ಬೆಂಗಳೂರು: ನಗರದಲ್ಲಿ ಮಹಾಮಾರಿ ಕೋವಿಡ್ 19 ಸೋಂಕಿತರ ಸಂಖ್ಯೆ ಹತ್ತು ಸಾವಿರದ ಗಡಿ ದಾಟಿದ್ದು, ಈ ಪೈಕಿ ಶೇ. 60ರಷ್ಟು ಪ್ರಕರಣಗಳು ಕಳೆದ ಕೇವಲ ಆರು ದಿನಗಳಲ್ಲೇ ವರದಿಯಾಗಿವೆ! ನಾಲ್ಕು ತಿಂಗಳಲ್ಲಿ ನಾಲ್ಕು ಸಾವಿರ ಸೋಂಕಿತರು ದೃಢಪಟ್ಟಿದ್ದು, ಜು. 1- 6 (ಸೋಮವಾರ)ರವರೆಗೆ ಆರು ಸಾವಿರ ಮಂದಿಗೆ ಸೋಂಕು ದೃಢಪಟ್ಟಿದೆ. ಸೋಮವಾರ 981 ಮಂದಿಗೆ ಸೋಂಕು ಪ್ರಕರಣಗಳು ವರದಿಯಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 10,561 ಏರಿಕೆಯಾಗಿದೆ. 10 ಮಂದಿ ಸೋಂಕಿಗೆ ಮೃತಪಟ್ಟಿದ್ದು, ಸಾವಿನ ಸಂಖ್ಯೆ 155ಕ್ಕೆ ತಲುಪಿದೆ. ಸೋಂಕಿತರಲ್ಲಿ 81 ಮಂದಿ ವಿಷಮಶೀತ ಜ್ವರ, 17 ಮಂದಿ ತೀವ್ರ ಉಸಿರಾಟ ತೊಂದರೆ ಹಾಗೂ ಉಳಿದ ಸೋಂಕಿತರ ಸಂಪರ್ಕ ಪತ್ತೆ ಆಗಿಲ್ಲ. 278 ಮಂದಿ ಸೋಮವಾರ ಬಿಡುಗಡೆಯಾಗಿದ್ದಾರೆ.
ಆಸ್ಪತ್ರೆಗೆ ಸೇರಲು ಸೋಂಕಿತ ಪರದಾಟ: ಸೋಂಕು ಇದ್ದರೂ ಹಾಗೂ ಇರದಿದ್ದರೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗುತ್ತಿಲ್ಲ. ಲ್ಯಾಬ್ ರಿಪೋರ್ಟ್ ತಂದರೆ ಮಾತ್ರ ಚಿಕಿತ್ಸೆ ನೀಡಲಾಗುವುದು ಎಂದು ಹೇಳುತ್ತಿದ್ದು, ನಾಗರಬಾವಿಯ ಸೋಂಕಿತ ವ್ಯಕ್ತಿಯು ಎರಡು ದಿನಗಳಿಂದ ಮನೆಯಲ್ಲಿಯೇ ಳಿಯುವಂತಾಗಿದೆ. ಈಗ ಆತನಿಂದ ಪತ್ನಿ ಮತ್ತು ಮಗುವಿಗೂ ಸೋಂಕು ತಗುಲಿದೆ. ಇನ್ನು ಬನಶಂಕರಿ ನಿವಾಸಿಯೊಬ್ಬರಿಗೆ ಸೋಂಕು ಕಾಣಿಸಿಕೊಂಡಿದ್ದು, ಆ್ಯಂಬುಲೆನ್ಸ್‌ನಲ್ಲಿ ವಿಕ್ಟೋರಿಯಾ, ರಾಜೀವ್ ಗಾಂಧಿ, ಕೆ.ಸಿ. ಜನರಲ್ ಸೇರಿದಂತೆ ಹಲವು ಆಸ್ಪತ್ರೆಗಳಿಗೆ ತೆರಳಿದರೂ, “ಬೆಡ್ ಖಾಲಿ ಇಲ್ಲ’ ಎಂಬ ಕಾರಣ ನೀಡಿ ದಾಖಲು ಮಾಡಿಕೊಂಡಿಲ್ಲ. ಕೊನೆಗೆ ಹಜ್ ಭವನ ಬಳಿ ಸೋಂಕಿತನನ್ನು ಇಳಿಸಿ ಆ್ಯಂಬುಲೆನ್ಸ್ ಚಾಲಕ ಹೋಗಿರುವ ಘಟನೆ ತಡವಾಗಿ ಬೆಳಕಿಗೆಬಂದಿದೆ.
ಮಹಿಳಾ ಆಯೋಗ ಸೀಲ್‌ಡೌನ್: ಮೈಸೂರು ಬ್ಯಾಂಕ್ ವೃತ್ತದಲ್ಲಿರುವ ಮಹಿಳಾ ಆಯೋಗದ ಕಚೇರಿಗೆ ಹೊಂದಿಕೊಂಡಿರುವ ಕಟ್ಟಡದ ಸಿಬ್ಬಂದಿಗೆ ಕೋವಿಡ್ 19 ಸೋಂಕು ತಗುಲಿದ್ದು, ಮುಂಜಾಗ್ರತ ಕ್ರಮವಾಗಿ ರಾಜ್ಯ ಮಹಿಳಾ ಆಯೋಗ ಕಚೇರಿಯನ್ನು ವಾರದಮಟ್ಟಿಗೆ ಸೀಲ್‌ಡೌನ್ ಮಾಡಲಾಗಿದೆ. ಕಚೇರಿಯನ್ನು ಸ್ಯಾನಿಟೈಸೇಷನ್ ಮಾಡಲಾಗಿದೆ. ಇನ್ನು ಯಾವುದೇ ದೂರುಗಳು ಬಂದರೆ ಫೋನ್‌ನಲ್ಲಿ ಬಗೆಹರಿಸಲು ಪ್ರಯತ್ನ ಮಾಡಲಾಗುವುದು ಎಂದು ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ತಿಳಿಸಿದ್ದಾರೆ.
