Advertisement

ಜೀವನಶೈಲಿ ಮೇಲೆ ಮಾಧ್ಯಮ ಪ್ರಭಾವದಿಂದ ಅಪಾಯ

09:40 AM Jun 01, 2019 | keerthan |

ಉಡುಪಿ: ಆಹಾರ ಕ್ರಮವೂ ಸೇರಿದಂತೆ ಇಂದಿನ ಜೀವನ ಶೈಲಿಯನ್ನು ಮಾಧ್ಯಮಗಳು ಪ್ರಭಾವಿಸುತ್ತಿವೆ. ಇದನ್ನು ನಿಯಂತ್ರಿಸದಿದ್ದರೆ ಮುಂದೆ ಅಪಾಯವಿದೆ ಎಂದು “ತರಂಗ’ ವ್ಯವಸ್ಥಾಪಕ ಸಂಪಾದಕಿ ಸಂಧ್ಯಾ ಎಸ್‌. ಪೈ ಅಭಿಪ್ರಾಯ ಪಟ್ಟಿದ್ದಾರೆ.

Advertisement

ಶ್ರೀಕೃಷ್ಣ ಮಠದಲ್ಲಿ ಸುವರ್ಣ ಗೋಪುರ ಸಮರ್ಪಣೋತ್ಸವ ಪ್ರಯುಕ್ತ ಶುಕ್ರವಾರ ಆಯೋಜಿಸ ಲಾಗಿದ್ದ “ಭಾರತೀಯ ಸಂಸ್ಕೃತಿ – ಸಂಪತ್ತು ಹಾಗೂ ಮಾಧ್ಯಮ’ ಕುರಿತ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅತ್ಯಂತ ಪ್ರಾಚೀನವಾದ ನಮ್ಮ ಸಂಸ್ಕೃತಿಯ ಚಿಗುರುಗಳು ಇಂದಿಗೂ ಹಾಸುಹೊಕ್ಕಾಗಿವೆ. ಕರುಣೆ, ಪ್ರೇಮ, ಔದಾರ್ಯ, ಆಹಾರ ಕ್ರಮ ನಮ್ಮ ಸಂಸ್ಕೃತಿಯ ಒಂದು ಭಾಗ. ಆದರೆ ಇಂದು ಉಡುಗೆ ತೊಡುಗೆ, ಆಹಾರ ಕ್ರಮಗಳು ಕೂಡ ಮಾಧ್ಯಮಗಳಿಂದ ಅದರಲ್ಲೂ ವಿಶೇಷವಾಗಿ ದೃಶ್ಯ ಮಾಧ್ಯಮಗಳಿಂದ ಪ್ರಭಾವಿತವಾಗಿವೆ. ನಿಜ ಜೀವನದಲ್ಲಿ ಇಲ್ಲದಿರುವ ವಿಕೃತವಾದ ಕೌಟುಂಬಿಕ ಸಂಬಂಧಗಳನ್ನು ಕಲ್ಪಿಸಿ ತೋರಿಸಲಾಗುತ್ತದೆ. ಇದರಿಂದ ಮನೆಯ ವಾತಾವರಣ ಕೆಡುವ ಅಪಾಯವೂ ಇದೆ. ಹೆಚ್ಚಿನ ದೃಶ್ಯಮಾಧ್ಯಮಗಳು ಬಹುರಾಷ್ಟ್ರೀಯ ಕಂಪೆನಿಗಳ ಹಿಡಿತದಲ್ಲಿವೆ. ಕೆಲವು ಮುದ್ರಣ ಮಾಧ್ಯಮಗಳು ರಾಜಕೀಯ ಪಕ್ಷಗಳ ನಿಯಂತ್ರಣದಲ್ಲಿವೆ ಎಂದು ಸಂಧ್ಯಾ ಪೈ ಹೇಳಿದರು.

