Advertisement

ರೇಷ್ಮೆಗೂಡುನೊಂದಿಗೆ ಬರುತ್ತಿದೆಯಾ ಸೋಂಕು?

03:41 PM Apr 17, 2020 | mahesh |

ರಾಮನಗರ: ಕೋವಿಡ್‌-19 ವೈರಸ್‌ ಸೋಂಕು ರಹಿತ ರಾಮ ನಗರ ಸದ್ಯ ಗ್ರೀನ್‌ ಜೋನ್‌ನಲ್ಲಿದೆ. ಆದರೆ ಇಲ್ಲಿನ ರೇಷ್ಮೆಗೂಡು ಮಾರುಕಟ್ಟೆಗೆ ಸೋಂಕು ಪೀಡಿತ ಪ್ರದೇಶಗಳಿಂದ ರೇಷ್ಮೆ ಗೂಡು ಬರುತ್ತಿದ್ದು, ಜಿಲ್ಲಾ ಕೇಂದ್ರ ರಾಮನಗರದ ನಿವಾಸಿಗಳಲ್ಲಿ ಆತಂಕ ಮತ್ತೆ ಮನೆ ಮಾಡಿದೆ. ಕಳೆದೊಂದು ವಾರದಿಂದ ಸೋಂಕು ಪೀಡಿತ ಮಹಾರಾಷ್ಟ್ರ, ತಮಿಳುನಾಡು ರಾಜ್ಯಗಳು, ರಾಜ್ಯದ ಬೆಳಗಾವಿ ಜಿಲ್ಲೆ ಗಳಿಂದಲೂ ರೇಷ್ಮೆ ಗೂಡು ರಾಮನಗರಕ್ಕೆ ಬಂದಿದೆ. ರೆಡ್‌
ಜೋನ್‌ನಲ್ಲಿರುವ ಬೆಳಗಾವಿಯಲ್ಲಿ ರೇಷ್ಮೆ ಗೂಡು ಮಾರುಕಟ್ಟೆ ಮುಚ್ಚಿದೆ. ಆದರೆ ಅಲ್ಲಿಂದಲೇ ರಾಮನಗರಕ್ಕೆ ಗೂಡು ಬರುತ್ತಿದೆ ಎಂದು ಗೂಡು ಮಾರುಕಟ್ಟೆಯ ಮೂಲಗಳು ತಿಳಿಸಿವೆ.

Advertisement

ವಿಶೇಷವಾಗಿ ಮಹಾರಾಷ್ಟ್ರದಿಂದ ಬರುತ್ತಿರುವ ಗೂಡು ಮಾರುಕಟ್ಟೆಗೆ ಬಾರದೆ ನೇರ ರೀಲರ್‌ಗಳ ಫ್ಯಾಕ್ಟರಿಗಳನ್ನು ಸೇರುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಹೀಗೆ ಸೋಂಕಿತ ಪ್ರದೇಶಗಳಿಂದ ಬರುತ್ತಿರುವ ಜನ ತಮ್ಮೊಡನೆ ಸೋಂಕು ಮೆತ್ತಿಸಿಕೊಂಡೇ ಬಂದರೆ ಗತಿ ಏನು ಎಂಬುದು ನಗರವಾಸಿಗಳ ಪ್ರಶ್ನೆ. ರೇಷ್ಮೆ ಗೂಡು ತರುವ ರೈತರು ಮಾರುಕಟ್ಟೆಗಾದರು ನೇರವಾಗಿ ಬಂದರೆ ಕೆಲವೊಂದು ರಕ್ಷಣಾ ವ್ಯವಸ್ಥೆಯಾದರು ಅಲ್ಲಿ ಜಾರಿಯಲ್ಲಿದೆ. ಮಾರುಕಟ್ಟೆಯ ವ್ಯವಸ್ಥೆಯನ್ನೇ ಧಿಕ್ಕರಿಸುವುದು ಸರಿಯಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಬೈವೋಲ್ಟಿನ್‌ ರೇಷ್ಮೆ ಗೂಡಿಗೆ (ಬಿಳಿಗೂಡು) ರಾಮನಗರದಲ್ಲಿ ಬೇಡಿಕೆ ಇದ್ದು, ಬೇರೆ ಮಾರುಕಟ್ಟೆಗಳಿಗಿಂತ ಇಲ್ಲಿ ಹೆಚ್ಚಿನ ದರ ಸಿಗುತ್ತಿದೆ. ಕಳೆದೆರೆಡು ವಾರಗಳಿಂದ ದಿನವೊಂದಕ್ಕೆ ಸರಾಸರಿ 10 ಸಾವಿರ ಕೇಜಿ ಬೈವೋಲ್ಟಿನ್‌ ಗೂಡು ಈ ಮಾರುಕಟ್ಟೆಗೆ ಬರುತ್ತಿದೆ ಎಂದು ಅಂಕಿ ಅಂಶಗಳು ಹೇಳಿವೆ.

ಅಶ್ವತ್ಥ ನಾರಾಯಣ ಗೌಡ ಬೇಸರ
ಪತ್ರಿಕೆಯೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯ ವಕ್ತಾರ ಅಶ್ವತ್ಥನಾರಾಯಣ ಗೌಡ, ಸೋಂಕು ಪೀಡಿತ ರಾಜ್ಯಗಳಿಂದ ರೇಷ್ಮೆ ಗೂಡು ತರಲು ಜಿಲ್ಲಾಧಿಕಾರಿಗಳು,
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಅವಕಾಶ ಕೊಡಬಾರದು. ಬೆಳಗಾವಿ ಮುಂತಾದ ಸೋಂಕು ಪೀಡಿತ ಜಿಲ್ಲೆಗಳಿಂದಲೂ ಗೂಡು ತರುವವರ ಸಂಖ್ಯೆ
ಅಧಿಕವಾಗುತ್ತಿದೆ. ಗ್ರೀನ್‌ ಜೋನ್‌ನಲ್ಲಿರುವ ರಾಮನಗರ ಹಳದಿ, ಕೆಂಪು ಜೋನ್‌ಗಳಿಗೆ ಹೋಗುವುದು ಬೇಡ ಎಂದು ಕಳಕಳಿ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next