Advertisement

ಸೋಂಕು ಸಂಕಟ ನಿಯಂತ್ರಣ ಬೆಂಗಳೂರೇ ಮಾದರಿ

02:08 AM May 26, 2020 | Sriram |

ಹೊಸದಿಲ್ಲಿ/ ಬೆಂಗಳೂರು: ಕೋವಿಡ್-19 ಪರಿಸ್ಥಿತಿ ಯನ್ನು ಅತೀ ಸಮರ್ಥ, ಪರಿಣಾಮಕಾರಿಯಾಗಿ ನಿರ್ವಹಿಸಿದ ಬೆಂಗಳೂರಿನ ಬಗ್ಗೆ ಕೇಂದ್ರ ಸರಕಾರ ಮೆಚ್ಚುಗೆ ವ್ಯಕ್ತಪಡಿಸಿದೆ.

Advertisement

ಈ ವಿಚಾರದಲ್ಲಿ ದೇಶದ ಒಟ್ಟು ನಾಲ್ಕು ನಗರಗಳನ್ನು ಕೇಂದ್ರವು ಮಾದರಿಯಾಗಿ ಗುರುತಿಸಿದೆ. ಬೆಂಗಳೂರಿನ ಜತೆಗೆ ಚೆನ್ನೈ, ಇಂದೋರ್‌, ಜೈಪುರಗಳ ಬಗ್ಗೆಯೂ ಅದು ಮೆಚ್ಚುಗೆ ವ್ಯಕ್ತಪಡಿಸಿದೆ. ಇತ್ತೀಚೆಗೆ ದೇಶದ ಹಲವು ನಗರಗಳ ಆಡಳಿತಾಧಿಕಾರಿಗಳ ಜತೆಗೆ ಕೇಂದ್ರದ ಅಧಿಕಾರಿಗಳು ವೀಡಿಯೋ ಕಾನ್ಫರೆನ್ಸ್‌ ನಡೆಸಿ, ಕೋವಿಡ್-19 ನಿಯಂತ್ರಣ ಕ್ರಮಗಳ ಪರಿಶೀಲನೆ ನಡೆಸಿದ್ದರು. ಆಗ ಈ 4 ನಗರಗಳು ಅಳವಡಿಸಿಕೊಂಡಿರುವ ಮಾರ್ಗೋಪಾಯಗಳು ಮೆಚ್ಚುಗೆಗೆ ಪಾತ್ರವಾಗಿದ್ದವು.

ಯಾವ ನಗರ, ಏನು ಮಾದರಿ?
ಬೆಂಗಳೂರು,ಚೆನ್ನೈ: ಇಲ್ಲಿ ಹೆಚ್ಚು ಪ್ರಕರಣಗಳಿದ್ದರೂ ಉತ್ತಮ ಚಿಕಿತ್ಸಾ ಸೌಲಭ್ಯ ಕಲ್ಪಿಸಿದ್ದರಿಂದ ಮರಣ ಪ್ರಮಾಣ ಶೇ. 1ರಷ್ಟು ಕಡಿಮೆ ಇದೆ. ಇದು ರಾಷ್ಟ್ರೀಯ ಮರಣ ಪ್ರಮಾಣ(ಶೇ.3)ಕ್ಕಿಂತ ಕಡಿಮೆ. ಈ ನಗರಗಳಲ್ಲಿ ವೆಂಟಿಲೇಟರ್‌ ಬಳಕೆಯಲ್ಲಿ ತೋರಿದ ಜಾಣ್ಮೆ, ರೋಗಿಗಳು ಹೆಚ್ಚಾದಾಗ ವಿವಿಧ ಆಸ್ಪತ್ರೆಗಳಿಗೆ ರವಾನಿಸಿ ಚಿಕಿತ್ಸೆ ತಡವಾಗದಂತೆ ಕೈಗೊಳ್ಳಲಾದ ಕ್ರಮಗಳು ಕೇಂದ್ರದ ಶ್ಲಾಘನೆಗೆ ಪಾತ್ರವಾಗಿವೆ.

ಜೈಪುರ, ಇಂದೋರ್‌: ಇಂದೋರ್‌, ಜೈಪುರಗಳಲ್ಲಿ ಪ್ರತಿ ಮನೆಯನ್ನು ಸರ್ವೆಗೆ ಒಳಪಡಿಸುವ ಮೂಲಕ ಸೋಂಕು ಪೀಡಿತರನ್ನು ಪತ್ತೆಹಚ್ಚಲಾಗುತ್ತಿದೆ. ಲಾಕ್‌ಡೌನ್‌ ಕಟ್ಟುನಿಟ್ಟಾಗಿದ್ದಾಗ ಇಲ್ಲಿ ಹಲವು ಹಂತಗಳ ವಿಚಕ್ಷಣ ದಳಗಳಿದ್ದವು.