15 ಆಸ್ಪತ್ರೆ ಸುತ್ತಿದ ಮಹಿಳೆ!: ಸೋಂಕಿತರಿಗೆ ಚಿಕಿತ್ಸೆ ನಿರಾಕರಿಸಿದರೆ ಎಫ್ಐಆರ್ ದಾಖಲಿಸಲಾಗುವುದು ಎಂದು ಪಾಲಿಕೆ ಅಧಿಕಾರಿಗಳು ಎಚ್ಚರಿಕೆ ನೀಡಿದರೂ, ರೋಗಿಗಳಿಗೆ ಆಸ್ಪತ್ರೆಗಳ ಅಲೆದಾಟ ತಪ್ಪಿಲ್ಲ. ಬಿಳೇಕಹಳ್ಳಿಯ 64 ವರ್ಷದ ಮಹಿಳೆಯೊಬ್ಬರು 15 ಆಸ್ಪತ್ರೆಗಳನ್ನು ಸುತ್ತಿದರೂ ಚಿಕಿತ್ಸೆ ದೊರಕಿಲ್ಲ. ಎರಡು ದಿನಗಳಿಂದ ಜಯನಗರದ ಸಾರ್ವಜನಿಕ ಆಸ್ಪತ್ರೆ, ಸಂಜಯ್ ಗಾಂಧಿ, ಕಿಮ್ಸ್, ಸೇಂಟ್ ಜಾನ್ಸ್, ವಿಕ್ಟೋರಿಯಾ, ಕೆ.ಸಿ. ಜನರಲ್ ಆಸ್ಪತ್ರೆ, ಬೌರಿಂಗ್ ಹಾಗೂ ಖಾಸಗಿ ಸೇರಿ 15 ಆಸ್ಪತ್ರೆಗಳಿಗೆ ಅಲೆದಾಡಿದ್ದಾರೆ. ಕೊನೆಗೆ ಚಿಕಿತ್ಸೆ ಸಿಗದೆ ಕೊನೆಯುಸಿರೆಳೆದಿದ್ದಾರೆ.
ಇದ್ದಿದ್ದು ಮಧುಮೇಹ; ಹೇಳಿದ್ದು ಕೋವಿಡ್ 19!: ಮಧುಮೇಹದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾದ ವ್ಯಕ್ತಿಗೆ ಕೋವಿಡ್ 19 ಇದೆ, ಚಿಕಿತ್ಸೆ ನೀಡಬೇಕು ಎಂದು ಹೇಳಿ ನಾಗರಬಾವಿಯ ವಿನಾಯಕ ಲೇಔಟ್‌ನಲ್ಲಿರುವ ಖಾಸಗಿ ಆಸ್ಪತ್ರೆಯೊಂದು 2 ಲಕ್ಷ ರೂ. ಬಿಲ್ ಮಾಡಿದೆ ಎಂದು ಆರೋಪಿಸಲಾಗಿದೆ. ಕೋವಿಡ್ 19 ಪಾಸಿಟಿವ್ ಹಿನ್ನೆಲೆಯಲ್ಲಿ ಒಂದು ವಾರ ಚಿಕಿತ್ಸೆ ನೀಡಿದ್ದಾರೆ. ನಂತರ ಕೋವಿಡ್ 19ಗೆ ಮೀಸಲಿರುವ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿದಾಗ ನೆಗಟಿವ್ ವರದಿ ಬಂದಿದೆ ಎಂದು ಸಂತ್ರಸ್ತ ರೋಗಿ ದೂರಿದರು.
ಕಿದ್ವಾಯಿ ರೋಗಿಗಳಿಗೆ ಕೋವಿಡ್ 19 ಸೋಂಕು: ಕಿದ್ವಾಯಿ ಆಸ್ಪತ್ರೆಯ 20 ರೋಗಿಗಳಿಗೆ ಸೋಂಕು ತಗುಲಿದ್ದು, 10 ವೈದ್ಯಕೀಯ ವಿದ್ಯಾರ್ಥಿಗಳಲ್ಲೂ ವೈರಸ್ ಇರುವುದು ದೃಢಪಟ್ಟಿದೆ. ಸೋಂಕಿತರ ಜತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 60 ಸಿಬ್ಬಂದಿಯ ನ್ನು ಕ್ವಾರಂಟೈನ್ ಮಾಡಲಾಗಿದೆ. ಕಿದ್ವಾಯಿ ಆಸ್ಪತ್ರೆ ಯ ಆಪರೇಷನ್ ಥಿಯೇಟರ್ ಬಂದ್ ಮಾಡಲಾ ಗಿದ್ದು, ಶುಕ್ರವಾರದವರೆಗೆ ತುರ್ತು ಸೇವೆಗಳು ಮಾತ್ರ ಲಭ್ಯ ಇರಲಿವೆ. ಈಗಾಗಲೇ ಆಸ್ಪತ್ರೆಯಲ್ಲಿದ್ದ ರೋಗಿಗಳನ್ನು ಬೇರೆ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಕಿದ್ವಾಯಿಯಲ್ಲಿ ಸಿಬ್ಬಂದಿ ಕೊರತೆ ಉಂಟಾಗಿದ್ದು, ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಕಿದ್ವಾಯಿ ಆಡಳಿತ ಮಂಡಳಿ ತಿಳಿಸಿದೆ.