ ಕಂಪನಿಯೊಂದಕ್ಕೆ ಗುತ್ತಿಗೆ ನೀಡಲಾಗಿದ್ದು, ಆ ಖಾಸಗಿ ಕಂಪನಿಯವರು ಅದನ್ನು ಅನ್ಯ ಬಳಕೆಗೆ ಮುಂದಾಗಿದ್ದರು. ಇಷ್ಟೆಲ್ಲ ಬೆಳವಣಿಗೆ ನಡೆಯುತ್ತಿದ್ದರೂ ಸರ್ಕಾರ ಮಾತ್ರ ಆಸ್ತಿ ಉಳಿಸುವ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ.

ಒ ಆ್ಯಂಡ್‌ ಎಂ ಕೈಬಿಟ್ಟ ಸರ್ಕಾರ?: ಪಿಎಸ್‌ಎಸ್‌ಕೆ ಮಾದರಿಯಲ್ಲಿಯೇ 40 ವರ್ಷಗಳ ಅವಧಿಗೆ ಖಾಸಗಿಯವರಿಗೆ ಗುತ್ತಿಗೆ ನೀಡಲು ಸರ್ಕಾರ ಮುಂದಾಗಿದೆ. ಮೊದಲು ಒ ಆ್ಯಂಡ್‌ ಎಂ ಆಧಾರದಲ್ಲಿ 3 ವರ್ಷಗಳ ಅವಧಿಗೆ ಗುತ್ತಿಗೆ ನೀಡಲು ಸರ್ಕಾರ ತಿಳಿಸಿತ್ತು. ಇದರ ವಿಚಾರವಾಗಿ ಹಲವು ಬಾರಿ ಸಭೆ ನಡೆಸಿ ಜಿಲ್ಲೆಯ ಜನಪ್ರತಿನಿಧಿಗಳು, ಹೋರಾಟಗಾರರು, ರೈತರ ಅಭಿಪ್ರಾಯ ಸಂಗ್ರಹಿಸಲಾಗಿತ್ತು. ಕೆಲವರು ಒ ಆ್ಯಂಡ್‌ ಎಂ ಪರವಾಗಿ ವಾದಿಸಿದರೆ, ಕೆಲವರು ಸರ್ಕಾರಿ ಸ್ವಾಮ್ಯದಲ್ಲಿಯೇ ನಡೆಸಬೇಕು ಎಂದು ಒತ್ತಾಯಿಸಿದ್ದರು.

ಆದರೆ, ಸರ್ಕಾರ ಒ ಆ್ಯಂಡ್‌ ಎಂ ಆಧಾರದಲ್ಲಿ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ, ಈಗಿನ ಮಾಹಿತಿ ಪ್ರಕಾರ ಒ ಆ್ಯಂಡ್‌ ಎಂ ಪದ್ಧತಿ ಕೈಬಿಟ್ಟು, 40 ವರ್ಷಗಳ ಕಾಲ ಖಾಸಗಿಯವರಿಗೆ ಗುತ್ತಿಗೆ ನೀಡಲು ಎಲ್ಲ ಪ್ರಕ್ರಿಯೆಗಳು ನಡೆಯುತ್ತಿದೆ ಎಂದು ಮೈಸೂರು ಸಕ್ಕರೆ ಕಾರ್ಖಾನೆ ಪರಿಶಿಷ್ಟ ಜಾತಿ ನೌಕರರ ಸಂಘದ ಅಧ್ಯಕ್ಷ ಎಂ.ಡಿ.ಜಯರಾಮ್‌ ತಿಳಿಸಿದರು.

