ಬೆಂಗಳೂರು: ನಗರದಲ್ಲಿ ಗುರುವಾರ 17 ಜನರಲ್ಲಿ ಕೋವಿಡ್ 19 ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 581ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರದಿಂದ ಬಂದ ಮೂವರೂ ಹಾಗೂ ತಮಿಳುನಾಡಿನಿಂದ ಬಂದ ಇಬ್ಬರಲ್ಲಿ ಸೋಂಕು ದೃಢಪಟ್ಟಿದೆ. ನಗರದಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು. ಸೋಂಕು ದೃಢಪಟ್ಟ ಹಲವು ಪ್ರಕರಣಗಳಲ್ಲಿ ಸೋಂಕು ಹಬ್ಬುತ್ತಿರುವ ಮೂಲ ಪತ್ತೆಯಾಗದೆ ಇರುವುದು ಆತಂಕಕ್ಕೆ ಕಾರಣವಾಗಿದೆ.
ದಿನೇ ದಿನೆ ಹೊಸ ಪ್ರದೇಶಗಳಲ್ಲಿ ಪ್ರಕರಣಗಳು ದೃಢಪಡುತ್ತಿದ್ದು, ಪರಿಸ್ಥಿತಿ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಸೋಂಕಿನ ಲಕ್ಷಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸೋಂಕು ಪರೀಕ್ಷೆಗೆ ಒಳಪಟ್ಟ ವಾಲ್ಮೀಕಿ ನಗರದ 58 ವರ್ಷದ ಪುರುಷ, ಬನಶಂಕರಿ 2ನೇ ಹಂತದ 23 ವರ್ಷದ ಗರ್ಭಿಣಿಗೆ, ಜಯನಗರದ 22 ವರ್ಷದ ಯುವಕನಿಗೆ, ಇತ್ತೀಚೆಗೆ ಮಗುವಿಗೆ ಜನ್ಮ ನೀಡಿದ್ದ ಪಾದರಾಯನಪುರದ 25 ವರ್ಷದ ಯುವತಿಗೆ ಸೋಂಕು ದೃಢಪಟ್ಟಿದೆ.
ಮಾನ್ಯತಾ ಟೆಕ್‌ಪಾರ್ಕ್‌ನ 45 ವರ್ಷದ ಮಹಿಳೆ, ಬೊಮ್ಮನಹಳ್ಳಿ ಸಮೀಪದ ಹೆನ್ನಾಗರದ 32 ವರ್ಷದ ಮಹಿಳೆ, ಸರ್ಜಾಪುರದ 35 ವರ್ಷದ ಪುರುಷ, ಜಯಂತಿನಗರದ 54 ವರ್ಷದ ಮಹಿಳೆ, ಕೆಂಗೇರಿಯ 58 ವರ್ಷದ ಪುರುಷ, ಆನೇಕಲ್‌ನ ಅಮೃತ ಮಹಲ್ ಹಾಸ್ಟೆಲ್‌ನಲ್ಲಿನ ವಿದ್ಯಾರ್ಥಿಗಳಾದ 16 ವರ್ಷದ ಯುವತಿ, ಇದೇ ಹಾಸ್ಟೆಲ್‌ನ ಸಿಬ್ಬಂದಿ 39 ವರ್ಷದ ವ್ಯಕ್ತಿ ಹಾಗೂ 36 ವರ್ಷದ ಮಹಿಳೆಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ. ಎಚ್‌ಎಎಲ್‌ನ 58 ವರ್ಷದ ಮಹಿಳೆಗೂ ಸೋಂಕು ದೃಢಪಟ್ಟಿದೆ.
ಮೂವರು ಸಾವು: ನಗರದಲ್ಲಿ ಗುರುವಾರ ಒಟ್ಟು ಮೂರು ಜನ ಸೋಂಕಿನಿಂದ ಮೃತಪಟ್ಟಿದ್ದು, ಚಿಕ್ಕಬಾಣಾವರದಲ್ಲಿ ಸೋಂಕಿನಿಂದ ಮೃತಪಟ್ಟ 65 ವರ್ಷದ ವೃದ್ಧರ ಮಾಹಿತಿ ಆರೋಗ್ಯ ಇಲಾಖೆ ಹೊರಡಿ ಸಿದ ಬುಲೆಟಿನ್‌ನಲ್ಲಿ ದಾಖಲಾಗಿಲ್ಲ. ಕೋವಿಡ್ 19 ದಿಂದ ಚಿಕಿತ್ಸೆ ಪಡೆಯುತ್ತಿದ್ದ 35 ವರ್ಷದ ವ್ಯಕ್ತಿ ಹಾಗೂ 60 ವರ್ಷದ ಹಿರಿಯ ನಾಗರಿಕರೊಬ್ಬರು ಗುರುವಾರ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಬಿಬಿಎಂಪಿಯ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ಈ ಮೂಲಕ ನಗರದಲ್ಲಿ ಮೃತಪಟ್ಟವರ ಸಂಖ್ಯೆ 24ಕ್ಕೆ ಏರಿಕೆಯಾದಂತಾಗಿದೆ.
