Advertisement

ಸದ್ದಿಲ್ಲದೇ ಆಕ್ರಮಿಸಿದ ಸಾಂಕ್ರಾಮಿಕ ರೋಗಗಳು

02:19 PM May 20, 2021 | Team Udayavani |

ವರದಿ : ಶಶಿಧರ್‌ ಬುದ್ನಿ

Advertisement

ಧಾರವಾಡ: ಜಿಲ್ಲೆಯಲ್ಲಿ ಒಂದಂಕಿ-ಎರಡಂಕಿಗೆ ಕುಸಿದಿದ್ದ ಕೊರೊನಾ ಇದೀಗ ಮೂರಂಕಿ ದಾಟಿ ಸಾವಿರ ಗಡಿ ದಾಟುತ್ತಿದ್ದು, ಇದರ ಮಧ್ಯೆಯೇ ಸಾಂಕ್ರಾಮಿಕ ರೋಗಗಳ ಹಾವಳಿಯ ಆತಂಕವೂ ಶುರುವಾಗಿದೆ.

ವರ್ಷದ ಆರಂಭದ ಎರಡು ತಿಂಗಳಲ್ಲಿ ಸಾಂಕ್ರಾಮಿಕ ರೋಗಗಳ ಲಕ್ಷಣಗಳು ಪತ್ತೆಯಾಗಿದ್ದವು. ಇದಾದ ಬಳಿಕ ಮಾರ್ಚ್‌ ನಿಂದ ಮೇ ತಿಂಗಳ 2ನೇ ವಾರದವರೆಗೆ ಸಾಂಕ್ರಾಮಿಕ ರೋಗಗಳ ಹಾವಳಿ ಕಡಿಮೆ ಆಗಿರುವ ಬಗ್ಗೆ ಆರೋಗ್ಯ ಇಲಾಖೆಯ ಅಂಕಿ- ಅಂಶಗಳು ಹೇಳುತ್ತಿವೆ.

ಪ್ರತಿ ವರ್ಷ ಬೇಸಿಗೆಯಲ್ಲಿ ಉಲ್ಬಣವಾಗಿ ಕಾಡುತ್ತಿದ್ದ ಡೆಂಘೀ, ಚಿಕೂನ್‌ಗುನ್ಯಾ, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ಹಾವಳಿ ತಗ್ಗಿದೆ ಎಂಬುದು ಆರೋಗ್ಯ ಇಲಾಖೆಯ ಮಾಹಿತಿ. ಅದರನ್ವಯ ಕಳೆದ 2019ರಲ್ಲಿ 250 ಜನರಲ್ಲಿ ಡೆಂಘೀ, 121 ಜನರಲ್ಲಿ ಚಿಕೂನ್‌ಗುನ್ಯಾ ಹಾಗೂ 2020ರಲ್ಲಿ 36 ಜನರಲ್ಲಿ ಡೆಂಘೀ, 17 ಜನರಲ್ಲಿ ಚಿಕೂನ್‌ಗುನ್ಯಾ, 8 ಜನರಲ್ಲಿ ಮಲೇರಿಯಾ ಪತ್ತೆಯಾಗಿತ್ತು.

ಇನ್ನು ಈ ವರ್ಷದ ಆರಂಭದ ಎರಡು ತಿಂಗಳ ಅಂತ್ಯಕ್ಕೆ 11ಜನರಲ್ಲಿ ಡೆಂಘೀ ದೃಢವಾಗಿತ್ತು. ಇದೀಗ ಮೇ 11ರ ಅಂತ್ಯಕ್ಕೆ 24 ಜನರಲ್ಲಿ ಡೆಂಘೀ, 3 ಜನರಲ್ಲಿ ಚಿಕೂನ್‌ಗುನ್ಯಾ, ತಲಾ ಒಬ್ಬರಲ್ಲಿ ಅಷ್ಟೇ ಮಲೇರಿಯಾ ಹಾಗೂ ಮೆದುಳು ಜ್ವರ ಪತ್ತೆಯಾಗಿದೆ.