Advertisement

ಖಾಸಗಿಗೆ ಗುತ್ತಿಗೆ ನೀಡಿದರೆ ಆಸ್ತಿಗೆ ಕುತ್ತು :  ಖಾಸಗಿಯವರಿಗೆ ಕಾರ್ಖಾನೆ ಗುತ್ತಿಗೆ ನೀಡುವುದರಿಂದ ಆಸ್ತಿಯ ಮೇಲೆ ಹಿಡಿತವಿಲ್ಲದಂತಾಗಲಿದೆ. ಅಧಿಕಾರಿಗಳ ನಿರ್ಲಕ್ಷ್ಯ, ಸರ್ಕಾರದ ಬೇಜವಾಬ್ದಾರಿತನ ದುರುಪಯೋಗಪಡಿಸಿಕೊಂಡ ಮೈಷುಗರ್‌ ಕಂಪನಿ ಎಂಪ್ಲಾಯೀಸ್‌ ಅಸೋಸಿಯೇಷನ್‌ನ ಕೆಲವರು ಆಸ್ತಿಯನ್ನೇ ಮಾರಾಟ ಮಾಡಲು ಹೊರಟಿದ್ದಾರೆ. ಇದನ್ನು ತಡೆಯಲು ಅಧಿಕಾರಿಗಳು, ಸರ್ಕಾರದಿಂದಲೇ ಸಾಧ್ಯವಾಗಿಲ್ಲ. ಇನ್ನೂ ಖಾಸಗಿಯವರ ಕೈಗೆ ಮೈಷುಗರ್‌ ಗುತ್ತಿಗೆ ನೀಡಿದರೆ ವರ್ಷದಿಂದ ವರ್ಷಕ್ಕೆ ಆಸ್ತಿ ಮೇಲೆ ಹಿಡಿತ ಸಾಧಿಸುವ ಖಾಸಗಿಯವರು ಸಂಪೂರ್ಣವಾಗಿ ಆಕ್ರಮಿಸಿ ಬಿಡುತ್ತಾರೆ. ಇದರಿಂದ ಮುಂದೊಂದು ದಿನ ಮೈಷುಗರ್‌ ಆಸ್ತಿ ಸಂಪೂರ್ಣ ಖಾಸಗಿಯವರ ಪಾಲಾಗುವ ಸಾಧ್ಯತೆ ಇದೆ ಎಂಬ ಆತಂಕ ಹೋರಾಟಗಾರರು, ರೈತರನ್ನು ಕಾಡುತ್ತಿದೆ.

ಕಾರ್ಖಾನೆಯ ಒಂದಿಂಚೂ ಜಾಗವನ್ನು ಮಾರಾಟ ಮಾಡಲು ಬಿಡುವುದಿಲ್ಲ. ಆಸ್ತಿ ಮಾರಾಟ ಮಾಡುವ ಹಕ್ಕು ಯಾರಿಗೂ ಇಲ್ಲ. ಅಸೋಸಿಯೇಷನ್‌ ನಲ್ಲಿದ್ದವರು ಕೆಲವರು ಈಗಾಗಲೇ ನಿವೃತ್ತಿ ಹಾಗೂ ವಿಆರ್‌ಎಸ್‌ ಹೊಂದಿದ್ದಾರೆ. ಅವರಿಗೆ ಮಾರಾಟ ಮಾಡಲು ಅಧಿಕಾರವಿಲ್ಲ. ಇದರ ಬಗ್ಗೆ ಕ್ರಮ ವಹಿಸುವಂತೆ ಮುಖ್ಯಮಂತ್ರಿ ಹಾಗೂ ಜಿಲ್ಲಾಧಿಕಾರಿಗೆ ಪತ್ರ ಬರೆಯುತ್ತೇನೆ. ಎಂ.ಶ್ರೀನಿವಾಸ್‌, ಶಾಸಕರು, ಮಂಡ್ಯ

ಸರ್ಕಾರ ಒ ಆ್ಯಂಡ್‌ ಎಂ ಪದ್ಧತಿಯನ್ನು ಕೈಬಿಟ್ಟು, ಖಾಸಗಿಯವರಿಗೆ 40 ವರ್ಷಗಳ ಅವಧಿಗೆ ಗುತ್ತಿಗೆ ನೀಡಲು ಪ್ರಕ್ರಿಯೆಗಳು ನಡೆಯುತ್ತಿದೆ. ಇದು ಸರಿಯಾದ ಕ್ರಮವಲ್ಲ. ಸರ್ಕಾರವೇ ಉತ್ತಮ ದಕ್ಷ ಆಡಳಿತಾಧಿಕಾರಿಗಳನ್ನು ನೇಮಿಸಿ, ಸರ್ಕಾರಿ ಸ್ವಾಮ್ಯದಲ್ಲಿಯೇ ನಡೆಸಬೇಕು. ಇಲ್ಲದಿದ್ದರೆ ಕಾರ್ಖಾನೆಯ ಆಸ್ತಿಗೆ ಕುತ್ತು ಬರಲಿದೆ. ಎಂ.ಡಿ.ಜಯರಾಮ್‌, ಅಧ್ಯಕ್ಷರು, ಮೈಷುಗರ್‌ ಪ.ಜಾತಿ ನೌಕರರ ಸಂಘ

 

-ಎಚ್‌.ಶಿವರಾಜು

Advertisement

Udayavani is now on Telegram. Click here to join our channel and stay updated with the latest news.

Next