Advertisement

ಹಣದುಬ್ಬರ:  ಹಾಗೆಂದರೇನು?

06:00 AM Aug 13, 2018 | |

ಹಣದುಬ್ಬರ ಯಾವಾಗಲೂ ಉತ್ತರಮುಖೀ ಎನ್ನುವುದು ಸಾಮಾನ್ಯ ತಿಳುವಳಿಕೆ. ಇದರಲ್ಲಿ ಸತ್ಯವಿಲ್ಲದಿಲ್ಲ. ಯಾವುದೇ ಪದಾರ್ಥ ಮತ್ತು ಸೇವೆಯ ಬೆಲೆ ಒಮ್ಮೆಲೇ ಏರಿದರೆ, ಅದು  ಇಳಿಯುವುದು ಅಸಾಧ್ಯ. ಅಕಸ್ಮಾತ್‌ ಇಳಿದರೂ ಅದು ಮಾರ್ಜಿನಲ್‌

Advertisement

ಹಣದುಬ್ಬರವನ್ನು ಜನಸಾಮಾನ್ಯರ ಭಾಷೆಯಲ್ಲಿ ಬೆಲೆ ಏರಿಕೆ ಎನ್ನುತ್ತಾರೆ. ಜನಸಾಮಾನ್ಯರು ಬಳಸುವ  ಪದಾರ್ಥಗಳು ಮತ್ತು ಸೇವೆಯ ದರ ಯಾವ ಪ್ರಮಾಣದಲ್ಲಿ ಏರುತ್ತದೆ ಎನ್ನುವುದನ್ನು ಅಳೆಯುವ ಮಾಪನ ಮಾಡುವ ಪರಿಯೇ ಹಣದುಬ್ಬರ. ಈ ಪ್ರಕ್ರಿಯೆಯಲ್ಲಿ ಒಂದು ಕರೆನ್ಸಿಗೆ ಖರೀದಿಸುವ ಶಕ್ತಿ ಹೇಗೆ  ಕಡಿಮೆ ಅಗುತ್ತದೆ ಎನ್ನುವುದು ಮುಖ್ಯ. ಸರಳವಾಗಿ  ಹೇಳುವುದಾದರೆ, ಇದನ್ನು ಸೇವೆಯ ದರ ನಿರಂತರವಾಗಿ ಏರುವ ಪ್ರಕ್ರಿಯೆ ಎನ್ನುತ್ತಾರೆ.  ಈ ಏರಿಕೆ ಅಥವಾ ಇಳಿಕೆಯನ್ನು  ಹಿಂದಿನ ವರ್ಷಕ್ಕೆ ಹೋಲಿಸಿ ಶೇಕಡಾವಾರು ಪ್ರಮಾಣದಲ್ಲಿ  ಹೇಳುತ್ತಾರೆ.  ಉದಾಹರಣೆಗೆ- ಒಂದು  ತೆಂಗಿನಕಾಯಿಯ ಬೆಲೆ 2017ರಲ್ಲಿ  20 ರೂಪಾಯಿ ಇದ್ದು, 2018 ರಲ್ಲಿ  25 ರೂಪಾಯಿ ಆಗಿದೆ ಅಂದುಕೊಳ್ಳಿ. ಅಂದರೆ  ತೆಂಗಿನಕಾಯಿಯ ಬೆಲೆ ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು ಶೇ. 25 ರಷ್ಟು ಏರಿದೆ. ಹಾಗೆಯೇ ರೂಪಾಯಿಯ ಖರೀದಿ ಶಕ್ತಿ  ಕೂಡಾ ಇಳಿದಿದೆ ಎಂತಲೇ ಅರ್ಥ.