ಕೆಲವು ಪ್ರದೇಶಗಳಿಗೆ ಆಯ್ದ ವ್ಯಾಪಾರಸ್ಥರ ಮೂಲಕ ಮಾತ್ರ ತರಕಾರಿ, ಹಣ್ಣುಹಂಪಲು ಒದಗಿಸಲಾಗಿತ್ತು. ಕೆಲವೇ ಅಂಗಡಿ, ಮಿಲ್ಕ್ ಬೂತ್‌ಗಳಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ಕೊಟ್ಟು ವಿಚಕ್ಷಣ ದಳದ ಸಿಬಂದಿಯನ್ನು ನೇಮಿಸಲಾಗಿತ್ತು.

Advertisement

ಶೇ.10ಕ್ಕಿಂತಲೂ ಕಡಿಮೆ ಪ್ರಕರಣ
ಮಾರ್ಚ್‌ ಅಂತ್ಯಕ್ಕೆ ರಾಜ್ಯದ ಶೇ. 45 ಪ್ರಕರಣಗಳು ಬೆಂಗಳೂರಿನಲ್ಲಿ ಇದ್ದವು. ಎಪ್ರಿಲ್‌ ಪ್ರಕರಣಗಳಲ್ಲಿ ಶೇ. 20 ಬೆಂಗಳೂರಿನಲ್ಲಿದ್ದವು. ಮೇ 1ರಿಂದ ಇಲ್ಲಿಯ ವರೆಗಿನ ರಾಜ್ಯದ ಪ್ರಕರಣಗಳಲ್ಲಿ ಶೇ.8 ಮಾತ್ರ ಬೆಂಗಳೂರಿನವು.

ರಾಜ್ಯದಲ್ಲಿ ಮತ್ತೆ 89 ಪ್ರಕರಣ
ರಾಜ್ಯದಲ್ಲಿ ಸೋಮವಾರ 89 ಮಂದಿಗೆ ಕೋವಿಡ್-19 ದೃಢವಾಗಿದ್ದು, ಒಟ್ಟು ಸಂಖ್ಯೆ 2,182ಕ್ಕೆ ಏರಿದೆ. ಬೆಂಗಳೂರು ಮತ್ತು ಮಂಗಳೂರಿನಲ್ಲಿ ತಲಾ ಒಬ್ಬರು ಸಾವಿಗೀಡಾಗಿದ್ದಾರೆ. ಈ ಮೂಲಕ ಮೃತಪಟ್ಟವರ ಸಂಖ್ಯೆ 44ಕ್ಕೆ ಏರಿದೆ.

ಮುಖ್ಯಮಂತ್ರಿ ಸಂತಸ
ಕೇಂದ್ರ ಸರಕಾರದ ಶ್ಲಾಘನೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಸಂತಸ ವ್ಯಕ್ತಪಡಿಸಿದ್ದಾರೆ. ಈ ಕುರಿತು ಅವರು ಟ್ವೀಟ್‌ ಮಾಡಿದ್ದು, ನಮ್ಮ ಕೋವಿಡ್-19 ಯೋಧರ ಪರಿಶ್ರಮಕ್ಕೆ ಹೆಮ್ಮೆಯ ಅನುಮೋದನೆ ದೊರಕಿದೆ. ಉತ್ತಮ ಚಿಕಿತ್ಸೆ ಮತ್ತು ಮರಣ ಪ್ರಮಾಣ ತಗ್ಗಿಸುವಲ್ಲಿ ಬೆಂಗಳೂರು ನಗರ ಮುಂಚೂಣಿಯಲ್ಲಿದೆ. ನಮ್ಮ ಇಡೀ ತಂಡಕ್ಕೆ ಅಭಿನಂದನೆಗಳು. ಈ ಉತ್ತಮ ಸೇವೆ ಮುಂದುವರಿಸೋಣ ಎಂದಿದ್ದಾರೆ.

ಕೋವಿಡ್-19 ನಿಯಂತ್ರಣ ವಿಚಾರದಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಇದಕ್ಕಾಗಿ ನಾನು ಡಾ| ಸಿ.ಎನ್‌. ಮಂಜುನಾಥ್‌ ನೇತೃತ್ವದ ತಜ್ಞರ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ.
-ಡಿ.ವಿ. ಸದಾನಂದ ಗೌಡ, ಕೇಂದ್ರ ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next