Advertisement

ಮಾಸ್ಕ್ ತ್ಯಾಜ್ಯ ಅವೈಜ್ಞಾನಿಕ ವಿಲೇವಾರಿಯಿಂದ ಸೋಂಕು ಭೀತಿ

02:54 PM Mar 27, 2020 | Suhan S |

ಬೆಂಗಳೂರು: ಕೋವಿಡ್ 19 ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸಾರ್ವಜನಿಕರು ದೊಡ್ಡ ಪ್ರಮಾಣದಲ್ಲಿ ಮಾಸ್ಕ್ ಗಳನ್ನು ಬಳಸುತ್ತಿದ್ದು, ಅವುಗಳನ್ನು ಪ್ರತ್ಯೇಕವಾಗಿ ನೀಡಿ ವೈಜ್ಞಾನಿಕ ವಿಲೇವಾರಿಗೆ ಒತ್ತು ನೀಡದ ಕಾರಣ ಇನ್ನಷ್ಟು ಆರೋಗ್ಯ ಸಮಸ್ಯೆ ತಲೆದೋರುವ ಭೀತಿ ಎದುರಾಗಿದೆ.

Advertisement

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ನಗರ, ಪಟ್ಟಣ ಪ್ರದೇಶಗಳಲ್ಲಿ ಮಾಸ್ಕ್ ಗಳ ಬಳಕೆ ಹೆಚ್ಚಾಗಿದೆ. ಹೀಗೆ ಬಳಸಿದ ಮಾಸ್ಕ್  ಗಳನ್ನು ಹಸಿ ಇಲ್ಲವೇ ಒಣ ತ್ಯಾಜ್ಯದ ಜತೆ ಸೇರಿಸಿ ನೀಡುತ್ತಿರುವುದು, ಎಲ್ಲೆಂದರಲ್ಲಿ ಎಸೆಯುವುದು ನಡೆದಿದೆ. ಇದೇ ರೀತಿ ಮುಂದುವರಿದರೆ ಇನ್ನಷ್ಟು ಆರೋಗ್ಯ ಸಮಸ್ಯೆ ಉದ್ಧವಾಗುವ ಸಾಧ್ಯತೆ ಇದೆ. ಈಗಾಗಲೇ ನಗರಾಭಿವೃದ್ಧಿ ಇಲಾಖೆಯು ಮಾಸ್ಕ್ಗಳ ವಿಲೇವಾರಿ ಬಗ್ಗೆ ನಿರ್ದಿಷ್ಟ ಸೂಚನೆ ನೀಡಿದ್ದರೂ ಪಾಲನೆಯಾಗದಿರುವುದು ಆತಂಕಕ್ಕೆ ಕಾರಣವಾಗಿದೆ.

ಕೋವಿಡ್ 19 ಮುನ್ನೆಚ್ಚರಿಕೆಯಾಗಿ ಸಾರ್ವಜನಿಕರು ಮಾಸ್ಕ್ ಗಳನ್ನು ಬಳಸುತ್ತಿದ್ದಾರೆ. ಅನಿವಾರ್ಯ ಕಾರಣಗಳಿಗೆ ಹೊರಗೆ ಓಡಾಡುವವರು ಮಾತ್ರವಲ್ಲದೇ ಮನೆಗಳಲ್ಲಿದ್ದವರು ಮಾಸ್ಕ್ ಧರಿಸುತ್ತಿದ್ದಾರೆ. ಸಾಧಾರಣ ಮಾಸ್ಕ್ನಿಂದ ಹಿಡಿದು ನಾನಾ ಶ್ರೇಣಿಯ ಮಾಸ್ಕ್ಗಳ ಬಳಕೆ ಹೆಚ್ಚಾಗುತ್ತಿದೆ. ಆ ಹಿನ್ನೆಲೆಯಲ್ಲಿ ಬಳಸಿದ ಮಾಸ್ಕ್, ಗ್ಲೌಸ್‌ ತ್ಯಾಜ್ಯ ಕೂಡ ದೊಡ್ಡ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತಿದೆ.

