Advertisement

ಕೀಳರಿಮೆ, ಭಯ ಬಿಟ್ಟು ಮುನ್ನುಗ್ಗಿ

04:44 PM Sep 03, 2018 | |

ಬಳ್ಳಾರಿ: ಹಿಂದೆ ರಾಜರ ಕಾಲದಲ್ಲಿ ರಾಜನ ಮಗ ರಾಜನಾಗುವ ಪರಿಸ್ಥಿತಿ ಈಗಿಲ್ಲ. ಈಗೆಲ್ಲ ಪ್ರಜಾಪ್ರಭುತ್ವ ವ್ಯವಸ್ಥೆ. ಇಲ್ಲಿ ಯಾರು ಏನು ಬೇಕಾದರೂ ಆಗಬಹುದು. ಕಠಿಣ ಪರಿಶ್ರಮದೊಂದಿಗೆ ಕೀಳರಿಮೆ, ಭಯವನ್ನು ಬಿಟ್ಟು ಮುನ್ನುಗ್ಗಿದಾಗ ಯಶಸ್ಸು ಸಾಧ್ಯ ಎಂದು ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ.ಚನ್ನಣ್ಣನವರ್‌ ವಿದ್ಯಾರ್ಥಿಗಳಿಗೆ
ಸೂಚಿಸಿದರು.

Advertisement

ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಸಮಾಜ ಕಲ್ಯಾಣ ಇಲಾಖೆ, ಯುವ ಸಬಲೀಕರಣ ಇಲಾಖೆ ಸಹಯೋಗದಲ್ಲಿ ಭಾನುವಾರ ಏರ್ಪಡಿಸಿದ್ದ “ಯುವಕರ ನಡೆ, ಸಾಧನೆಯ ಕಡೆ’ ಎಂಬ
ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ಕಾರ್ಯಾಗಾರದಲ್ಲಿ ಅವರು ಉಪನ್ಯಾಸ ನೀಡಿದರು.

ಹಿಂದೆ ಬಲಶಾಲಿಗಳು ಸಣ್ಣವರನ್ನು ಹೊಡೆದು ನಾಯಕನಾಗುತ್ತಿದ್ದ. ಆದರೆ, ಈಗ ಆ ಪರಿಸ್ಥಿತಿಯಿಲ್ಲ. ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಸಮಾನರು. ಎಲ್ಲರಿಗೂ ಸಮಾನ ಅವಕಾಶಗಳಿವೆ. ಹಾಗೆ ಸರ್ಕಾರದ ಎಲ್ಲ ಹುದ್ದೆಗಳು ಪ್ರಜಾಪ್ರಭುತ್ವದ ಒಂದು ಭಾಗ. ಆದ್ದರಿಂದ ಯಾರೂ ತಮಗಿಂತ ಹೆಚ್ಚು ಅಂಕಗಳಿಸಿದವರನ್ನು, ಇಂಗ್ಲಿಷ್‌ ಮಾತನಾಡುವವರನ್ನು ಕಂಡು ಕೀಳರಿಮೆ ಬೆಳೆಸಿಕೊಳ್ಳುವುದು ಬೇಡ. ಪ್ರತಿಯೊಬ್ಬರಿಗೂ ತಮ್ಮದೇ ಆದ ಪ್ರತ್ಯೇಕ ಮಾರ್ಗಗಳಿರುತ್ತವೆ. ಯಾವುದೇ ವಿಷಯ, ವಿಚಾರಕ್ಕೆ ಭಯಪಡದೆ, ಧೈರ್ಯವನ್ನು ಮೈಗೂಡಿಸಿಕೊಂಡು ಕಠಿಣ ಪರಿಶ್ರಮದಿಂದ ಮುನ್ನುಗ್ಗಬೇಕು ಎಂದವರು ಸಲಹೆ ನೀಡಿದರು.

ಉನ್ನತ ಹುದ್ದೆಗಳು ಕೇವಲ ಶ್ರೀಮಂತ ಮಕ್ಕಳಿಗಷ್ಟೇ ಸೀಮಿತ ಎಂಬ ಮನೋಭಾವವನ್ನು ಈ ಕ್ಷಣದಿಂದಲೇ ತಲೆಯಿಂದ ತೆಗೆದುಹಾಕಿ ಎಂದ ಅವರು, ಬಡ, ಕೂಲಿ ಕಾರ್ಮಿಕರ ಮಕ್ಕಳು ಸಹ ಉನ್ನತ ಹುದ್ದೆಗಳನ್ನು ಅಲಂಕರಿಸಬಹುದು. ಯಾವುದೇ ತರಬೇತಿ ಕೇಂದ್ರಗಳಿಗೆ ಹೋಗದಿದ್ದರೂ ಮನೆಗಳಲ್ಲೇ ಇದ್ದು ಸತತ ಅಭ್ಯಾಸ ಮಾಡಿ
ಯಶಸ್ಸು ಸಾಧಿಸಬಹುದು. ಸಮಸ್ಯೆಯಿದೆ ಎಂದು ಹಿಂಜರಿಯುವ ಬದಲಿಗೆ ಎಂಥಾ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸುವ ಎದೆಗಾರಿಕೆ ನಿಮ್ಮಲ್ಲಿ ಮೂಡಬೇಕು. ಆಗ ಮಾತ್ರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಾಧ್ಯ ಎಂದರು. ಯುಪಿಎಸ್‌ಸಿ ಪರೀಕ್ಷೆಗೆ ಪ್ರತಿವರ್ಷ ಸುಮಾರು 10 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸುತ್ತಾರೆ.

