ಚಾಮರಾಜನಗರ: ಕೇರಳ ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳವಾಗಿರುವಹಿನ್ನೆಲೆಯಲ್ಲಿ ಜಿಲ್ಲೆಯ ಗುಂಡ್ಲುಪೇಟೆತಾಲೂಕಿನ ಗಡಿಭಾಗದಲ್ಲಿ ಕಟ್ಟೆಚ್ಚರ ವಹಿಸುವಂತೆ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕೋವಿಡ್ ಮುಂಜಾಗ್ರತಾ ಹಾಗೂ ಕೋವಿಡ್ ಲಸಿಕೆ ಅಭಿಯಾನ ಸಂಬಂಧ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿ ಮಾತನಾಡಿದರು. ಕೇರಳದಲ್ಲಿ ಕೋವಿಡ್-19ಸೋಂಕು ಪ್ರಕರಣಗಳ ಸಂಖ್ಯೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಗುಂಡ್ಲುಪೇಟೆ ತಾಲೂಕಿನ ಗಡಿಯಲ್ಲಿ ಅತ್ಯಂತ ಎಚ್ಚರದಿಂದ ಪ್ರಯಾಣಿಕರ ತಪಾಸಣೆ, ಸ್ಕ್ರೀನಿಂಗ್ ಕಾರ್ಯ ನಿರ್ವಹಿಸಬೇಕು. ಕೇರಳ ರಾಜ್ಯದಿಂದ ಗುಂಡ್ಲುಪೇಟೆಯ ಗಡಿ ಪ್ರವೇಶಿಸುವ ವೇಳೆ ಹಿಂದಿನ 72 ಗಂಟೆಗಳ ಅವಧಿಯಲ್ಲಿ ಆರ್‌ಟಿಪಿಸಿ.ಆರ್ ಪರೀಕ್ಷೆಗೆ ಒಳಪಟ್ಟು ನೆಗೆಟಿವ್ ವರದಿ ಇರುವವರನ್ನು ಮಾತ್ರ ಜಿಲ್ಲೆಯ ಗಡಿ ಪ್ರವೇಶಿಸಲು ಅವಕಾಶ ನೀಡಬೇಕು ಎಂದರು.
ಗಡಿಭಾಗದ ಮೂಲೆಹೊಳೆಯಲ್ಲಿ ಈಗಾಗಲೇ ಚೆಕ್‌ಪೋಸ್ಟ್ ತೆರೆದು ವಾಹನಗಳ ತಪಾಸಣೆ ಮಾಡಲಾಗುತ್ತಿದೆ. ವರ್ತಕರು, ಪ್ರಯಾಣಿಕರು, ಯಾರೇಇರಲಿ ಜಿಲ್ಲೆಗೆ ಬಂದಲ್ಲಿ ಕಡ್ಡಾಯವಾಗಿ ತಪಾಸಣೆಗೆ ಒಳಪಡಿಸಬೇಕು. ಸೂಚಿಸಲಾಗಿರುವ ನಿಯಮಗಳು ಅನ್ವಯವಾಗಲಿದೆ. ಯಾವುದೇ ಲೋಪಗಳಿಗೆ ಅವಕಾಶವಾಗದಂತೆ ಕಟ್ಟುನಿಟ್ಟಿನ ನಿಗಾವಣೆ ಇಡಬೇಕು ಎಂದು ಅವರು ಸೂಚಿಸಿದರು.
ಕೋವಿಡ್ ಸೋಂಕು ನಿಯಂತ್ರಣಕ್ಕೆ ಪಾಲನೆ ಮಾಡಬೇಕಿರುವ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಪರಿಶೀಲಿಸಬೇಕು. ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಸಾಮಾಜಿಕ ಅಂತರ ಸೇರಿದಂತೆ ಇನ್ನಿತರೆ ಸುರಕ್ಷಿತ ಕ್ರಮಗಳನ್ನು ಅನುಸರಿಸಲಾಗುತ್ತಿದೆಯೇ ಎಂಬ ಬಗ್ಗೆ ತಪ್ಪದೆ ಖಾತರಿಪಡಿಸಿಕೊಳ್ಳಬೇಕು ಎಂದರು.
ಇದೇ ವೇಳೆ ಜಿಲ್ಲೆಯಲ್ಲಿ ಫ್ರಂಟ್ ಲೈನ್ ವಾರಿಯರ್ಗಳಿಗೆನೀಡಲಾಗುತ್ತಿರುವ ಕೋವಿಡ್ ಲಸಿಕೆ ನೀಡುವ ಕಾರ್ಯ ಪ್ರಗತಿಯನ್ನು ಪರಿಶೀಲಿಸಿದರು. ಕಂದಾಯ, ಪೊಲೀಸ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್,ನಗರಾಭಿವೃದ್ಧಿ ಇಲಾಖೆ ಅಧಿಕಾರಿ, ಸಿಬ್ಬಂದಿಗೆ ಮೊದಲ ಸುತ್ತಿನ ಕೋವಿಡ್ ಲಸಿಕೆ ಪ್ರಕ್ರಿಯೆ ನಡೆಯುತ್ತಿದೆ. ಈ ಕಾರ್ಯ ಕೂಡಲೇ ಪೂರ್ಣವಾಗಬೇಕಿದೆ. ಈಗಾಗಲೇ ಆರೋಗ್ಯ ಇಲಾಖೆ ಕಾರ್ಯಕರ್ತರಿಗೆ ನೀಡುತ್ತಿರುವ ಎರಡನೇ ಹಂತದ ಲಸಿಕೆ ನೀಡುವ ಪ್ರಕ್ರಿಯೆಯು ಸೂಚಿತ ಅವಧಿಯೊಳಗೆ ಪೂರ್ಣವಾಗಬೇಕು ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಉಪವಿಭಾಗಾಧಿಕಾರಿ ಡಾ. ಗಿರೀಶ್ ದಿಲೀಪ್ ಬಡೋಲೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ.ಸಿ. ರವಿ, ತಹಶೀಲ್ದಾರ್ ಕುನಾಲ್, ಚಿದಾನಂದ ಗುರುಸ್ವಾಮಿ, ಜಿಲ್ಲಾ ನಗರಾಭಿವೃದ್ದಿ ಕೋಶ ಯೋಜನಾ ನಿರ್ದೇಶಕರಾದ ಕೆ. ಸುರೇಶ್ ಇತರರು ಸಭೆಯಲ್ಲಿ ಹಾಜರಿದ್ದರು.