ಪ್ರತ್ಯೇಕ ಸಂಗ್ರಹವಿಲ್ಲ: ಬಳಸಿದ ಗ್ಲೌಸ್‌, ಮಾಸ್ಕ್ಗಳನ್ನು ಪ್ರತ್ಯೇಕವಾಗಿ ಸ್ಯಾನಿಟರಿ ತ್ಯಾಜ್ಯದೊಂದಿಗೆ ನೀಡಬೇಕು ಎಂದು ನಗರಾಭಿವೃದ್ಧಿ ಇಲಾಖೆ ಸೂಚಿಸಿದೆ. ಆದರೆ ಬಹಳಷ್ಟು ಕಡೆ ಬಳಸಿದ ಗ್ಲೌಸ್‌, ಮಾಸ್ಕ್ಗಳನ್ನು ಒಣ, ಹಸಿ ಕಸದಲ್ಲೇ ಸೇರಿಸಿ ನೀಡಲಾಗುತ್ತಿದೆ. ಕೆಲವೆಡೆ ಬಳಸಿದ ಮಾಸ್ಕ್ಗಳನ್ನು ತೊಳೆದು ಮತ್ತೆ ಬಳಸುವುದು ಕಂಡುಬಂದಿದೆ. ಇದರಿಂದ ನೈರ್ಮಲ್ಯ ಹಾಳಾಗುವುದು ಮಾತ್ರವಲ್ಲದೇ ತ್ಯಾಜ್ಯ ವಿಲೇವಾರಿಯಲ್ಲಿ ತೊಡಗಿಸಿಕೊಂಡಿರುವ ಪೌರ ಕಾರ್ಮಿಕರ ಆರೋಗ್ಯಕ್ಕೂ ಅಪಾಯಕಾರಿಯಾಗಿ ಪರಿಣಮಿಸಿದಂತಿದೆ. ಬಳಸಿದ ಗ್ಲೌಸ್‌, ಮಾಸ್ಕ್ ಗಳನ್ನು ಎಲ್ಲೆಂದರಲ್ಲಿ ಎಸೆಯುವುದೂ ರೋಗ ಹರಡಲು ಕಾರಣ ಎನ್ನುತ್ತಾರೆ ಅಧಿಕಾರಿಗಳು.

ನೈರ್ಮಲ್ಯ ಕಾಪಾಡಲು ಕೈಜೋಡಿಸಿ :  ಒಂದು ಮಾಸ್ಕ್ ಅನ್ನು ಆರೇಳು ಗಂಟೆ ಬಳಸಬಹುದಾಗಿದೆ. ನಂತರ ಆ ಮಾಸ್ಕನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಲು ಸಹಕರಿಸಬೇಕು. ಮುಖ್ಯವಾಗಿ ಬಳಸಿದ ಮಾಸ್ಕ್ ಅನ್ನು ಪ್ರತ್ಯೇಕವಾಗಿಟ್ಟು, ಸ್ಯಾನಿಟರಿ ತ್ಯಾಜ್ಯದೊಂದಿಗೆ ಪ್ರತ್ಯೇಕವಾಗಿ ನೀಡಬೇಕು. ಎಲ್ಲೆಂದರಲ್ಲಿ ಎಸೆಯುವುದು ಸರಿಯಲ್ಲ ಎಂದು ನಗರಾಭಿವೃದ್ಧಿ ಇಲಾಖೆ ಉನ್ನತ ಅಧಿಕಾರಿಯೊಬ್ಬರು ತಿಳಿಸಿದರು. ಬಳಸಿದ ಮಾಸ್ಕ್ಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಸ್ಯಾನಿಟರಿ ತ್ಯಾಜ್ಯದೊಂದಿಗೆ ನೀಡಬೇಕು. ಇಲ್ಲವೇ ಬಳಸಿದ ಮಾಸ್ಕ್ ಅನ್ನು ಎರಡು ದಿನ ಬಿಸಿಲಲ್ಲಿ ಇಡುವುದು ಅಥವಾ ಬಿಸಿಯಾದ ನೀರಿನಲ್ಲಿ ಅದನ್ನು ಕೆಲವು ಗಂಟೆ ನೆನೆಸಿ ನಂತರ ಪೌರ ಕಾರ್ಮಿಕರಿಗೆ ಪ್ರತ್ಯೇಕವಾಗಿ ನೀಡಬೇಕು. ಈ ರೀತಿ ಮಾಡಿದ ಸೋಂಕು ತಡೆಯಲು ಸಾಧ್ಯವಿದೆ. ಇದನ್ನು ಸಾರ್ವಜನಿಕರು ಪ್ರಜ್ಞಾಪೂರ್ವಕವಾಗಿ ಪಾಲಿಸಬೇಕು ಎಂದು ಮನವಿ ಮಾಡಿದರು.