ಅದರಲ್ಲಿ ಯಶಸ್ಸು ಕಾಣುವವರ ಸಂಖ್ಯೆ ಕೇವಲ 0.02. ಅನಾನುಕೂಲಗಳ ಬಗ್ಗೆ ಕಾರಣ ಹೇಳುವವರು ಯಶಸ್ಸಿನ ಪಟ್ಟಿಯಲ್ಲಿ ಇರಲು ಅರ್ಹರಲ್ಲ. ಪ್ರತಿ ಮಗುವಿಗೂ ಜಗತ್ತನ್ನಾಳುವ ಶಕ್ತಿಯಿದೆ. ವ್ಯವಸ್ಥೆಯಲ್ಲಿರುವ ಲೋಪಗಳ ಬಗ್ಗೆ ಆಕ್ರೋಶಗಳಿದ್ದರೆ ಕೇವಲ ವಿಮರ್ಶಕರಾಗಿ ಉಳಿಯದೇ, ನಿಮ್ಮಲ್ಲಿನ ಅಂಜಿಕೆ, ಭಯವನ್ನು ಬಿಟ್ಟು ಮುನ್ನುಗ್ಗುವುದನ್ನು ಕಲಿಯಬೇಕು ಎಂದರು.

Advertisement

ಜಿಪಂ ಸಿಇಒ ಡಾ| ಕೆ.ವಿ.ರಾಜೇಂದ್ರ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸುವಾಗ ವಿಶ್ವಾಸ ಮುಖ್ಯ. ಯಾವುದೇ ಕಾರಣಕ್ಕೂ ಸಾಧನೆ ಅರ್ಧದಲ್ಲಿ ಕೈಬಿಡಬಾರದು. ಕಷ್ಟಗಳನ್ನು ಮೆಟ್ಟಿನಿಂತವರು ಐಎಎಸ್‌, ಐಪಿಎಸ್‌ ಅಧಿಕಾರಿಗಳಾಗುತ್ತಾರೆ. ಜೀವನದಲ್ಲಿ ಛಲ, ಗುರಿ ಹೊಂದಿದ್ದವರು ಸಲಭವಾಗಿ ಯುಪಿಎಸ್‌ಸಿ ಪರೀಕ್ಷೆಯನ್ನು ಎದುರಿಸಿ ಗುರಿಯನ್ನು ಮುಟ್ಟಬಲ್ಲರು ಎಂದ ಅವರು, ಬಹುತೇಕರು ಕಷ್ಟದ ಜೀವನ ನಡೆಸಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಇಂದು ಉನ್ನತ ಅಧಿಕಾರಿಗಳಾಗಿದ್ದಾರೆ. ನನ್ನೊಂದಿಗೆ ಐಎಎಸ್‌ ಪಾಸ್‌ ಮಾಡಿದ್ದ ಶೇ.80ರಷ್ಟು ವಿದ್ಯಾರ್ಥಿಗಳು ಬಿಪಿಎಲ್‌ ಕುಟುಂಬದಿಂದ ಬಂದವರಾಗಿದ್ದರು ಎಂದರು. 

ಕೊಪ್ಪಳ ಜಿಪಂ ಸಿಇಒ ವೆಂಕಟರಾಜ, ಅರಣ್ಯ ಇಲಾಖೆಯ ಉಪಸಂರಕ್ಷಣಾಧಿಕಾರಿ ರಮೇಶ್‌ ಕುಮಾರ್‌ ಉಪನ್ಯಾಸ ನೀಡಿದರು. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಆಸನಗಳ ಕೊರತೆಯಾಗಿತ್ತು. ಹೊರಗಡೆ ಎಲ್‌ಇಡಿ ಪರದೆ ಮತ್ತು ಆಸನಗಳ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಾಗಾರದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಹಿರಿಯ ಉಪನಿರ್ದೇಶಕ ರಾಜಪ್ಪ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಪಿ.ಶುಭಾ,
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ಸರಳಾದೇವಿ ಕಾಲೇಜು ಪ್ರೋ| ಅಬ್ದುಲ್‌ ಮುತಾಲಿಬ್‌ ಇದ್ದರು ಐಎಎಸ್‌, ಐಪಿಎಸ್‌ ಲಾಭದಾಯಕ ಹುದ್ದೆಯಲ್ಲ. ರಾತ್ರೋರಾತ್ರಿ ಶ್ರೀಮಂತರಾಗಲ್ಲ. ಅಲ್ಲೂ ಸಾಕಷ್ಟು ಕಷ್ಟಗಳಿವೆ. ಸುತ್ತಲೂ ಇರುವವರೇ ನಮ್ಮ ಕಾಲೆಳೆಯುತ್ತಾರೆ. ಈ ಎಲ್ಲವನ್ನು ಸಮರ್ಥವಾಗಿ ಎದುರಿಸಲು ಮಾನಸಿಕವಾಗಿ ಸದೃಢರಾಗಿರಬೇಕು. ಸದೃಢ ನಿರ್ಧಾರ, ಸಕಾರಾತ್ಮಕ ಚಿಂತನೆಯಿಟ್ಟುಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕು. ಬೇರೆಯವರ ಬಗ್ಗೆ ಕೀಳರಿಮೆ ಬಿಡಬೇಕು. ಉಳ್ಳವರನ್ನು ಕಂಡು ಬಡವ ಎಂದು ನೊಂದುಕೊಳ್ಳಬಾರದು.  ರವಿ ಡಿ. ಚನ್ನಣ್ಣನವರ್‌, ಡಿಸಿಪಿ ಬೆಂಗಳೂರು ಪಶ್ಚಿಮ ವಿಭಾಗ

Advertisement

Udayavani is now on Telegram. Click here to join our channel and stay updated with the latest news.

Next