ಭಾರತೀಯ ಸಂಸ್ಕೃತಿಯಿಂದ ಜಗತ್ತಿನಲ್ಲಿ ಶಾಂತಿ ಪ್ರಕಾಶ್‌ ಪಿ.ಎಸ್‌. ಬೆಂಗಳೂರು ಮಾತನಾಡಿ, “ಜನತೆ ಮಾಧ್ಯಮದ ಮೇಲೆ ನಂಬಿಕೆ ಇಟ್ಟಿದ್ದಾರೆ. ಭಾರತದ ಸಂಸ್ಕೃತಿ ಉಳಿದರೆ ಜಗತ್ತಿನಲ್ಲಿ ಶಾಂತಿ ಉಳಿಯುತ್ತದೆ. ಹಾಗಾಗಿ ಭಾರತೀಯ ಸಂಸ್ಕೃತಿಯನ್ನು ಉಳಿಸುವ ಜವಾಬ್ದಾರಿ ನಮ್ಮ ಮಾಧ್ಯಮಗಳಿಗಿದೆ. ಜನಕ್ಕೆ ಬೇಕು ಎಂಬ ಒಂದೇ ಕಾರಣಕ್ಕೆ ಸುದ್ದಿ /ಕಾರ್ಯಕ್ರಮಗಳನ್ನು ಕೊಡಬಾರದು. ಯಾವುದನ್ನು ಕೊಡಬೇಕು ಎಂಬ ವಿವೇಚನೆ ಮಾಧ್ಯಮ ಕ್ಕಿರಬೇಕು. ಮಾಧ್ಯಮಗಳು ಆಸ್ತಿ ಸಂಪಾದನೆಗೆ ಗಮನ ನೀಡುವ ಬದಲು ಮಾಧ್ಯಮಗಳೇ ದೇಶದ ಆಸ್ತಿಯಾಗಬೇಕು. ದೇಶದ ಸಂಸ್ಕೃತಿ ಉಳಿಸುವ ಕೆಲಸದಲ್ಲಿ ಮಾಧ್ಯಮಗಳು ಮುಂಚೂಣಿಯಲ್ಲಿರಬೇಕು’ ಎಂದು ಹೇಳಿದರು.

ಪತ್ರಕರ್ತ ಶೇಷ ಚಂದ್ರಿಕ ಅವರು ಮಾತನಾಡಿ, “ಮಾಧ್ಯಮಗಳಿಗೆ ಜನಾಭಿಪ್ರಾಯವೇ ಆಧಾರ. ಜನಾಭಿಪ್ರಾ ಯಕ್ಕೆ ವಿರುದ್ಧವಾಗಿ ಮಾಧ್ಯಮಗಳು ಹೋಗಬಾರದು’ ಎಂದರು.

Advertisement

ಅದಮಾರು ಮಠದ ಕಿರಿಯ ಯತಿ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ದ.ಕ ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ, ಅಂಚೆ ಇಲಾಖೆ ಉಡುಪಿ ವಿಭಾಗದ ಸಹಾಯಕ ನಿರ್ದೇಶಕ ಅನಂತರಾಮ್‌, ಉಡುಪಿ ವಿಭಾಗದ ಅಧೀಕ್ಷಕ ಸುಧಾಕರ ದೇವಾಡಿಗ ಉಪಸ್ಥಿತರಿದ್ದರು.
ಅಂಚೆ ಲಕೋಟೆ ಬಿಡುಗಡೆ
ಸುವರ್ಣ ಗೋಪುರ ಸಮರ್ಪಣೆ ಪ್ರಯುಕ್ತ ಅಂಚೆ ಇಲಾಖೆ ಹೊರತಂದ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆಗೊಳಿಸಲಾಯಿತು. ಬಿ.ಜಿ. ರವಿಕುಮಾರ್‌ ಬೆಂಗಳೂರು ಪ್ರಸ್ತಾವನೆಗೈದರು. ನಾಗರಾಜ ರಾವ್‌ ವರ್ಕಾಡಿ ಸ್ವಾಗತಿಸಿ, ಗೋಪಾಲ ಕೃಷ್ಣ ಪಾದೂರು ವಂದಿಸಿದರು. ವಿದ್ವಾಂಸ ಕೊರ್ಲಹಳ್ಳಿ ವೆಂಕಟೇಶ ಆಚಾರ್ಯ ಕಾರ್ಯಕ್ರಮ ನಿರ್ವ ಹಿಸಿದರು. ಹಿರಿಯ ಪತ್ರಕರ್ತ ದಾಮೋದರ ಐತಾಳ ಮತ್ತು ಶ್ರೀಕೃಷ್ಣ ಮಠದ ಮಾಧ್ಯಮ ವಿಭಾಗದ ಜನಾರ್ದನ ಆಚಾರ್ಯ ಅವರನ್ನು ಸಮ್ಮಾನಿಸಲಾಯಿತು.

ಸುದ್ದಿಗಾರರು – ಶುದ್ಧಿಗಾರರು
“ಮಾಧ್ಯಮಗಳು ಇರುವುದನ್ನು ಪ್ರಸಾರ ಮಾಡಬೇಕೇ ಹೊರತು ವ್ಯಾಪಾರೀಕರಣ ಉದ್ದೇಶದಿಂದ ಸುಳ್ಳು ಸುದ್ದಿ ಕೊಡಬಾರದು. ಪತ್ರಕರ್ತರು ಸುದ್ದಿಗಾರರಾಗುವ ಜತೆಗೆ ಶುದ್ಧಿಗಾರರೂ ಆಗಬೇಕು. ಒಳ್ಳೆಯ ಸುದ್ದಿಯನ್ನು ಜನರಿಗೆ ಮುಟ್ಟಿಸಬೇಕು’ ಎಂದು ಪರ್ಯಾಯ ಶ್ರೀ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next