Advertisement

ಸೋಂಕು ಪ್ರಸರಣ : ಹಡಗು ಪ್ರಯಾಣಿಕರ ಕೊಡುಗೆ ಅಪಾರ

03:43 PM Apr 28, 2020 | sudhir |

ಮಣಿಪಾಲ: ಕೋವಿಡ್‌ 19 ಹರಡುವುದನ್ನು ತಡೆಯಲು ಜಾಗತಿಕ ಮಟ್ಟದಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರ ನಡುವೆಯೇ ಈ ವೈರಸ್‌ ಹರಡುವಲ್ಲಿ ಪ್ರಯಾಣಿಕ ಹಡಗುಗಳು ವಹಿಸಿದ್ದ ಪಾತ್ರವೇನು?
ಅದೇ ಅಚ್ಚರಿಯ ಸಂಗತಿ. ಹಡಗುಗಳು ಕೋವಿಡ್‌ 19 ಹರಡುತ್ತದೆ ಎಂಬುದು ಸರಿಯಲ್ಲ ಎಂದು ಪ್ರಮುಖ ಹಡಗು ಕಂಪೆನಿಗಳು ಹೇಳಿವೆ. ಆದರೂ ಅದನ್ನು ಒಪ್ಪಲು ಅಮೆರಿಕದ ಆರೋಗ್ಯ ತಜ್ಞರು ಸಿದ್ಧರಿಲ್ಲ. ಪ್ರಯಾಣಿಕ ಹಡಗುಗಳು ಈ ಸಾಂಕ್ರಾಮಿಕ ವೈರಸ್‌ ಅನ್ನು ಹರಡಿವೆ ಎಂಬುದಕ್ಕೆ ನಮ್ಮಲ್ಲಿ ಪೂರಕ ಸಾಕ್ಷ್ಯಗಳಿವೆ ಎನ್ನುತ್ತಿದ್ದಾರೆ.

Advertisement

ಅದಕ್ಕೆ ಎರಡು ಪ್ರಮುಖ ಉದಾಹರಣೆಯೆಂದರೆ, ಸೆಲೆಬ್ರಿಟಿ ಎಕ್ಲಿಪ್ಸ್‌ ಮತ್ತು ಕೋರಲ್‌ ಪ್ರಿನ್ಸಸ್‌. ಈ ಎರಡು ಹಡಗುಗಳಲ್ಲಿದ್ದ ಸುಮಾರು 150 ಮಂದಿಗೆ ಸೋಂಕು ತಗಲಿದ್ದು, ಈ ಪೈಕಿ 6 ಮಂದಿ ಸಾವಿಗೀಡಾಗಿದ್ದರು. ಇಂಥ ಸುಮಾರು 55 ಹಡಗುಗಳು ಕೋವಿಡ್‌ 19 ವ್ಯಾಪಕವಾಗಿರುವ ಸಂದರ್ಭದಲ್ಲೇ ಬಹುತೇಕ ಎಲ್ಲ ಖಂಡಗಳಲ್ಲೂ ಸಂಚರಿಸಿವೆ ಎನ್ನಲಾಗುತ್ತಿದೆ.

ಅವೆಲ್ಲವುಗಳಿಂದ ವೈರಸ್‌ ಹರಡಿರುವ ಸಾಧ್ಯತೆ ಹೆಚ್ಚಿದೆ ಎಂಬುದು ತಜ್ಞರ ಅಭಿಪ್ರಾಯ.
ಜಗತ್ತಿನಲ್ಲಿ ಕೋವಿಡ್ ತಾಂಡವ ವ್ಯಾಪಕವಾದ ಸಂದರ್ಭದಲ್ಲೇ, ಅಂದರೆ ಮಾ. 21ರಂದು ಸೆಲೆಬ್ರಿಟಿ ಎಕ್ಲಿಪ್ಸ್‌ ಹಡಗು ಪೆಸಿಫಿಕ್‌ ಓಷನ್‌ನಲ್ಲಿ ಸಂಚರಿಸುತ್ತಿತ್ತು. ಪ್ರಯಾಣಿಕರು ಕಿಕ್ಕಿರಿದು ತುಂಬಿದ್ದರು. ಒಂದು ದಿನ ಅವರೆಲ್ಲರೂ ಒಟ್ಟಾಗಿ ಜಗತ್ತಿನಲ್ಲಿ ಕೋವಿಡ್ ವಿರುದ್ಧ ಹೋರಾಡುತ್ತಿರುವ ವೈದ್ಯರಿಗೆ ಅಭಿನಂದನೆ ಸಲ್ಲಿಸಿದ್ದರು !

