ಬಾಗಲಕೋಟೆ: ಕೊರೊನಾ 2ನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಇದರಿಂದ ಜನರು ಸಾಕಷ್ಟು ಸಂಕಷ್ಟ ಎದುರಿಸುತ್ತಿದ್ದಾರೆ. ನಗರದಲ್ಲಿ ಸೋಂಕು ನಿಯಂತ್ರಣಕ್ಕೆ ಮುಂದಾಗಬೇಕಿದ್ದ ನಗರಸಭೆ ಅಧಿಕಾರಿಗಳು, ಜನರಿಗೆ ಮತ್ತಷ್ಟು ತೊಂದರೆ ಕೊಡುವ ಕೆಲಸ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಮಾಧ್ಯಮ ವಕ್ತಾರ ನಾಗರಾಜ ಹದ್ಲಿ ಮಾತನಾಡಿ, ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಕಳೆದ ಒಂದು ಹಲವು ದಿನಗಳಿಂದ ಕೊರೊನಾ ಕರ್ಫ್ಯೂ ಹೇರಲಾಗಿದೆ. ಇಂತಹ ಸಂದರ್ಭದಲ್ಲಿ ಬಾಗಲಕೋಟೆಯ ನಗರಸಭೆಯ ಪೌರಾಯುಕ್ತರು ಮತ್ತು ಅಧಿಕಾರಿಗಳು ಕೊರೊನಾ ಸೋಂಕು ಹರಡುತ್ತಿರುವುದನ್ನು ತಡೆಗಟ್ಟುವಲ್ಲಿ ಕ್ರಮ ತೆಗೆದುಕೊಳ್ಳುವುದು ಬಿಟ್ಟು ಬಾಗಲಕೋಟೆ ತರಕಾರಿ ಮಾರುಕಟ್ಟೆಯಲ್ಲಿ ರಸ್ತೆ ಡಾಂಬರೀಕರಣ ಮಾಡುವ ನೆಪದಲ್ಲಿ ವ್ಯಾಪಾರಸ್ಥರು ತಮ್ಮ ಅಂಗಡಿಯ ಮೇಲೆ ಬಿಸಿಲಿನ ತಾಪಕ್ಕೆ ಮತ್ತು ಮಳೆನೀರು ಅಂಗಡಿ ಒಳಗೆ ಬರದ ಹಾಗೆ ರಕ್ಷಣೆಗೆ ಹಾಕಲಾಗಿರುವ ತಗಡು ತೆರವುಗೊಳಿಸುವ ಮೂಲಕ ವ್ಯಾಪಾರಸ್ಥರಿಗೆ, ಜನರಿಗೆ ಮತ್ತಷ್ಟು ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಬಾಗಲಕೋಟೆ ಜನತೆ ಮತ್ತು ವ್ಯಾಪಾರಸ್ಥರು ಈಗಲೇ ಕೊರೊನಾ ಸೋಂಕಿನಿಂದ ನಲುಗಿ ಕಂಗಾಲಾಗಿದ್ದಾರೆ. ಕಳೆದ ಒಂದು ತಿಂಗಳಿಂದ ವ್ಯಾಪಾರ-ವಹಿವಾಟು ಸ್ಥಗಿತವಾಗಿದೆ. ಎರಡು ಹೊತ್ತಿನ ಊಟಕ್ಕೂ ಪರದಾಡುತ್ತಿರುವ ಇಂತಹ ಸಮಯದಲ್ಲಿ ನಗರಸಭೆ ಅಧಿಕಾರಿಗಳಿಗೆ ಅಭಿವೃದ್ಧಿಯ ಹೆಸರಿನಲ್ಲಿ ಜನರಿಗೆ ತೊಂದರೆ ಕೊಡುತ್ತಿದ್ದಾರೆ. ಕನಿಷ್ಠ ಮಾನವೀಯತೆಯೂ ಇಲ್ಲದಂತೆ ವರ್ತಿಸುತ್ತಿರುವುದು ದುರ್ದೈವದ ಸಂಗತಿ ಎಂದು ಹೇಳಿದ್ದಾರೆ.
ಅಭಿವೃದ್ಧಿಗಾಗಿ ಮೀಸಲಿಟ್ಟ ಹಣ ವೆಂಟಿಲೆಟರ್ ಆಸ್ಪತ್ರೆಯಲ್ಲಿ ಬೆಡ್ ಹೆಚ್ಚಿಸುವುದಕ್ಕೆ ಆಕ್ಸಿಜನ್ ಖರೀದಿಸಲು ಉಪಯೋಗಿಸಬಹುದಿತ್ತು. ಅದನ್ನ ಬಿಟ್ಟು ಈ ಸಂಕಷ್ಟದ ಸಮಯದಲ್ಲಿ ಅಮಾನವಿಯವಾಗಿ ನಡೆದುಕೊಳ್ಳುತ್ತಿರುವುದು ಬೇಸರದ ಸಂಗತಿ. ಸಾರ್ವಜನಿಕರಿಗೆ-ವ್ಯಾಪಾರಸ್ಥರಿಗೆ ಸಾಂತ್ವನ ಧೈರ್ಯ ಹೇಳಬೇಕಾದ ಈ ಸಮಯದಲ್ಲಿ ನಗರಸಭೆ ಅಧಿಕಾರಿಗಳ ಈ ದುಂಡಾವರ್ತನೆ ಜಿಲ್ಲಾ ಕಾಂಗ್ರೆಸ್ ಘಟಕ ಖಂಡಿಸುತ್ತದೆ. ತಕ್ಷಣವೇ ಪೌರಾಯುಕ್ತ ಮತ್ತು ನಗರಸಭೆ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.