Advertisement

ಸೋಂಕು ಮುಕ್ತ ವಲಯ ಸಡಿಲಿಕೆ?

12:10 PM May 03, 2020 | Team Udayavani |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಇಲ್ಲಿಯವರೆಗೆ ಕೋವಿಡ್ ಸೋಂಕು ಕಾಣಿಸಿಕೊಳ್ಳದ ಹಾಗೂ ಕೋವಿಡ್ ಸೋಂಕಿನಿಂದ ಮುಕ್ತವಾಗಿರುವ ವಾರ್ಡ್‌ ಗಳನ್ನು ಹಸಿರು ವಲಯ ಎಂದು ಪರಿಗಣಿಸಿ, ಸಡಿಲಿಕೆ ನೀಡುವ ನಿಟ್ಟಿನಲ್ಲಿ ಚರ್ಚೆ ನಡೆದಿದೆ. ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೋವಿಡ್ ಸೋಂಕು ಪ್ರಕರಣಗಳು ದೃಢಪಟ್ಟಂತ ಜಿಲ್ಲೆಗಳನ್ನು ಕೆಂಪು, ಕಿತ್ತಳೆ, ಹಳದಿ ಹಾಗೂ ಹಸಿರು ವಲಯಗಳಾಗಿ ಗುರುತಿಸಿ ಲಾಕ್‌ಡೌನ್‌ ಸಡಿಲಿಕೆ ನೀಡಿದೆ. ಇದೇ ಮಾದರಿಯಲ್ಲಿ ಕಂಟೈನ್ಮೆಂಟ್‌ ವ್ಯಾಪ್ತಿಯಲ್ಲಿರುವ 25 ವಾರ್ಡ್‌ಗಳನ್ನು ಹೊರತುಪಡಿಸಿ ಉಳಿದ
ವಾರ್ಡ್‌ಗಳಲ್ಲಿ ಲಾಕ್‌ಡೌನ್‌ ಸಡಿಲಿಕೆ ಮಾಡಬೇಕು ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ಅವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸೂಚನೆ ನೀಡಿದ್ದಾರೆ.

