ಬೆಂಗಳೂರು: ನಗರಕ್ಕೆ ಹೊರರಾಜ್ಯದಿಂದ ಬಂದ ಮೂವರಲ್ಲಿ ಹಾಗೂ ಚಾಮರಾಜಪೇಟೆಯ ಪೊಲೀಸ್ ಪೇದೆಯೊಬ್ಬರಲ್ಲಿ ಸೋಂಕು ದೃಢಪಟ್ಟಿದ್ದು, ನಗರದಲ್ಲಿ ಸೋಂಕಿತರ ಸಂಖ್ಯೆ 265ಕ್ಕೆ ಏರಿಕೆಯಾದಂತಾಗಿದೆ. ನವದೆಹಲಿಯಿಂದ ಬಂದ ದಂಪತಿಯ ಮೂರು ತಿಂಗಳ ಮಗು (1,793), ತಮಿಳುನಾಡಿನಿಂದ ಹಿಂದಿರುಗಿದ 57 ವರ್ಷದ ವ್ಯಕ್ತಿ (1930) ಹಾಗೂ ಮಹಾರಾಷ್ಟ್ರದಿಂದ ಹಿಂದಿರುಗಿದವರೊಬ್ಬರಲ್ಲಿ (1939) ಕೋವಿಡ್ 19 ಸೋಂಕು ದೃಢಪಟ್ಟಿದೆ.
ಕ್ವಾರಂಟೈನ್ ನಿಯಮ ಉಲ್ಲಂಘನೆ?: ನವದೆಹಲಿಯಿಂದ ಬಂದ ದಂಪತಿಯ ಮೂರು ತಿಂಗಳ ಮಗುವಲ್ಲಿ ಸೋಂಕು ದೃಢಪಟ್ಟಿದ್ದು, ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಮಧ್ಯೆ ಬಿಬಿಎಂಪಿ ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿದೆಯೇ ಎಂಬ ಅನುಮಾನ ಸೃಷ್ಟಿಯಾಗಿದೆ. ರೈಲಿನ ಮೂಲಕ ದೆಹಲಿಯಿಂದ ಬೆಂಗಳೂರಿಗೆ ಬಂದ ದಂಪತಿಯ ಮಗುವಿಗೆ ಕೋವಿಡ್ 19 ದೃಢಪಟ್ಟಿದೆ.
ಕ್ವಾರಂಟೈನ್‌ನ ನಿಯಮಾನುಸಾರ 10 ವರ್ಷದ ಒಳಗಿನ ಮಕ್ಕಳು, ಗರ್ಭಿಣಿಯರು ಹಾಗೂ ಅನಾರೋಗ್ಯ ಸಮಸ್ಯೆ ಇರುವವರು ಹೊರ ರಾಜ್ಯದಿಂದ ಬಂದರೆ ಅವರನ್ನು ಎರಡು ದಿನಗಳ ಒಳಗೆ ಕೋವಿಡ್ 19 ಪರೀಕ್ಷೆಗೆ ಒಳಪಡಿಸಿ, ವರದಿ ನೆಗೆಟಿವ್ ಬಂದರೆ ಮಾತ್ರ ಅವರನ್ನು ಅವರ ಮನೆಗೆ 14 ದಿನಗಳ ಕಡ್ಡಾಯ ಕ್ವಾರಂಟೈನ್ ಷರತ್ತಿನ ಮೇಲೆ ಕಳುಹಿಸಬೇಕು. ಅಲ್ಲದೆ, ಈ ರೀತಿ ಕ್ವಾರಂಟೈನ್ ಆದ 10ರಿಂದ 12ನೇ ದಿನದ ಒಳಗೆ ಅವರು ಮತ್ತೂಮ್ಮೆ ಸೋಂಕು ಪರೀಕ್ಷೆ ಮಾಡಿಸಿ ಕೊಳ್ಳಬೇಕು. ಇಷ್ಟೇಲ್ಲಾ ನಿಯಮವಿದ್ದರೂ, ವರದಿ ಬರುವ ಮುನ್ನವೇ ದೆಹಲಿ ಯಿಂದ ಬಂದವರನ್ನು ಹೋಂ ಕ್ವಾರಂಟೈನ್‌ಗೆ ಯಾವ ಆಧಾರದ ಮೇಲೆ ಕಳುಹಿಸಲಾಯಿತು ಎಂಬ ನಿಯಮ ಉಲ್ಲಂಘನೆ ಗೊಂದಲ ಸೃಷ್ಟಿಯಾಗಿದೆ.
ನಿಯಮ ಉಲ್ಲಂಘನೆ ಮಾಡಿಲ್ಲ: ಪ್ರಕರಣ ಸಂಬಂಧ ಉದಯವಾಣಿಯೊಂದಿಗೆ ಮಾತನಾಡಿದ ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್‌ಕುಮಾರ್ ಅವರು, ದೆಹಲಿಯಿಂದ ಬಂದ ದಂಪತಿಯ ಮಗುವಿಗೆ ಕೇವಲ ಮೂರು ತಿಂಗಳು ಇದ್ದ ಹಿನ್ನೆಲೆಯಲ್ಲಿ ಮಗು ಹಾಗೂ ದಂಪತಿಯ ಗಂಟಲು ದ್ರವ ಸಂಗ್ರಹಣೆ ಮಾಡಿ ಕಡ್ಡಾಯ ಕ್ವಾರಂಟೈನ್ ಮಾಡಲಾಗಿದೆ. ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿಲ್ಲ.
ಮಗುವಿನ ತಂದೆ ಹಾಗೂ ತಾಯಿಗೆ ಕೋವಿಡ್ 19 ವರದಿ ನೆಗೆಟಿವ್ ಬಂದಿದೆ. ಮಗುವಿಗೆ ಮಾತ್ರ ಪಾಸಿಟಿವ್ ತೋರಿಸುತ್ತಿದ್ದು, ಈ ವರದಿಯ ಬಗ್ಗೆ ಗೊಂದಲವಿದೆ. ಹೀಗಾಗಿ, ಮಗುವಿನ ಗಂಟಲು ದ್ರವವನ್ನು ಮತ್ತೂಮ್ಮೆ ಲ್ಯಾಬ್‌ಗ ಕಳುಹಿಸಲಾಗಿದೆ. ವರದಿ ಬಂದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಅಲ್ಲಿಯವರೆಗೆ ದಂಪತಿಯನ್ನು ಕಡ್ಡಾಯ ಹೋಂ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ ಎಂದು ಮಾಹಿತಿ ನೀಡಿದರು.