Advertisement

ಬಿಬಿಎಂಪಿಯಲ್ಲೂ ಸಮಸ್ಯೆ  :  ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾರ್ವಜನಿಕರು ಬಳಸಿದ ಮಾಸ್ಕ್, ಗ್ಲೌಸ್‌ಗಳನ್ನು ಪ್ರತ್ಯೇಕವಾಗಿ ಒಂದು ಕಾಗದದ ಚೀಲದಲ್ಲಿಟ್ಟು ನೀಡಬೇಕು ಎಂದು ಆಯುಕ್ತರು ಸೂಚಿಸಿದ್ದಾರೆ. ಪ್ರತ್ಯೇಕಿಸಿ ನೀಡದಿದ್ದರೆ ಅದನ್ನು ಸ್ವೀಕರಿಸದಂತೆ ಪೌರಕಾರ್ಮಿಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಹಾಗಾಗಿ ಬಹಳಷ್ಟು ಕಡೆ ಹಸಿ, ಒಣ ಕಸದಲ್ಲೇ ಗ್ಲೌಸ್‌, ಮಾಸ್ಕ್ ಸೇರಿಸಿ ನೀಡಲಾಗುತ್ತಿದೆ. ಹಲವೆಡೆ ಮಾಸ್ಕ್, ಗ್ಲೌಸ್‌ಗಳನ್ನು ಖಾಲಿ ನಿವೇಶನ, ಪಾರ್ಕ್‌, ಪಾದಚಾರಿ ಮಾರ್ಗ ಇತರೆಡೆ ಬಿಸಾಡುತ್ತಿರುವುದು ಹೆಚ್ಚಾಗುತ್ತಿವೆ. ಇದರಿಂದ ನೈರ್ಮಲ್ಯ ಸಮಸ್ಯೆ ಹೆಚ್ಚುತ್ತಿದೆ ಎನ್ನುತ್ತಾರೆ ಬಿಬಿಎಂಪಿ ಅಧಿಕಾರಿಗಳು.

ಪಟ್ಟಣ ಪ್ರದೇಶಗಳಲ್ಲಿ ಬಳಸಿದ ಗ್ಲೌಸ್‌, ಮಾಸ್ಕ್ಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ವಿಲೇವಾರಿಗೆ ಕ್ರಮ ವಹಿಸುವಂತೆ ಸೂಚಿಸಲಾಗಿದೆ. ಕೆಲವೆಡೆ ಬಳಸಿದ ಮಾಸ್ಕ್ ಗಳನ್ನು ತೊಳೆದು ಮತ್ತೆ ಬಳಸುತ್ತಿದ್ದಾರೆ ಎಂಬ ಮಾಹಿತಿ ಇದೆ. ಜನರಿಗೆ ಸರಿಯಾದ ಮಾಹಿತಿ ನೀಡಿ ಜಾಗೃತಿ ಮೂಡಿಸಲು ಒತ್ತು ನೀಡುವಂತೆಯೂ ಅಧಿಕಾರಿಗಳಿಗೆ ಸೂಚಿಸಲಾಗಿದೆ. -ಕೆ.ಸಿ.ನಾರಾಯಣಗೌಡ, ಸಚಿವ

 

 ಎಂ. ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next