Advertisement

ಈ ಸಂಬಂಧ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ಅವರು, ಲಾಕ್‌ಡೌನ್‌ ವಿಸ್ತರಣೆ ಹಾಗೂ ಸಡಿಲಿಕೆ ಕುರಿತು ಕೇಂದ್ರ ಸರ್ಕಾರ ನೀಡಿರುವ ಮಾರ್ಗಸೂಚಿಗಳನ್ನು ರಾಜ್ಯದಲ್ಲಿ ಅಳವಡಿಸಿಕೊಳ್ಳಲಾಗಿದ್ದು, ಇದರ ಅನ್ವಯ ಬೆಂಗಳೂರು ನಗರ ಕೆಂಪು ವಲಯದ ಪಟ್ಟಿಯಲ್ಲಿದೆ. ಬಿಬಿಎಂಪಿ ವ್ಯಾಪ್ತಿಯ 198 ವಾರ್ಡ್‌ ಗಳಲ್ಲಿ 154 ವಾರ್ಡ್‌ಗಳಲ್ಲಿ ಇಲ್ಲಿಯವರೆಗೆ ಕೋವಿಡ್ ಸೋಂಕು ಪ್ರಕರಣ ದೃಢಪಟ್ಟಿಲ್ಲ. ಈ ವಾರ್ಡ್‌ಗಳನ್ನು ಹಸಿರು ವಲಯ ಎಂದು ಪರಿಗಣಿಸಬಹುದಾಗಿದೆ. ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕಂಟೈನ್ಮೆಂಟ್‌ ಮಾಡಿರುವ 25 ವಾರ್ಡ್‌ಗಳಲ್ಲಿ ಸಡಿಲಿಕೆ ಮಾಡಲು ಸಾಧ್ಯವಿಲ್ಲ. ಈ ಸಂಬಂಧ ಮುಖ್ಯಮಂತ್ರಿ ಹಾಗೂ ಮುಖ್ಯ ಕಾರ್ಯದರ್ಶಿಗಳೊಂದಿಗೆ ಶನಿವಾರ ಚರ್ಚೆ ನಡೆಸಲಾಗಿದೆ. ಹಸಿರು ವಲಯದಲ್ಲಿ ಅಗತ್ಯ ಚಟುವಟಿಕೆಗಳಿಗೆ ವಿನಾಯಿತಿ ನೀಡುವಂತೆ ಮುಖ್ಯ ಕಾರ್ಯ ದರ್ಶಿಗಳಿಗೆ ಮನವಿ ಮಾಡಲಾಗಿದ್ದು, ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುಮತಿ ಪಡೆಯಲು ಸೂಚಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ವಿಂಗಡಣೆ
ಬಿಬಿಎಂಪಿ ವ್ಯಾಪ್ತಿಯಲ್ಲಿ 25 ವಾರ್ಡ್‌ಗಳನ್ನು ಕಂಟೈನ್ಮೆಂಟ್‌ ಝೋನ್‌ ವ್ಯಾಪ್ತಿಗೆ ತರಲಾಗಿದೆ. ಉಳಿದಂತೆ 154 ವಾರ್ಡ್‌ಗಳಲ್ಲಿ ಇಲ್ಲಿಯವರೆಗೆ ಕೋವಿಡ್ ಸೋಂಕು ಪ್ರಕರಣಗಳು ದೃಢಪಟ್ಟಿಲ್ಲ. ಇನ್ನು ಕೆಂಪು, ಕಿತ್ತಳೆ, ಹಳದಿ ಹಾಗೂ ಹಸಿರು ವಲಯಗಳು ಎಂದು ವಿಂಗಡಣೆ ಮಾಡುವುದಾದರೆ, ಹೆಚ್ಚು ಕೋವಿಡ್ ಸೋಂಕು ಪ್ರಕರಣಗಳು ಪತ್ತೆಯಾದ ಬೊಮ್ಮನಹಳ್ಳಿ ವಲಯದ ಹೊಂಗಸಂದ್ರ, ಪಶ್ಚಿಮ ವಲಯದ ಪಾದರಾಯನಪುರ ವಾರ್ಡ್‌ಗಳು ಕೆಂಪು ವಲಯ ಎಂದು ಗುರುತಿಸಲಾಗಿದೆ. 14 ದಿನಗಳಲ್ಲಿ ಸೋಂಕು ಕಾಣಿಸಿಕೊಂಡ ಹಂಪಿನಗರ, ಬಾಪೂಜಿನಗರ, ಕೆ.ಆರ್‌.ಮಾರುಕಟ್ಟೆ ವಾರ್ಡ್‌ ಸೇರಿದಂತೆ 10 ವಾರ್ಡ್‌ಗಳನ್ನು ಕಿತ್ತಳೆ ವಲಯಕ್ಕೆ ಸೇರಿಸಲಾಗಿದೆ. ಇನ್ನು ಕಳೆದ 14 ದಿನದಿಂದ ಸೋಂಕು ಕಾಣಿಸಿಕೊಳ್ಳದ 13 ಕಂಟೈನ್ಮೆಂಟ್‌ ವಾರ್ಡ್‌ಗಳನ್ನು ಹಳದಿ ವಲಯದ ಪಟ್ಟಿಯಲ್ಲಿವೆ. ಅಲ್ಲದೆ, ಈವರೆಗೆ ಸೋಂಕು ಕಾಣಿಸಿಕೊಳ್ಳದ ಹಾಗೂ 28 ದಿನಗಳಿಂದ ಸೋಂಕು ಕಾಣಿಸಿಕೊಳ್ಳದ 173 ವಾರ್ಡ್‌ಗಳನ್ನು ಹಸಿರು ವಲಯ ಪಟ್ಟಿಯಲ್ಲಿ ಸೇರಿಸಲಾಗಿದೆ.

