ಈಗಾಗಲೇ ಗುಣಮುಖರಾಗಿರುವ ವ್ಯಕ್ತಿಗಳಿಂದ ಇತರರಿಗೆ ಸೋಂಕು ಹರಡುವ ಯಾವುದೇ ಸಾಧ್ಯತೆಗಳಿಲ್ಲ. ಬದಲಿಗೆ ಅವರು ಪ್ಲಾಸ್ಮಾ ಚಿಕಿತ್ಸೆ ಮೂಲಕ ಇತರೆ ಸೋಂಕಿತರನ್ನು ಗುಣಪಡಿಸಲು ಇರುವ ಸಂಭಾವ್ಯ ಮೂಲಗಳಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್ ಹೇಳಿದ್ದಾರೆ.
ಕೋವಿಡ್ ಸೋಂಕಿನ ಸ್ಥಿತಿಗತಿ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಸೋಂಕಿನಿಂದ ಗುಣಮುಖರಾದವರ ಮೇಲಿರುವ ಕಳಂಕ ಅಳಿಸಿಹಾಕಲು ಅಭಿಯಾನ ನಡೆಸುವುದಾಗಿ ತಿಳಿಸಿದರು.
ಈ ನಡುವೆ ದೇಶಾದ್ಯಂತ ಒಂದೇ ದಿನ 1,900ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿ ಆಘಾತ ಎದುರಿಸಿದ ಮರುದಿನವೇ ಸಮಾಧಾನಕರ ಸುದ್ದಿಯೊಂದನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿದೆ. ಅದೇನೆಂದರೆ, ಈ ಹಿಂದೆ ಕೋವಿಡ್ ಪಾಸಿಟಿವ್ ಪ್ರಕರಣಗಳನ್ನು ಹೊಂದಿದ್ದ ದೇಶದ 16 ಜಿಲ್ಲೆಗಳಲ್ಲಿ ಕಳೆದ 28 ದಿನಗಳಿಂದ ಒಂದೇ ಒಂದು ಹೊಸ ಪ್ರಕರಣ ಪತ್ತೆಯಾಗಿಲ್ಲ!
ಹೊಸ ಪ್ರಕರಣ: ಈ ನಡುವೆ ಭಾನುವಾರ ಮುಂಜಾನೆಯಿಂದ ಈಚೆಗಿನ 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ 1,396 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಇದೇ ವೇಳೆ ಭಾನುವಾರ ಒಂದೇ ದಿನ 381 ಸೋಂಕಿತರು ಗುಣಮುಖರಾಗಿದ್ದಾರೆ. ಅವರ ಪ್ರಮಾಣವು ಶೇ.22.17ರಷ್ಟಿದೆ ಎಂದು ಅಗರ್ವಾಲ್ ಮಾಹಿತಿ ನೀಡಿದರು. ಇದುವರೆಗೆ ಒಟ್ಟು 6, 184 ಮಂದಿ ಚಿಕಿತ್ಸೆ ಪಡೆದು ಸೋಂಕು ಮುಕ್ತರಾಗಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.