Advertisement

ತಗ್ಗಿದ ಹಾವಳಿ: 2015ರಲ್ಲಿ 46, 2016ರಲ್ಲಿ 97, 2017 ರಲ್ಲಿ 172, 2018ರಲ್ಲಿ 112, 2019ರಲ್ಲಿ 250, 2020ರಲ್ಲಿ 36 ಜನರಲ್ಲಿ ಡೆಂಘೀ ರೋಗ ದೃಢಪಟ್ಟಿತ್ತು. ಈ ಪೈಕಿ ಕೊರೊನಾ ಲಾಕ್‌ಡೌನ್‌ ಸಮಯದಲ್ಲಿಯೇ 2020ರಲ್ಲಿ ಡೆಂಘೀಗೆ ಹುಬ್ಬಳ್ಳಿಯಲ್ಲಿ ಒಬ್ಬರು ಮೃತಪಟ್ಟಿದ್ದರು. ಸದ್ಯ ಈ ವರ್ಷದ ನಾಲ್ಕೂವರೆ ತಿಂಗಳಲ್ಲಿ 24 ಜನರಲ್ಲಿ ಡೆಂಘೀ ದೃಢಪಟ್ಟಿದೆ. ಈ ಪೈಕಿ ಧಾರವಾಡ ಗ್ರಾಮೀಣದಲ್ಲಿ 8, ಕುಂದಗೋಳದಲ್ಲಿ 5, ನವಲಗುಂದದಲ್ಲಿ 2, ಧಾರವಾಡದ ಶಹರದಲ್ಲಿ 6 ಹಾಗೂ ಹುಬ್ಬಳ್ಳಿಯ ಶಹರದಲ್ಲಿ 3 ಜನರಲ್ಲಿ ಡೆಂಘೀ ಖಚಿತವಾಗಿದೆ. ಇನ್ನು ಮೆದುಳು ಜ್ವರವು 2016, 2017, 2019, 2020 ರಲ್ಲಿ ಕಂಡು ಬಂದಿಲ್ಲ. ಆದರೆ ಈ ವರ್ಷ ಮೆದುಳು ಜ್ವರದ ಲಕ್ಷಣಗಳು ಕಂಡು ಬಂದ 3 ಜನರನ್ನು ಪರೀಕ್ಷೆಗೆ ಒಳಪಡಿಸಿದಾಗ ಅವರಲ್ಲಿ ಒಬ್ಬರಲ್ಲಿ ಮೆದುಳು ಜ್ವರ ದೃಢಪಟ್ಟಿದೆ.

