ಕೋವಿಡ್ 19 ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ 548 ವೈದ್ಯರು, ನರ್ಸ್ ಗಳು, ಅರೆ ವೈದ್ಯ ಕೀಯ ಸಿಬಂದಿಗೆ ಸೋಂಕು ದೃಢಪಟ್ಟಿರುವ ಕಳವಳಕಾರಿ ಮಾಹಿತಿ ಬುಧವಾರ ಹೊರಬಿದ್ದಿದೆ. ಆದರೆ, ಈ 548 ಮಂದಿಯ ಪಟ್ಟಿಯಲ್ಲಿ ವಾರ್ಡ್ ಬಾಯ್ ಗಳು, ಫೀಲ್ಡ್ ವರ್ಕರ್‌ಗಳು, ನೈರ್ಮಲ್ಯ ಕಾರ್ಮಿಕರು, ಭದ್ರತಾ ಸಿಬಂದಿ, ಲ್ಯಾಬ್ ಸಹಾಯಕರು, ಗುಮಾಸ್ತರು, ಲಾಂಡ್ರಿ ಮತ್ತು ಅಡುಗೆ ಸಿಬಂದಿ ಸೇರಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೇಶಾದ್ಯಂತದ ಕೇಂದ್ರ ಸರಕಾರಿ ಮತ್ತು ರಾಜ್ಯ ಸರಕಾರಿ ಸ್ವಾಮ್ಯದ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 548 ವೈದ್ಯರು, ನರ್ಸ್ ಗಳಿಗೆ ಸೋಂಕು ತಗುಲಿದ್ದು, ಇವರಿಗೆಲ್ಲ ಸೋಂಕು ಬಂದಿದ್ದು ಎಲ್ಲಿಂದ ಎಂಬ ಬಗ್ಗೆ ಇನ್ನಷ್ಟೇ ತನಿಖೆ ನಡೆಯಬೇಕಿದೆ ಎಂದೂ ಮೂಲಗಳು ಹೇಳಿವೆ. ಇನ್ನು, ಕೋವಿಡ್ 19 ದೃಢಪಟ್ಟ ಹಲವು ವೈದ್ಯರು ಸಾವಿಗೀಡಾಗಿರುವ ವರದಿಯೂ ಬಂದಿದೆ. ಆದರೆ, ಅವರ ಸಂಖ್ಯೆಯೆಷ್ಟು ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ.
ದಿಲ್ಲಿಯೊಂದರಲ್ಲೇ 69 ವೈದ್ಯರಿಗೆ ಸೋಂಕು ತಗುಲಿದ್ದು, 274 ಮಂದಿ ದಾದಿಯರು ಹಾಗೂ ಅರೆವೈದ್ಯಕೀಯ ಸಿಬಂದಿಯ ವರದಿ ಪಾಸಿಟಿವ್ ಬಂದಿದೆ. ಸಫರ್ ಜಂಗ್ ಆಸ್ಪತ್ರೆಯ 7 ವೈದ್ಯರು ಸೇರಿದಂತೆ 13 ಆರೋಗ್ಯಸೇವಾ ಸಿಬಂದಿ, ಏಮ್ಸ್ ನಲ್ಲಿ ಒಬ್ಬ ವೈದ್ಯ ಸೇರಿ 10 ಸಿಬಂದಿಗೆ ಕೋವಿಡ್ 19 ದೃಢಪಟ್ಟಿದೆ. ಆಸ್ಪತ್ರೆಯ ಕೆಲವು ಭದ್ರತಾ ಸಿಬಂದಿಗೂ ಸೋಂಕು ತಗುಲಿರುವ ಮಾಹಿತಿಯಿದೆ.
ಮತ್ತೆ ಸೋಂಕು ಪ್ರಕರಣ: ಇದೇ ವೇಳೆ, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚಳವಾಗುತ್ತಿದ್ದು, ಬುಧವಾರ ಮತ್ತೆ 85 ಬಿಎಸ್‌ಎಫ್ ಯೋಧರಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಒಟ್ಟಾರೆ 400 ಯೋಧರು ಕೋವಿಡ್ 19 ಪೀಡಿತರಾದಂತಾಗಿದೆ. ದೇಶಾದ್ಯಂತ ಕೇಂದ್ರ ಅರೆಸೇನಾ ಪಡೆಗಳ 286 ಮಂದಿಯ ವರದಿ ಪಾಸಿಟಿವ್ ಎಂದು ಬಂದಿದ್ದು, ಈ ಪೈಕಿ ಬಿಎಸ್‌ಎಫ್ ನ 150, ಸಿಆರ್‌ಪಿಎಫ್146, ಐಟಿಬಿಪಿಯ 45, ಸಿಐಎಸ್‌ಎಫ್ ನ 15 ಮತ್ತು ಸಶಸ್ತ್ರ ಸೀಮಾ ಬಲದ 13 ಮಂದಿಗೆ ಸೋಂಕು ದೃಢಪಟ್ಟಿದೆ. ಇದೇ ವೇಳೆ ಭದ್ರತಾ ಕರ್ತವ್ಯಕ್ಕಾಗಿ ಜೋಧ್‌ಪುರಕ್ಕೆ ತೆರಳಿದ್ದ 30 ಮಂದಿ ಬಿಎಸ್‌ಎಫ್ ಯೋಧರಿಗೆ ಸೋಂಕು ಇರುವುದು ದೃಢವಾಗಿದೆ.