ಬಾಗಲಕೋಟೆ: ನಗರದ ಪ್ರಮುಖ ಪ್ರದೇಶದಲ್ಲಿರುವ ಕೊಕ್‌ಕೋಲಾ ತಂಪು ಪಾನೀಯ ಮಾರಾಟ ಮಾಡುವ ಅಂಗಡಿ ಮಾಲೀಕನಿಗೂ ಕೋವಿಡ್ ಸೋಂಕು ದೃಢಪಟ್ಟಿದ್ದು, ಅವರ ಅಂಗಡಿಯಲ್ಲಿ ಕೆಲಸ ಮಾಡುವ ಕಾರ್ಮಿಕರು ಸಹಿತ ಹಲವರನ್ನು ಕ್ವಾರಂಟೈನ್ ಮಾಡಲಾಗಿದೆ. ತಾಲೂಕಿನ ಸಿಮಿಕೇರಿಯಲ್ಲಿ ತೀವ್ರ ಉಸಿರಾಟದ ಸಮಸ್ಯೆಯಿಂದ ಮೃತಪಟ್ಟದ್ದ ವ್ಯಕ್ತಿಯ ಗಂಟಲು ದ್ರವ ಮಾದರಿಯನ್ನೂ ತಪಾಸಣೆಗೆ ಕಳುಹಿಸಿದ್ದು, ಅದರ ವರದಿ ರವಿವಾರ ಬಂದಿದೆ. ಸಿಮೀಕೇರಿಯ 47 ವರ್ಷದ ಪುರುಷ ಪಿ-36430 ಮೃತ ವ್ಯಕ್ತಿಗೂ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿ ರವಿವಾರ ಏಳು ಜನರಿಗೆ ಕೋವಿಡ್ ದೃಢಪಟ್ಟಿವೆ. ಸೋಂಕಿತರ ಸಂಖ್ಯೆ 399ಗೆ ಏರಿಕೆಯಾಗಿದೆ. 183 ಜನ ಗುಣಮುಖರಾಗಿದ್ದು, 203 ಜನ ಕೋವಿಡ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಮ್ಮು, ನೆಗಡಿ, ಜ್ವರದ ಲಕ್ಷಣದಿಂದಾಗಿ ಬಾಗಲಕೋಟೆಯ ವಿನಾಯಕ ನಗರದ 65 ವರ್ಷದ ವೃದ್ಧ (ಪಿ-36422), ತೀವ್ರ ಉಸಿರಾಟದ ಲಕ್ಷಣದಿಂದಾಗಿ ಮೃತಪಟ್ಟ ಸಿಮಿಕೇರಿ ಗ್ರಾಮದ 47 ವರ್ಷದ ಪುರುಷ (ಪಿ-36430), ಕೆಮ್ಮು, ನೆಗಡಿ, ಜ್ವರದ ಲಕ್ಷಣದಿಂದಾಗಿ ಬೀಳಗಿ ತಾಲೂಕಿನ ಜಾನಮಟ್ಟಿ ಗ್ರಾಮದ 70 ವರ್ಷದ ವೃದ್ದ (ಪಿ-36366), ನವನಗರದ ಸೆಕ್ಟರ್ ನಂ.54ರ ನಿವಾಸಿ 47 ವರ್ಷದ ಪುರುಷ (ಪಿ-36390), ತೀವ್ರ ಉಸಿರಾಟದ ಲಕ್ಷಣದಿಂದಾಗಿ ಬಾಗಲಕೋಟೆ ನಗರದ 50 ವರ್ಷದ ಪುರುಷ (ಪಿ-36399), ಕೆಮ್ಮು, ನೆಗಡಿ, ಜ್ವರದ ಲಕ್ಷಣದಿಂದಾಗಿ ಬಾದಾಮಿ ತಾಲೂಕಿನ ಕುಳಗೇರಿ ಕ್ರಾಸ್‌ನ ನಿವಾಸಿ 37 ವರ್ಷದ ಪುರುಷ (ಪಿ-36407) ಹಾಗೂ ಪಿ-28989 ವ್ಯಕ್ತಿಯ ಸಂಪರ್ಕ ಹೊಂದಿದ ಜಮಖಂಡಿಯ ನಗರದ 45 ವರ್ಷದ ಖಾಸಗಿ ವೈದ್ಯನಿಗೆ (ಪಿ-36414) ಕೋವಿಡ್ ಸೋಂಕು ದೃಢಪಟ್ಟಿದೆ.
