ಬಂಗಾರಪೇಟೆ: ಕೋವಿಡ್ 19 ಸೋಂಕಿತ ಚಾಲಕನೊಬ್ಬ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರ ಸ್ವಗ್ರಾಮ, ಸೂಲಿಕುಂಟೆ ಗ್ರಾಪಂನ ಕುಪ್ಪನಹಳ್ಳಿಯಲ್ಲಿ ವಾರಗಳ ಕಾಲ ವಾಸವಾಗಿದ್ದ ಪರಿಣಾಮವಾಗಿ ಇಡೀ ಗ್ರಾಮವನ್ನೇ ಸೀಲ್‌ಡೌನ್ ಮಾಡಲಾಗಿದೆ.
ಕೋಲಾರದ ಲೋಕೋಪಯೋಗಿ ಇಲಾಖೆ ಕ್ವಾಟ್ರಸ್‌ನಲ್ಲಿ ಸಂಬಂಧಿಕರ ಮನೆಯಲ್ಲಿ ವಾಸವಾಗಿರುವ ಮಾಲೂರು ತಾಲೂಕಿನ ವ್ಯಕ್ತಿಯೊಬ್ಬ ಖಾಸಗಿ ಕಾರೊಂದನ್ನು ಇಟ್ಟುಕೊಂಡು ಜೀವನ ನಡೆಸುತ್ತಿದ್ದು, ರಾಜ್ಯದ ವಿವಿಧ ಜಿಲ್ಲೆ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶಕ್ಕೆ ಬಾಡಿಗೆ ಹೋಗಿ ಬರುತ್ತಿದ್ದ.
ಐದು ದಿನಗಳ ಹಿಂದೆ ಜ್ವರದಿಂದ ಬಳಲುತ್ತಿದ್ದ ಈತ, ಕೋಲಾರದ ಎಸ್‌ಎನ್‌ಆರ್ ಆಸ್ಪತ್ರೆಗೆ ದಾಖಲಾಗಿದ್ದು, ಗಂಟಲು ದ್ರವ ಪರೀಕ್ಷೆಯಲ್ಲಿ ಕೋವಿಡ್ 19 ಪಾಸಿಟಿವ್ ಕಂಡು ಬಂದಿದೆ. ತಾಲೂಕಿನ ಕುಪ್ಪನಹಳ್ಳಿ ಗ್ರಾಮದಲ್ಲಿ ಮದುವೆಯಾಗಿರುವ ಆತ, ಪತ್ನಿ ಮನೆಯಲ್ಲಿ ವಾರ ಕಾಲ ತಂಗಿದ್ದ ಎನ್ನಲಾಗಿದೆ.
ಈ ಚಾಲಕನಿಗೆ ಕೋವಿಡ್ 19 ಸೋಂಕು ಇರುವುದು ಭಾನುವಾರ ದೃಢಪಟ್ಟಿರುವುದರಿಂದ ಎಚ್ಚೆತ್ತುಕೊಂಡ ತಾಲೂಕು ಆಡಳಿತವು ಮಂಗಳವಾರ ಬೆಳಗ್ಗೆಯೇ ಕುಪ್ಪನಹಳ್ಳಿಗೆ ಭೇಟಿ ನೀಡಿ ಗ್ರಾಮದಿಂದ ಯಾರೂ ಹೊರಹೋಗದಂತೆ ಸೀಲ್‌ಡೌನ್ ಮಾಡಿದೆ.
ಕೋವಿಡ್ 19 ಪಾಸಿಟಿವ್ ಇರುವ ಚಾಲಕನ ಪತ್ನಿ, ಈತನ ಅತ್ತೆ ಸೇರಿದಂತೆ ಕುಟುಂಬದ ಮೂವರನ್ನು ಈಗಾಗಲೇ ಕೋವಿಡ್ 19 ಸೋಂಕು ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಿದ್ದು, ಇವರೆಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ. ಪಿಡಿಒ ಶಂಕರ್ ನೇತೃತ್ವದಲ್ಲಿ ಗ್ರಾಮದಲ್ಲಿ ಸಂಪೂರ್ಣವಾಗಿ ಔಷಧಿ ಸಿಂಪಡಣೆ ಮಾಡಲಾಗಿದೆ. ಗ್ರಾಮಲೆಕ್ಕಿಗ ಶ್ರೀನಾಥ್ ಮುಂತಾದವರು ಭೇಟಿ ನೀಡಿ ಮುಂದಿನ ಕ್ರಮಕೈಗೊಂಡಿದ್ದಾರೆ.