ಕಂಟೈನ್ಮೆಂಟ್ ಪ್ರದೇಶ 150 ಮುಟ್ಟುವ ಸಾಧ್ಯತೆ: ನಗರದಲ್ಲಿ ದಿನದಿಂದ ದಿನಕ್ಕೆ ಕಂಟೈನ್ಮೆಂಟ್ ಪ್ರದೇಶಗಳ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಆತಂಕದ ವಾತಾವರಣ ನಿರ್ಮಾಣವಾಗುತ್ತಿದೆ. ಜೂನ್.9ರ ವೇಳೆಗೆ ನಗರದಲ್ಲಿ 113 ಪ್ರದೇಶಗಳು ಕಂಟೈನ್ಮೆಂಟ್ ವ್ಯಾಪ್ತಿಗೆ ಒಳಪಟ್ಟಿದ್ದು, ಇನ್ನು ಎರಡುದಿನಗಳಲ್ಲಿ ಕೋವಿಡ್ 19 ಸೋಂಕಿಗೆ ಒಳಪಟ್ಟವರು ಇರುವ ಪ್ರದೇಶಗಳ ಮಾಹಿತಿಯನ್ನು ಪಾಲಿಕೆ ನೀಡಿಲ್ಲ. ಈ ಪ್ರದೇಶಗಳನ್ನೂ ಸೇರಿಸಿದರೆ ಕಂಟೈನ್ಮೆಂಟ್ ಪ್ರದೇಶಗಳ ಸಂಖ್ಯೆ 150ರ ಗಡಿ ದಾಟುವ ಸಾಧ್ಯತೆಯೂ ಇದೆ.
11 ದಿನದಲ್ಲಿ 13 ಮಂದಿ ಸಾವು: ಜಿಲ್ಲಾವಾರು ಕೋವಿಡ್ 19 ಸೋಂಕು ಪ್ರಕರಣಗಳ ಪಟ್ಟಿಯಲ್ಲಿ ಮೊದಲನೆ ಸ್ಥಾನದಲ್ಲಿದ್ದ ಬೆಂಗಳೂರು ಮಹಾನಗರ ನಾಲ್ಕನೇ ಸ್ಥಾನಕ್ಕಿಳಿದೆ. ಆದರೆ, ಕಳೆದ 11 ದಿನಗಳಲ್ಲಿ ನಿತ್ಯ ಒಬ್ಬ ಸೋಂಕಿಗೆ ಬಲಿಯಾಗಿದ್ದಾರೆ. ನಗರದಲ್ಲಿ ಜೂನ್ ತಿಂಗಳಿಂದೀಚೆಗೆ (11 ದಿನಕ್ಕೆ) 224 ಸೋಂಕು ಪ್ರಕರಣಗಳು ದೃಢಪಟ್ಟಿದ್ದು, 13 ಮಂದಿ ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಅವಧಿಯ ಸೋಂಕಿತರಲ್ಲಿ ಶೇ. 40 ರಷ್ಟು ಹೊರರಾಜ್ಯ ಮತ್ತು ಹೊರದೇಶ ಪ್ರಯಾಣ, ಶೇ. 25 ರಷ್ಟು ಮಂದಿ ವಿಷಮಶೀತ ಜ್ವರ ಹಿನ್ನೆಲೆ ಹೊಂದಿದ್ದಾರೆ. ಮೇ ಅಂತ್ಯದಲ್ಲಿ ಶೇ.64.7 ಇದ್ದ ಸೋಂಕಿತರ ಗುಣಮುಖ ದರ ಜೂ.11ಕ್ಕೆ ಶೇ.51.4ಕ್ಕೆ ಇಳಿಕೆಯಾಗಿದೆ. 71 ಮಂದಿ ಗುಣಮುಖರಾಗಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಸೋಂಕಿತರ ಮರಣ ದರ ಶೇ.3.95 ರಷ್ಟಿದೆ.