ಕಂಟೈನ್ಮೆಂಟ್‌ ವಾರ್ಡ್‌ನಲ್ಲಿ ಮದ್ಯ ಮಾರಾಟವಿಲ್ಲ
ಮದ್ಯ ಮಾರಾಟಕ್ಕೆ ಸರ್ಕಾರ ಅನುಮತಿ ನೀಡಿದೆಯಾದರೂ ಬಿಬಿಎಂಪಿ ವ್ಯಾಪ್ತಿಯ ಕೊರೊನಾ ಸೋಂಕು ದೃಢಪಟ್ಟು ಕಂಟೈನ್ಮೆಂಟ್‌ ಮಾಡಿರವ 25 ವಾರ್ಡ್‌ಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಇರುವುದಿಲ್ಲ ಎಂದು ಆಯುಕ್ತರು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಬೇರೆ ವಾರ್ಡ್‌ ಗಳಿಂದಲೂ ಈ ವಾರ್ಡ್‌ಗಳಿಗೆ ಮದ್ಯ ತರುವಂತಿಲ್ಲ. ಕಂಟೈನ್ಮೆಂಟ್ ‌ಝೋನ್ ಎಂದು ಪರಿಗಣಿಸಿರುವ ವಾರ್ಡ್‌ಗಳಿಂದ ಯಾರು ಹೊರಗೆ ಮತ್ತು ಒಳಗೆ ಹೋಗುವಂತಿಲ್ಲ ಎನ್ನುವ ನಿರ್ಬಂಧ ವಿಧಿಸಲಾಗಿದ್ದು, ಈ ಸಂಬಂಧ ಎಚ್ಚರಿಕೆ ವಹಿಸುವಂತೆ ಪೊಲೀಸ್‌ ಅಧಿಕಾರಿಗಳಿಗೆ ಹಾಗೂ ದಂಡಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಜಂಟಿ ಆಯುಕ್ತರಿಗೆ ವಿಶೇಷ ಅಧಿಕಾರ
ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಬಿಬಿಎಂಪಿಯ 8 ವಲಯದ ಜಂಟಿ ಆಯುಕ್ತರು, ಬಿಬಿಎಂಪಿಯ ಭೂ ಸ್ವಾಧೀನ ವಿಭಾಗದ ವಿಶೇಷಾಧಿಕಾರಿ ಸೇರಿ 9 ಜನರಿಗೆ ತಾತ್ಕಾಲಿಕವಾಗಿ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ ಅಧಿಕಾರ ನೀಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಗೆ ಸಂಬಂಧಿಸಿದಂತೆ ತೆಗೆದು ಕೊಳ್ಳುವ ಮುಂಜಾಗ್ರತಾ ಕ್ರಮಗಳಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸುವ ನಿಟ್ಟಿನಲ್ಲಿ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ ಅಧಿಕಾರವನ್ನು ಬಿಬಿಎಂಪಿ ಜಂಟಿ ಆಯುಕ್ತರಿಗೆ ನೀಡಲಾಗಿದೆ. ಪೂರ್ವ ವಲಯ ಕೆ.ಆರ್‌.ಪಲ್ಲವಿ, ದಕ್ಷಿಣ ವಲಯ- ವೀರಭದ್ರ ಸ್ವಾಮಿ, ರಾಜರಾಜೇಶ್ವರಿ ನಗರ ಜಗದೀಶ್‌, ಬೊಮ್ಮನಹಳ್ಳಿ ರಾಮಕೃಷ್ಣ ಎಂ, ಪಶ್ಚಿಮ ವಲಯ ಎನ್‌. ಚಿದಾನಂದ, ಮಹದೇವಪುರ- ಆರ್‌.ವೆಂಕ ಟಾ ಚಲಪತಿ, ಯಲಹಂಕ- ಡಾ.ಡಿ.ಆರ್‌. ಅಶೋಕ್‌, ದಾಸರ ಹಳ್ಳಿ ಕೆ. ನರ ಸಿಂಹ ಮೂರ್ತಿ, ರಾಜ ರಾಜೇ ಶ್ವರಿ ಕ್ಷೇತ್ರ ವ್ಯಾಪ್ತಿಯ (ವಾರ್ಡ್‌ ನಂ.37) ಯಶವಂತಪುರ ವಾರ್ಡ್‌ಗೆ ಎಂಪಿಯ ಭೂಸ್ವಾಧೀನ ವಿಭಾಗದ ವಿಶೇಷಾಧಿಕಾರಿ ಎ.ಬಿ. ವಿಜಯ ಕುಮಾರ್‌ ಅವರನ್ನು ವಿಶೇಷ ಕಾರ್ಯ ನಿರ್ವಾಹಕ ದಂಡಾಧಿಕಾರಿ ಅಧಿಕಾರ ವಹಿಸಲಾಗಿದೆ. ಇತ್ತೀಚೆಗೆ ಬಿಬಿಎಂಪಿ ಆಯು ಕ್ತರು ಸೇರಿ ಐವರು ವಿಶೇಷ ಆಯುಕ್ತರಿಗೆ ವಿಶೇಷ ಕಾರ್ಯ ನಿರ್ವಾಹಕ ದಂಡಾಧಿಕಾರಿ ಅಧಿಕಾರ ನೀಡಲಾಗಿತ್ತು.

