ಚಿಕ್ಕಮಗಳೂರು: ಜಿಲ್ಲೆಯಲ್ಲಿ ಜಾನುವಾರುಗಳಿಗೆ ಚರ್ಮಗಂಟು ರೋಗ ಆದ ಬೆನ್ನಲ್ಲೇ ಬಹುತೇಕ ಕಡೆಗಳಲ್ಲಿ ಶ್ವಾನಗಳು ಫಾರ್ವೋ ವೈರಲ್ ಗ್ರ್ಯಾಂಟ್ರೋ ಎಂಟರೈಡಿಸ್ ಸೋಂಕಿಗೆ ಬಲಿಯಾಗುತ್ತಿವೆ.
ಕೂದುವಳ್ಳಿ ಪಶು ಆಸ್ಪತ್ರೆ ವ್ಯಾಪ್ತಿಯಲ್ಲಿ ಮತ್ತು ಚಿಕ್ಕಮಗಳೂರು ನಗರದ ಮಾರುತಿ ನಗರ ಸೇರಿದಂತೆ ಕೆಲವು ಕಡೆಗಳಲ್ಲಿ ಈ ವೈರಸ್ ಬಾಧೆ ಕಾಡುತ್ತಿದ್ದು, ಬೀದಿಶ್ವಾನಗಳು ಸೇರಿದಂತೆ ಸಾಕು ಶ್ವಾನಗಳನ್ನು ಕಾಡುತ್ತಿದೆ. ಮನೆಗಳಲ್ಲಿ ಪ್ರೀತಿಯಿಂದ ಸಾಕಿರುವ ಶ್ವಾನಗಳು ಕೊನೆಯುಸಿರೆಳೆಯುತ್ತಿದ್ದು, ಅವುಗಳನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ.
ಈ ವೈರಸ್ ಬರದಂತೆ ತಡೆಯಲು 700 ರಿಂದ 800 ರೂ. ಚುಚ್ಚುಮದ್ದು ಕೊಡಿಸಬೇಕು. ಇದು ದುಬಾರಿ ಚುಚ್ಚುಮದ್ದು ಆಗಿದ್ದು ಸರ್ಕಾರದಿಂದ ಉಚಿತವಾಗಿ ನೀಡಲು ಸಾಧ್ಯವಾಗುತ್ತಿಲ್ಲ. ಚುಚ್ಚುಮದ್ದು ಹಣ ಕೊಟ್ಟು ಖರೀದಿಸಬೇಕಾಗಿದೆ. ಫಾರ್ವೋ ವೈರಸ್ ಕಾಣಿಸಿಕೊಂಡ ಶ್ವಾನಗಳು ಅನಾರೋಗ್ಯಕ್ಕೆ ತುತ್ತಾಗಿ ನರಳಿ ಸಾಯುತ್ತಿವೆ.
ಈ ರೋಗ ಕಾಣಿಸಿಕೊಳ್ಳುವ ಶ್ವಾನಗಳಿಗೆ ವಾರಗಟ್ಟಲೆ ಡ್ರಿಪ್ಸ್ ಹಾಕಬೇಕಾಗುತ್ತದೆ. ನಾಯಿಮರಿಗಳಲ್ಲಿ ಈ ಸೋಂಕು ಕಾಣಿಸಿಕೊಂಡರೆ ಉಳಿಯುವುದು ಕಷ್ಟವಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಇಂಜೆಕ್ಷನ್ ಕೊಡಿಸಿದರೂ ವೈರಸ್ ಕಾಣಿಸಿಕೊಳ್ಳುತ್ತದೆ. ಈ ವೈರಸ್ ತಗಲುವುದರಿಂದ ಶ್ವಾನಗಳು ರೋಗನಿರೋಧಕ ಶಕ್ತಿ ಕಳೆದುಕೊಳ್ಳುತ್ತವೆ.
ಈ ವೇಳೆ ಶ್ವಾನಗಳಿಗೆ ಹಾಲು ಮತ್ತು ಅನ್ನ ಕೊಡುವ ಬದಲು ಒಳ್ಳೆಯ ಪೌಷ್ಟಿಕ ಆಹಾರಗಳನ್ನು ನೀಡಬೇಕಾಗುತ್ತದೆ ಎಂದು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಸಹಾಯಕ ನಿರ್ದೇಶಕ ಗುರುಪ್ರಸಾದ್ ತಿಳಿಸಿದರು.
ಫಾರ್ವೋ ವೈರಲ್ ಗ್ಯಾಂಟ್ರೋ ಯಂಟರೈಡಿಸ್ ಚುಚ್ಚುಮದ್ದು ಸರ್ಕಾರದಿಂದ ಉಚಿತವಾಗಿ ಸರಬರಾಜಾಗುತ್ತಿಲ್ಲ. 700 ರಿಂದ 800 ರೂ. ವ್ಯಯಿಸಿ ಶ್ವಾನ ಮಾಲೀಕರು ಖರೀದಿಸಿ ವರ್ಷಕ್ಕೊಂದು ಬಾರಿ ಶ್ವಾನಕ್ಕೆ ಕೊಡಿಸಬೇಕು. ಡಾ| ಗುರುಪ್ರಸಾದ್, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಸಹಾಯಕ ನಿರ್ದೇಶಕ