ಬೆಂಗಳೂರು: ಕೋವಿಡ್ ಸೋಂಕು ಪರೀಕ್ಷೆಗೆ ಒಳಪಟ್ಟ ಮೇಲೆ ವರದಿಗಾಗಿ ಕಾಯುವುದನ್ನು ತಪ್ಪಿಸುವ ಉದ್ದೇಶದಿಂದ ಪಾಲಿಕೆಯ ಅಧಿಕೃತ ವೆಬ್‌ಸೈಟ್
https://bbmp.gov.in/index.html ನಲ್ಲಿ ಸ್ಕ್ಯಾನಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಕೋವಿಡ್ ಸೋಂಕು ಪರೀಕ್ಷೆಗೆ ಒಳಪಟ್ಟವರು 24 ಗಂಟೆಗಳ ಬಳಿಕ ಮನೆಯಲ್ಲೇ ಮೊಬೈಲ್ ನಂಬರ್ ಹಾಗೂ ಎಸ್ ಆರ್ ಎಫ್ ಐಡಿ ನಮೂದಿಸಿದರೆ, ವೆಬ್‌ಸೈಟ್‌ನಲ್ಲೇ ಪರೀಕ್ಷಾ ವರದಿ ತಿಳಿಯಲಿದೆ. ಇದರಿಂದ ಕೋವಿಡ್ ಸೋಂಕು ವರದಿ ನೆಗೆಟಿವ್ ಅಥವಾ ಪಾಸಿಟಿವ್ ಎಂಬ ಗೊಂದಲ ದೂರವಾಗಲಿದೆ. ಸೋಂಕು ಪರೀಕ್ಷಾ ವರದಿಗೆ ಲ್ಯಾಬ್ ಅಥವಾ ಆರೋಗ್ಯ ಕೇಂದ್ರಕ್ಕೆ ಹೋಗುವುದು ಸಹ ತಪ್ಪಲಿದೆ.
ಇದನ್ನೂ ಓದಿ:ವಿಜಯಪುರ ಬಿಎಸ್ಎನ್ಎಲ್ ಕಚೇರಿ ಮೇಲೆ ಸಿಬಿಐ ದಾಳಿ
ಅಲ್ಲದೆ ಕೋವಿಡ್ ಟೆಸ್‌ಟ್ ಬಳಿಕ, ನೇರವಾಗಿ ಮುಖ್ಯ ಕಚೇರಿಯಿಂದ ಆಯಾ ವಾರ್ಡ್‌ನ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮಾಹಿತಿ ರವಾನೆ ಆಗಲಿದೆ. ಈ ಮೊದಲು ಪಾಲಿಕೆ ಕೇಂದ್ರ ಕಚೇರಿಯಿಂದ ವಲಯವಾರು ಕೋವಿಡ್ ಸೆಂಟರ್‌ಗಳಿಗೆ ಅಲ್ಲಿಂದ ವಾರ್ಡ್‌ಗೆ ಮಾಹಿತಿ ತಲುಪುವುದು ತಡವಾಗುತ್ತಿತ್ತು. ಇದೀಗ ನೇರವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗುವುದರಿಂದ ತಕ್ಷಣ ರೋಗಿಯನ್ನು ಕ್ವಾರಂಟೈನ್ ಮಾಡಲು ಹಾಗೂ ಸಂಪರ್ಕ ಪತ್ತೆಹಚ್ಚಲು ನೆರವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.