ಹಣದುಬ್ಬರಕ್ಕೆ ಕಾರಣ ಏನು?
ಅರ್ಥಶಾಸ್ತ್ರದಲ್ಲಿರುವ ಬೇಡಿಕೆ ಮತ್ತು ಪೂರೈಕೆ ತತ್ವ ಇಲ್ಲೂ ಇದೆ. ಪದಾರ್ಥಗಳ ಮತ್ತು ಸೇವೆಯ ದರ ಹೆಚ್ಚಳಕ್ಕೆ ಮೂಲ ಕಾರಣ ಸಾಮಾನ್ಯವಾಗಿ ಬೇಡಿಕೆ, ಪೂರೈಕೆ.  ಪೂರೈಕೆಯು ಬೇಡಿಕೆಗೆ ಅನುಗುಣವಾಗಿದ್ದರೆ, ಬೆಲೆಗಳಲ್ಲಿ ಸ್ಥಿರತೆ ಇರುತ್ತದೆ. ಆದರೆ, ಪೂರೈಕೆಗೆ ಮೀರಿ ಬೇಡಿಕೆಯು ಹೆಚ್ಚಾದಾಗ, ಉದ್ಯಮದ ಉತ್ಪನ್ನದ  ಸಾಮರ್ಥ್ಯ ಕುಂಠಿತವಾದಾಗ, ಪದಾರ್ಥಗಳ ಬೆಲೆ ತೀವ್ರವಾಗಿ  ಏರುತ್ತದೆ.  ಇದನ್ನು ಸಾಮಾನ್ಯವಾಗಿ ಬೇಡಿಕೆ ಮೂಲದ ಹಣದುಬ್ಬರ ಎನ್ನುತ್ತಾರೆ. ಇದಕ್ಕೆ ಹೊರತಾಗಿ ವೆಚ್ಚ  ಆಧಾರಿತ ಹಣದುಬ್ಬರವೂ (ಬೆಲೆ ಏರಿಕೆ)  ಇರುತ್ತದೆ.  ಮಾವು ಹಾಗೂ ಟೊಮೆಟೊ ಹಣ್ಣುಗಳು ನಿರೀಕ್ಷೆಗಿಂತ ಹೆಚ್ಚು ಪ್ರಮಾಣದಲ್ಲಿ  ಮಾರುಕಟ್ಟೆಗೆ  ಬಂದು, ಅವುಗಳ  ಬೆಲೆ  ನೆಲ ಕಚ್ಚಿ, ಬೆಳೆಗಾರರು ಅವುಗಳನ್ನು  ರಸ್ತೆಗೆ ಸುರಿದ ಉದಾಹರಣೆಗಳು ಇವೆ.  ಹಾಗೆಯೇ, ಈರುಳ್ಳಿ  ಸ್ಟಾಕ್‌ ಕಡಿಮೆಯಾಗಿ, ಅದರ ಬೆಲೆ ಮುಗಿಲಿಗೆ ಏರಿ,  ಇದರ ಪರಿಣಾಮ ಒಂದು ಸರ್ಕಾರದ ಪತನಕ್ಕೆ ದಾರಿಯಾದ ಉದಾಹರಣೆಯೂ ಇದೆ.  ಒಂದು ಪದಾರ್ಥದ ಉತ್ಪನ್ನ ವೆಚ್ಚ ಎಂದರೆ  ಕಚ್ಚಾ  ವಸ್ತುಗಳ ವೆಚ್ಚ, ಕಾರ್ಮಿಕರ ವೆಚ್ಚ, ಆಡಳಿತಾತ್ಮಕ ವೆಚ್ಚ, ವಿತರಣೆ ವೆಚ್ಚ, ಸಾಗಾಟ ವೆಚ್ಚ  ಮುಂತಾದವುಗಳೆಲ್ಲ ಸೇರುತ್ತವೆ.  ಇವುಗಳ  ಬೆಲೆ  ಹೆಚ್ಚಾದಂತೆ ಪದಾರ್ಥಗಳ  ಬೆಲೆಯೂ ಹೆಚ್ಚುತ್ತವೆ. ಇವು ಸಾಮಾನ್ಯವಾಗಿ ಹಣದುಬ್ಬರ ಅಥವಾ ಬೆಲೆ ಏರಿಕೆಯ ಹಿಂದೆ  ಕಾಣುವ ಕಾರಣಗಳು. ಹಣದುಬ್ಬರಕ್ಕೆ ಇನ್ನೊಂದು ಮುಖ್ಯಕಾರಣ  ಅನಗತ್ಯವಾಗಿ ಕೊರತೆಯನ್ನು ಸೃಷ್ಟಿಸಿ,  ಹೆಚ್ಚಿನ ಬೇಡಿಕೆಯ  ಅವಧಿ ಮತ್ತು ಬೇಡಿಕೆಯ ಪ್ರಮಾಣವನ್ನು ಊಹಿಸಿ ವಸ್ತುಗಳನ್ನು ಸಾಕಷ್ಟು  ಪ್ರಮಾಣದಲ್ಲಿ  ಮಾರುಕಟ್ಟೆಗೆ ಬರದಂತೆ ಜಾಣ್ಮೆಯಿಂದ ತಡೆದು. ಬೇಡಿಕೆ ಮತ್ತು ಪೂರೈಕೆ  ಸಿದ್ಧಾಂತವನ್ನು ತಮ್ಮ ಲಾಭಕ್ಕೆ  ಬಳಸಿಕೊಳ್ಳುವ  ಕೆಲವರ ಕುಟಿಲ ತಂತ್ರದಿಂದ ಬೆಲೆ ಏರಿಕೆಯ ಮರಣ ಮೃದಂಗ ಬಾರಿಸುತ್ತದೆ.   