ಇನ್ನು 2015ರಲ್ಲಿ 17, 2016ರಲ್ಲಿ 6, 2017ರಲ್ಲಿ 11, 2018ರಲ್ಲಿ 85, 2019ರಲ್ಲಿ 121, 2020ರಲ್ಲಿ 17 ಜನರಲ್ಲಿ ಚಿಕೂನ್‌ಗುನ್ಯಾ ಕಾಣಿಸಿಕೊಂಡು ತೊಂದರೆ ಉಂಟು ಮಾಡಿತ್ತು. ಈ ವರ್ಷ 3 ಜನರಲ್ಲಿ ಅಷ್ಟೇ ಚಿಕೂನ್‌ಗುನ್ಯಾ ದೃಢಪಟ್ಟಿದೆ. ಈ ಪೈಕಿ ಧಾರವಾಡ ಗ್ರಾಮೀಣ ಪ್ರದೇಶದಲ್ಲಿ ಇಬ್ಬರಿಗೆ ಹಾಗೂ ಹುಬ್ಬಳ್ಳಿ ಗ್ರಾಮೀಣದಲ್ಲಿ ಒಬ್ಬರಲ್ಲಿ ಪತ್ತೆಯಾಗಿದೆ. ಇದಲ್ಲದೇ 2015ರಲ್ಲಿ 96, 2016ರಲ್ಲಿ 78, 2017ರಲ್ಲಿ 76, 2018ರಲ್ಲಿ 25, 2019ರಲ್ಲಿ 17, 2020ರಲ್ಲಿ 8 ಜನರಲ್ಲಿ ಕಾಣಿಸಿ ಕೊಂಡಿದ್ದ ಮಲೇರಿಯಾ ರೋಗವು ಈ ವರ್ಷ ಹುಬ್ಬಳ್ಳಿ ಗ್ರಾಮೀಣ ಭಾಗದಲ್ಲಿ ಒಬ್ಬರಲ್ಲಿ ಅಷ್ಟೇ ದೃಢಪಟ್ಟಿದೆ. ಸದ್ದಿಲ್ಲದೇ ರೋಗಗಳ ಹಾವಳಿ: ಕೊರೊನಾ 2ನೇ ಅಲೆ ಹೊಡೆತದಲ್ಲಿ ಸಾಂಕ್ರಾಮಿಕ ರೋಗಗಳ ಹಾವಳಿ ಮೇಲ್ನೋಟಕ್ಕೆ ತಗ್ಗಿದಂತೆ ಕಂಡು ಬಂದರೂ ಸದ್ದಿಲ್ಲದೇ ಹೊಡೆತ ನೀಡಿವೆ. ಮಲೇರಿಯಾ, ಡೆಂಘೀ, ಚಿಕೂನ್‌ಗುನ್ಯಾದ ಕೆಲ ಗುಣ ಲಕ್ಷಣಗಳು ಈಗಿನ ಕೊರೊನಾದ ಗುಣ ಲಕ್ಷಣಗಳಲ್ಲಿ ಸಾಮ್ಯತೆ ಇದೆ. ಹೀಗಾಗಿ ಜ್ವರ, ಮೈ-ಕೈ ನೋವು ಸೇರಿದಂತೆ ಇನ್ನಿತರೆ ಗುಣಲಕ್ಷಣಗಳು ಕಂಡು ಬಂದಾಗ ಕೋವಿಡ್‌ ಆತಂಕದಿಂದ ಪರೀಕ್ಷೆಗೆ ಹಿಂದೇಟು ಹಾಕುತ್ತಿದ್ದಾರೆ ಹಳ್ಳಿಗರು. ಇದಲ್ಲದೇ ಕೆಲವರು ಈ ಗುಣ ಲಕ್ಷಣ ಬಂದಾಗ ಕೋವಿಡ್‌ ತಪಾಸಣೆ ಮಾಡಿ, ನೆಗಟಿವ್‌ ಬಂದಾಕ್ಷಣ ಅಷ್ಟಕ್ಕೆ ಸುಮ್ಮನಾಗಿ ಬಿಡುತ್ತಿದ್ದಾರೆ. ಹೀಗಾಗಿ ಸಾಂಕ್ರಾಮಿಕ ರೋಗಗಳ ಪತ್ತೆ ಕಾರಣಕ್ಕೆ ಹಿನ್ನಡೆ ಆಗಿದ್ದು, ಈ ವಿಷಯದಲ್ಲಿ ಆರೋಗ್ಯ ಇಲಾಖೆಯ ನಿರ್ಲಕ್ಷéದಿಂದಲೂ ಸಾಂಕ್ರಾಮಿಕ ರೋಗಗಳ ಅಂಕಿ-ಅಂಶಗಳ ಏರಿಕೆಯಲ್ಲಿ ಹಿನ್ನಡೆಯಾಗಿದೆ.

ಈಗಾಗಲೇ ಗ್ರಾಮೀಣದಲ್ಲಿ ಸೀಜನ್‌ ಜ್ವರ ದಾಳಿಯಿಟ್ಟು, ಮೈ-ಕೈ ನೋವಿನಿಂದ ಬಾಧೆಯಿಂದ ಚೇತರಿಸಿಕೊಳ್ಳುತ್ತಿರುವ ಹಳ್ಳಿಗರನ್ನು ಸಾಂಕ್ರಾಮಿಕ ರೋಗಗಳು ಸದ್ದಿಲ್ಲದೇ ಒಳಹೊಡೆತ ನೀಡಿವೆ. ನಿಗದಿತ ಸಮಯಕ್ಕೆ ಸೂಕ್ತ ಚಿಕಿತ್ಸೆಯೂ ಸಿಗದ ಕಾರಣ ಗ್ರಾಮೀಣ ಭಾಗದಲ್ಲಿ ಸಾವಿನ ಸಂಖ್ಯೆಯಲ್ಲೂ ಏರಿಕೆ ಕಾಣುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next