2206 ಸ್ಯಾಂಪಲ್‌ಗಳ ನಿರೀಕ್ಷೆ: ಜಿಲ್ಲೆಯಿಂದ ಕಳುಹಿಸಲಾದ ಒಟ್ಟು 2206 ಸ್ಯಾಂಪಲ್‌ಗಳ ವರದಿ ನಿರೀಕ್ಷಿಸಲಾಗುತ್ತಿದೆ. ಪ್ರತ್ಯೇಕವಾಗಿ 1997 ಜನ ನಿಗಾದಲ್ಲಿದ್ದಾರೆ. ಜಿಲ್ಲೆಯಿಂದ ಇಲ್ಲಿಯವರೆಗೆ ಒಟ್ಟು 17244 ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಪೈಕಿ 14537 ನೆಗೆಟಿವ್, 399ಜನರಿಗೆ ಪಾಸಿಟಿವ್ ಬಂದಿವೆ. 14 (ನಿನ್ನೆ ಮೃತಪಟ್ಟ ಕೊಲ್ಹಾರದ ವ್ಯಕ್ತಿ ಹಾಗೂ ಬೆಂಗಳೂರು, ವಿಜಯಪುರದಲ್ಲಿ ಮೃತಪಟ್ಟ ಇಬ್ಬರು ಹೊರತುಪಡಿಸಿ) ಜನ ಮೃತಪಟ್ಟಿದ್ದಾರೆ. ಜಿಲ್ಲೆಯಿಂದ ಕಳುಹಿಸಿದ್ದ ಒಟ್ಟು 29 ಸ್ಯಾಂಪಲ್‌ಗಳು ಮಾತ್ರ ರಿಜೆಕ್ಟ್ ಆಗಿವೆ. ಕಂಟೇನ್ಮೆಂಟ್ ಝೋನ್ 34 ಇದ್ದು, ಇನ್‌ಸ್ಟಿಟ್ಯೂಶನ್ ಕ್ವಾರಂಟೈನ್‌ನಲ್ಲಿದ್ದ 4553 ಜನರನ್ನು ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ|ಕೆ. ರಾಜೇಂದ್ರ ತಿಳಿಸಿದ್ದಾರೆ.
ಇಂದಿನಿಂದ ಸಲೂನ್ ಬಂದ್: ಗಲಗಲಿ ಗ್ರಾಮದಲ್ಲಿರುವ ಹಡಪದ ಅಪ್ಪಣ್ಣ ಸೇವಾ ಸಮಾಜದವರ ಎಲ್ಲಾ ಕ್ಷೌರಿಕ ಅಂಗಡಿಗಳನ್ನು ಸೋಮವಾರದಿಂದ ಜುಲೈ 31 ಶುಕ್ರವಾರದ ವರೆಗೆ ಸ್ವಯಂ ಪ್ರೇರಿತವಾಗಿ ಬಂದ್ ಮಾಡಲಾಗುವುದೆಂದು ಸಮಾಜದ ಪ್ರಮುಖರು ತಿಳಿಸಿದ್ದಾರೆ. ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸುರಕ್ಷತಾ ದೃಷ್ಟಿಯಿಂದ ಬಂದ್ ಮಾಡುವುದು ಅನಿವಾರ್ಯವಾಗಿದ್ದು ಈ ಬಗ್ಗೆ ಸಾರ್ವಜನಿಕರು ಸಹಕರಿಸುವಂತೆ ಸಲೂನ್ ಮಾಲೀಕರು ಮನವಿ ಮಾಡಿದ್ದಾರೆ.
ಗ್ರಾಮದ ಹಡಪದ ಅಪ್ಪಣ್ಣ ಸೇವಾ ಸಮಾಜದ ಕ್ಷೌರಿಕ ಅಂಗಡಿಯ ಮಾಲೀಕರು ಇಂದು ಸಭೆ ಸೇರಿ ಈ ಬಗ್ಗೆ ಚರ್ಚಿಸಿ ಅಂಗಡಿಗಳನ್ನು ತೆರೆಯದಿರಲು ನಿರ್ಣಯಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಶಂಕರಪ್ಪ ನಾವಿ ಕಾರ್ಯದರ್ಶಿ ಮಲ್ಲಪ್ಪ ನಾವಿ ತಿಳಿಸಿದ್ದಾರೆ.