ಯಾರು ಮತ್ತು ಹೇಗೆ ಲೆಕ್ಕ ಹಾಕುತ್ತಾರೆ?
ಹಣದುಬ್ಬರವನ್ನು ಸಗಟು ದರ ಸೂಚ್ಯಂಕ ಮತ್ತು ಗ್ರಾಹಕರ ಬೆಲೆ ಸೂಚ್ಯಂಕ ಆಧಾರದ ಮೇಲೆ ಲೆಕ್ಕ ಹಾಕುತ್ತಾರೆ. ಸಗಟು ಸೂಚ್ಯಂಕವನ್ನು ಕೈಗಾರಿಕಾ ಮತ್ತು ವಾಣಿಜ್ಯ ಮಂತ್ರಾಲಯ, ಅರ್ಥಿಕ ಸಲಹೆಗಾರರ ಕಾರ್ಯಾಲಯದವರು ಸಿದ್ದ ಪಡಿಸುತ್ತಾರೆ. ಗ್ರಾಹಕರ ಬೆಲೆ ಸೂಚ್ಯಂಕವನ್ನು ಯೋಜನಾ ಅನುಷ್ಠಾನ ಮಂತ್ರಾಲಯವು ತಯಾರು ಮಾಡುತ್ತದೆ. 

2012 ರನ್ನು ಬೇಸ್‌ ವರ್ಷ ಎಂದು ಇವು ಪರಿಗಣಿಸುತ್ತಿದ್ದು,  ಗ್ರಾಹಕರ ಸೂಚ್ಯಂಕದಲ್ಲಿ  260 ಮತ್ತು ಸಗಟು ಸೂಚ್ಯಂಕದಲ್ಲಿ  697 ಪದಾರ್ಥ ಮತ್ತು ಸೇವೆಗಳ ಬಾಸ್ಕೆಟ್‌ ಅನ್ನು ಉಪಯೋಗಿಸಲಾಗುತ್ತದೆ.  ಹಣದುಬ್ಬರವನ್ನು ಲೆಕ್ಕ ಹಾಕಲು ರಿಸರ್ವ್‌ ಬ್ಯಾಂಕ್‌  ಸಗಟು ಮತ್ತು  ಗ್ರಾಹಕರ ಬೆಲೆ ಸೂಚ್ಯಂಕಗಳೆರಡನ್ನೂ ಉಪಯೋಗಿಸುತ್ತಿದ್ದು,  ಈಗ ಗ್ರಾಹಕರ  ಬೆಲೆ ಸೂಚ್ಯಂಕವನ್ನು ಹೆಚ್ಚಾಗಿ ಬಳಕೆ ಮಾಡುತ್ತದೆ.   ಹಣದುಬ್ಬರವನ್ನು ಲೆಕ್ಕಹಾಕುವಾಗ ಅಭಿವೃದ್ದಿ ಹೊಂದಿದ  ರಾಷ್ಟ್ರಗಳು ಬಹುತೇಕ  ಕೇವಲ  ಗ್ರಾಹಕರ ಬೆಲೆ ಸೂಚ್ಯಂಕವನ್ನು ಬಳಸುತ್ತವೆ. ಗ್ರಾಹಕರ ಬೆಲೆ ಸೂಚ್ಯಂಕವೇ ಬೆಲೆ ಏರಿಕೆಯ  ನಿಜವಾದ  ಮಾಪನ  ಎನ್ನುವ ತರ್ಕ ಇದರ ಹಿಂದೆ ಇದೆ.  ಅಂತಿಮವಾಗಿ  ಗ್ರಾಹಕರ ಜೇಬಿಗೆ ಆಗುವ ಹೆಚ್ಚಿನ  ಬೆಲೆ ಏರಿಕೆಯ ಮಾಪನ. 