ಇದಾಗಿ 5 ದಿನಗಳ ಬಳಿಕ ಅಟ್ಲಾಂಟಿಕ್‌ನ ಸಾವಿರಾರು ಮೈಲುಗಳ ದೂರದಲ್ಲಿ ಬ್ರಿಟಿಷ್‌ ಪ್ರಯಾಣಿಕರಿದ್ದ ಕೋರಲ್‌ ಪ್ರಿನ್ಸಸ್‌ ಎಂಬ ಹಡಗಿನಲ್ಲೂ ಇಂಥದ್ದೇ ಕಾರ್ಯಕ್ರಮ ನಡೆಯಿತು. ಈ ಸಂಭ್ರಮ ಹೆಚ್ಚು ದಿನ ಇರಲಿಲ್ಲ. ಕಾರಣ ಎರಡೂ ಹಡಗುಗಳಲ್ಲಿದ್ದ ಹಲವು ಮಂದಿಯಲ್ಲಿ ಜ್ವರ, ಶೀತದಂಥ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತು. ಸುಮಾರು 150 ಮಂದಿ ಇಂಥ ಸಮಸ್ಯೆಯಿಂದ ಬಳಲಿದ್ದು, ಈ ಪೈಕಿ ಇಬ್ಬರು ಮಿಯಾಮಿಯಲ್ಲಿ ದಡ ಸೇರುವ ಮೊದಲೇ ಸಾವನ್ನಪ್ಪಿದರು. ಮತ್ತೂ ನಾಲ್ವರು ಜೀವ ಕಳೆದುಕೊಂಡರು.

ಕೋವಿಡ್ ಅಪಾಯದ ಸಂದರ್ಭದಲ್ಲೂ ಸಂಚಾರ ನಡೆಸಿದ್ದ 55 ಹಡಗುಗಳಲ್ಲಿದ್ದ ಒಟ್ಟು 65 ಮಂದಿ ಈ ಸೋಂಕಿಗೆ ಜೀವ ತೆತ್ತಿದ್ದಾರೆ ಎನ್ನಲಾಗುತ್ತಿದೆ. ಕೋವಿಡ್ ಸಮಸ್ಯೆ ವ್ಯಾಪಕವಾದ ಬಳಿಕವೂ ಸಂಚಾರ ನಿಲ್ಲಿಸದ ಕಾರಣ ಸಾವಿರಾರು ಮಂದಿ ಸೋಂಕಿಗೆ ತುತ್ತಾದರು ಎಂಬುದು ತಜ್ಞರ ಮಾತು.

Advertisement

ಅಮೆರಿಕದ ಆರೋಗ್ಯ ತಜ್ಞರ ಎಚ್ಚರಿಕೆಯ ಹೊರತಾಗಿಯೂ ಫೆಬ್ರವರಿಯಲ್ಲಿ ಹಡಗುಗಳು ಸಂಚಾರ ಕೊನೆಗೊಳಿಸದೇ ಸಂಚರಿಸಿದ್ದು ಈ ಸೋಂಕು ಹೆಚ್ಚಲು ಪ್ರಮುಖ ಕಾರಣ ಎಂದು ದೂರಲಾಗುತ್ತಿದೆ.

ಹಡಗು ಕಂಪೆನಿಗಳು ಇದನ್ನು ಒಪ್ಪಲು ಸಿದ್ಧರಿಲ್ಲದಿದ್ದರೂ, ಮಿಯಾಮಿ ಹೆರಾಲ್ಡ್‌ ಸಹಿತ ಕೆಲವು ಪ್ರಮುಖ ಮಾಧ್ಯಮಗಳು ತಿಳಿಸುವ ಪ್ರಕಾರ 65 ಸಾವುಗಳಿಗೆ ಹಡಗು ಯಾನಗಳ ನೇರ ಸಂಪರ್ಕವಿದೆ.

ಲಭ್ಯ ಒಂದು ಅಂಕಿಅಂಶ ಪ್ರಕಾರ, ಕಳೆದ ವರ್ಷ ಸುಮಾರು 4.54 ಬಿಲಿಯನ್‌ ಮಂದಿ ವಿಮಾನಗಳಲ್ಲಿ ಹಾಗೂ ಸುಮಾರು 30 ಮಿಲಿಯನ್‌ ಮಂದಿ ಹಡಗುಗಳಲ್ಲಿ ವಿದೇಶ ಸಂಚಾರ ಮಾಡಿದ್ದಾರಂತೆ. ಹಡಗುಗಳಲ್ಲಿ ನೃತ್ಯ, ಆಹಾರ ಸೇವನೆ ಮುಂತಾದವುಗಳನ್ನು ಜತೆಯಾಗಿ ಮಾಡುವುದರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚು ಎಂಬುದು ತಜ್ಞರ ವಾದ.

Advertisement

Udayavani is now on Telegram. Click here to join our channel and stay updated with the latest news.

Next