Advertisement

ಬಿಬಿಎಂಪಿ ಸಿಬ್ಬಂದಿಗೆ ಪರೀಕ್ಷೆ
ಬಿಬಿಎಂಪಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ನಗರದಲ್ಲಿ ಕೊರೊನಾ ಸೋಂಕಿತರು ಮತ್ತು ಶಂಕಿತರನ್ನು ಕ್ವಾರಂಟೈನ್‌ ಮಾಡುವುದು, ಸೀಲ್‌ಡೌನ್‌ ಹಾಗೂ ಕಂಟೈನ್ಮೆಂಟ್‌ ಝೋನ್‌
ಗಳಲ್ಲಿ ದಿನಸಿ ಕಿಟ್‌, ಆಹಾರ, ಹಾಲು ವಿತರಣೆ ಸೇರಿದಂತೆ ವಿವಿಧ ಕೆಲಸದಲ್ಲಿ ಭಾಗವಹಿಸಿರುವ ಹಿನ್ನೆಲೆಯಲ್ಲಿ ಮೇ 4ರಿಂದ ಮೇ7 ವರೆಗೆ ಬಿಬಿಎಂಪಿಯ ನಿಗದಿತ ಆರು ಆಸ್ಪತ್ರೆಗಳಲ್ಲಿ ಸ್ವಯಂ ಪ್ರೇರಿತವಾಗಿ ಕೋವಿಡ್  ಸೋಂಕು ಪರೀಕ್ಷೆ ಮಾಡಿಸಿಕೊಳ್ಳಲು ಸೂಚನೆ ನೀಡಲಾಗಿದೆ. ಮೇ 4-7ವರೆಗೆ ನಾಲ್ಕು ದಿನ ಸ್ವಯಂ ಪ್ರೇರಿತವಾಗಿ ಹಲಸೂರು, ಶ್ರೀರಾಮಪುರ, ಗೋವಿಂದರಾಜನಗರ, ಜೆ.ಜೆ. ಆರ್‌.ನಗರ, ಬನಶಂಕರಿ, ಹಾಗೂ ಎಚ್‌. ಸಿದ್ದಯ್ಯ ರೆಫ‌ರಲ್‌ ಆಸ್ಪತ್ರೆಗಳಲ್ಲಿ ತಪಾಸಣೆ ಮಾಡಿಸಿಕೊಳ್ಳುವಂತೆ ಬಿಬಿಎಂಪಿಯ ಆಡಳಿತ
ವಿಭಾಗದ ಉಪ ಆಯುಕ್ತರು ಆದೇಶಿಸಿದ್ದಾರೆ.

ಮೇ 4ರಿಂದ ಕಂಟೈನ್ಮೆಂಟ್‌ ಝೋನ್ ಹೊರತುಪಡಿಸಿ ಉಳಿದೆಡೆ ಸಿಮೆಂಟ್‌ ಮಾರಾಟ, ಕಬ್ಬಿಣ ವ್ಯಾಪಾರ, ಹಾರ್ಡ್‌ ವೇರ್‌ ಶಾಪ್‌, ಪ್ಲಂಬಿಂಗ್‌ಮಳಿಗೆಗಳನ್ನು ಪ್ರಾರಂಭಿಸಬಹುದು.
ಆದರೆ, ಸಾಮಾಜಿಕ ಅಂತರ ಹಾಗೂ ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು.
● ಬಿ.ಎಚ್‌.ಅನಿಲ್‌ ಕುಮಾರ್‌, ಬಿಬಿಎಂಪಿ ಆಯುಕ್ತ.

ಕೆಂಪು ವಲಯ
ಪಾದರಾಯನಪುರ ಹೊಂಗಸಂದ್ರ ಒಟ್ಟು ವಾರ್ಡ್‌: 2

ಹಸಿರು ವಲಯ
ಕೆಂಪು, ಕಿತ್ತಳೆ ಹಾಗೂ ಹಳದಿ ವಲಯದ ಪಟ್ಟಿಯಲ್ಲಿರುವ ವಾರ್ಡ್‌ಗಳನ್ನು ಹೊರೆತು ಪಡಿಸಿ ಉಳಿದ 173 ವಾರ್ಡ್‌ ಗಳು ಹಸಿರು ವಲಯದಲ್ಲಿವೆ.

ಕಿತ್ತಳೆ ವಲಯ
ವಸಂತನಗರ ಹಂಪಿನಗರ ಬಾಪೂಜಿ ನಗರ ಜಗಜೀವನರಾಮ್‌ ನಗರ ಕೆ.ಆರ್‌.ಮಾರುಕಟ್ಟೆ ದೀಪಾಂಜಲಿನಗರ ಜೆ.ಪಿ.ನಗರ ಚಾಮರಾಜಪೇಟೆ ಮಡಿವಾಳ ಹೊರಮಾವು
ಒಟ್ಟು ವಾರ್ಡ್‌: 10

ಹಳದಿ ವಲಯ
ಯಶವಂತಪುರ, ಮಾರುತಿ ಸೇವಾ ನಗರ, ರಾಮಸ್ವಾಮಿ ಪಾಳ್ಯ, ಸುಧಾಮನಗರ, ರಾಜರಾಜೇಶ್ವರಿ ನಗರ ಗುರಪ್ಪನಪಾಳ್ಯ, ಶಾಕಾಂಬರಿನಗರ ಸಂಜಯನಗರ, ಕುಶಾಲ ನಗರ ಧರ್ಮರಾಯಸ್ವಾಮಿ ಟೆಂಪಲ್‌ ವಾರ್ಡ್‌, ಜ್ಞಾನಭಾರತಿ ಹೊಂಬೇಗೌಡ ನಗರ ಜಯನಗರ ಪೂರ್ವ ಒಟ್ಟು ವಾರ್ಡ್‌: 13

Advertisement

Udayavani is now on Telegram. Click here to join our channel and stay updated with the latest news.

Next