Advertisement

ಹಣದುಬ್ಬರ ಯಾವಾಗಲೂ ಉತ್ತರಮುಖೀ ಎನ್ನುವುದು ಸಾಮಾನ್ಯ ತಿಳುವಳಿಕೆ. ಇದರಲ್ಲಿ ಸತ್ಯವಿಲ್ಲದಿಲ್ಲ. ಯಾವುದೇ ಪದಾರ್ಥ ಮತ್ತು ಸೇವೆಯ ಬೆಲೆ ಒಮ್ಮೆಲೇ ಏರಿದರೆ, ಅದು  ಇಳಿಯುವುದು ಅಸಾಧ್ಯ. ಅಕಸ್ಮಾತ್‌ ಇಳಿದರೂ ಅದು ಮಾರ್ಜಿನಲ್‌ ಇದಕ್ಕೆ ವ್ಯತಿರಿಕ್ತವಾಗಿ 1976 ರಲ್ಲಿ   ಹಣದುಬ್ಬರ  -11.31% ಗೆ ಇಳಿದಿತ್ತು. ಬಹುಶಃ ದೇಶದ ಅರ್ಥಿಕತೆಯಲ್ಲಿ ಇದೊಂದು ನ ಭೂತೋ ನಭವಿಷ್ಯತಿ ಬೆಳವಣಿಗೆ ಇರಬಹುದು.  ಹಾಗೆಯೇ 1974 ರಲ್ಲಿ ಅತಿ ಹೆಚ್ಚು ಅಂದರೆ ಶೇ.34.68ರಷ್ಟು  ಏರಿತ್ತು. ಇದೂ ಕೂಡಾ ಇನ್ನೂ ದಾಖಲೆಯಾಗಿಯೇ ಇದೆ.

ಹಣದುಬ್ಬರ  ದೇಶದ ಅರ್ಥಿಕತೆಗಾಗಲೀ ಅಥವಾ ವೈಯಕ್ತಿಕ  ಹಣಕಾಸು ನಿರ್ವಹಣೆಗಾಗಲೀ ಒಳ್ಳೆಯ ಬೆಳವಣಿಗೆ ಯಾಗಿರುವುದಿಲ್ಲ.  ಬಡ್ಡಿದರವು ಹಣದುಬ್ಬರದ ಪ್ರಮಾಣಕ್ಕಿಂತ ಹೆಚ್ಚಾಗಿರದಿದ್ದರೆ, ಹಣದುಬ್ಬರ  ಕರೆನ್ಸಿಯ  ಮೌಲ್ಯವನ್ನು ಅಥವಾ  ಖರೀದಿ ಶಕ್ತಿಯನ್ನು ಕುಗ್ಗಿಸುತ್ತದೆ.  ಹಣದುಬ್ಬರದ ಹೆಚ್ಚಿದಂತೆ ಉಳಿತಾಯ ಮಾಡುವವರ ಠೇವಣಿ ಮೇಲೆ ರಿಟರ್ನ್ ಕಡಿಮೆಯಾಗುತ್ತದೆ. ಹಣ ದುಬ್ಬರಕ್ಕೆ ಮುಖ್ಯ ಕಾರಣ, ತೈಲ ದರ ವೆಂದು ಹೇಳಲಾಗುತ್ತದೆ. ತೈಲದರದಲ್ಲಿ ಶೇ.10ರಷ್ಟು  ಏರಿಕೆ ಕಂಡುಬಂದರೆ, ಹಣ ದುಬ್ಬರ ಶೇ. 25ರಷ್ಟು  ಹೆಚ್ಚಾಗುತ್ತದಂತೆ.

ನಿಯಂತ್ರಿಸುವುದು ಹೇಗೆ?
ಸಾಮಾನ್ಯವಾಗಿ ಸರ್ಕಾರ ಬಾಂಡ್‌ ದರವನ್ನು  ಇಳಿಸಿ, ಬ್ಯಾಂಕ್‌ಗಳ ಬಡ್ಡಿದರವನ್ನು ಏರಿಸಿ ಮಾರುಕಟ್ಟೆಯಲ್ಲಿ ಹಣ ಪೂರೈಕೆಯನ್ನು ನಿಯಂತ್ರಿಸುತ್ತದೆ.   ಹಣದ ಪ್ರವಾಹ ನಿಯಂತ್ರಣಕ್ಕೆ ಬಂದಂತೆ, ಹಣದುಬ್ಬರದ  ಪ್ರಮಾಣ ಇಳಿಯುತ್ತದೆ. ಹಾಗೆಯೇ, ವೆಚ್ಚವನ್ನು ಕಡಿಮೆ ಮಾಡುವುದೂ  ಹಣದುಬ್ಬರ ನಿಯಂತ್ರಣದ ಒಂದು ಅಸ್ತ್ರ. ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಬಲಗೊಳಿಸಿ, ಬೆಲೆ ಏರಿಕೆಯನ್ನು ನಿಯಂತ್ರಿಸಿ  ಹಣದುಬ್ಬರವನ್ನು ತಡೆಗಟ್ಟುತ್ತಾರೆ. ಸರಕು ಸಾಗಾಣಿಕೆಯಲ್ಲಿನ ಅಡೆ ತಡೆಗಳನ್ನು ಹೋಗಲಾಡಿಸಿ, ಸರಕು ಸರಂಜಾಮುಗಳು  ಗ್ರಾಹಕರನ್ನು ಸರಿಯಾದ ಸಮಯದಲ್ಲಿ  ತಲುಪುವಂತೆ ಮಾಡುವುದು  ಹಣದುಬ್ಬರ ನಿಯಂತ್ರಣದ ಇನ್ನೊಂದು ವಿಧ.ಇದನ್ನು ಯಾರು ಬಳಸುತ್ತಾರೆ.?ದ್ವೆ„ಮಾಸಿಕ ಹಣಕಾಸು ನೀತಿಯನ್ನು ಪ್ರಕಟಿಸುವಾಗ ರಿಸರ್ವ್‌ ಬ್ಯಾಂಕ್‌ ಹಣದುಬ್ಬರದ ಪ್ರಮಾಣವನ್ನು ಮುಖ್ಯವಾಗಿ ಪರಿಗಣಿಸುತ್ತದೆ. ಬ್ಯಾಂಕ್‌ಗಳು ಬಡ್ಡಿಯನ್ನು, ರೆಪೋ ರೇಟ್‌ಗಳನ್ನು ನಿಗದಿಗೊಳಿಸುವಾಗ ಇದನ್ನೇ ನೋಡುತ್ತವೆ. ಇವು ಗ್ರಾಹಕರ ಬೆಲೆ ಸೂಚ್ಯಂಕ ಎನ್ನುವುದು ದೇಶದ ಅರ್ಥಿಕತೆ  ಸಾಗುತ್ತಿರುವ ಮಾರ್ಗವನ್ನು ತೋರಿಸುತ್ತದೆ. 2017 ರಲ್ಲಿ ಸರಾಸರಿ ಶೇ. 3.60ರಷ್ಟು ಇದ್ದ ಹಣದುಬ್ಬರ 2018 ರ  ಅರು ತಿಂಗಳಿನಲ್ಲಿ ಸರಾಸರಿ ಶೇ.4.95ರಷ್ಟು  ಏರಿದೆ.  ಹಣದುಬ್ಬರವನ್ನು ತಡೆಯುವಲ್ಲಿ ಸರ್ಕಾರ ಮತ್ತು ರಿಸರ್ವ್‌ ಬ್ಯಾಂಕ್‌ ಇವೆರೆಡರ  ಹೊಣೆಗಾರಿಕೆ ಇದೆ.

– ರಮಾನಂದ ಶರ್ಮಾ

Advertisement

Udayavani is now on Telegram. Click here to join our channel and stay updated with the latest news.

Next