ಬಳ್ಳಾರಿ: ಜಿಲ್ಲೆಯಲ್ಲಿ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿರುವ ಕೋವಿಡ್ ಸೋಂಕನ್ನು ನಿಯಂತ್ರಿಸುವಲ್ಲಿ ಜಿಲ್ಲಾಡಳಿತ, ಆರೋಗ್ಯ ಇಲಾಖೆ ವಿಫಲವಾಗಿದೆಯೇ ಎಂಬ ಭಾವನೆ ವ್ಯಕ್ತವಾದರೂ, ಜಿಲ್ಲೆಯ ಜನರು ಸೋಂಕಿಗೆ ಮದ್ದಾಗಿರುವ ಆತ್ಮಸ್ಥೈರ್ಯವನ್ನು ಕಳೆದುಕೊಳ್ಳಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ಸಿಂಗ್ ಜನರಲ್ಲಿ ಕೋರಿದರು.
ನಗರದ ಜಿಲ್ಲಾ ಎಸ್‌ಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸೋಂಕು ನಿಯಂತ್ರಿಸುವಲ್ಲಿ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆ ಸಾಕಷ್ಟು ಶ್ರಮಿಸಿದರೂ, ದಿನೇದಿನೇ ಹೆಚ್ಚಳವಾಗುತ್ತಿರುವ ಸೋಂಕಿತರ ಸಂಖ್ಯೆಯನ್ನು ಗಮನಿಸಿದಾಗ ಎಲ್ಲೊ ಒಂದುಕಡೆ ವಿಫಲವಾಗಿದೆಯೇ ಎಂಬ ಭಾವನೆ ವ್ಯಕ್ತವಾಗುತ್ತಿದೆ ಎಂದರು. ಸೋಂಕಿನ ಲಕ್ಷಣವುಳ್ಳವರು ನಿರ್ಲಕ್ಷ್ಯ ವಹಿಸದೇ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಅವರು ನೀಡುವ ಸಲಹೆಗಳನ್ನು ಅನುಸರಿಸಬೇಕು. ಇಲ್ಲದಿದ್ದರೆ ಸಾವು ಖಚಿತ ಎನ್ನುವಂತಾಗಿದೆ ಎಂದರು.
ಕಳೆದ ಕೆಲ ದಿನಗಳ ಹಿಂದೆ ನನಗೂ ಸೋಂಕು ದೃಢಪಟ್ಟಿದ್ದು ವೈದ್ಯರ ಸಲಹೆ ಪಾಲಿಸಿ ಗುಣಮುಖನಾಗಿದ್ದೇನೆ. ಆದರೆ ನನ್ನ ಸ್ನೇಹಿತನಿಗೆ ಸೋಂಕು ಪತ್ತೆಯಾಗಿರುವ ಬಗ್ಗೆ ತಿಳಿದಿದ್ದರೂ ವೈದ್ಯರನ್ನು ಸಂಪರ್ಕಿಸದೇ ನಿರ್ಲಕ್ಷé ವಹಿಸಿದ. ಕೊನೆ ಘಳಿಗೆಯಲ್ಲಿ ಆಸ್ಪತ್ರೆಗೆ ಕೊಂಡೊಯ್ದರೂ ಸಾವನ್ನಪ್ಪಿದ. ಅವನು ತನ್ನನ್ನು ಬದುಕಿಸುವಂತೆ ನನ್ನನ್ನು ಕೇಳಿದರೂ ಅದು ಸಾಧ್ಯವಾಗಿಲ್ಲ. ಮತ್ತೂಬ್ಬ ಸ್ನೇಹಿತನಿಗೂ ಸೋಂಕು ದೃಢಪಟ್ಟಿತ್ತು. ಆತನೂ ಆತಂಕಕ್ಕೊಳಗಾಗಿದ್ದ. ನಾನೇ ಒತ್ತಾಯ ಮಾಡಿ ಆಸ್ಪತ್ರೆಯಲ್ಲಿ ದಾಖಲಿಸಿದೆ. ಇದೀಗ ಚಿಕಿತ್ಸೆ ಪಡೆದು ಗುಣಮುಖರಾಗಿ ಹೊರ ಬಂದಿದ್ದಾರೆ. ಸೋಂಕಿಗೆ ಆತ್ಮಸ್ಥೈರ್ಯವೇ ಮದ್ದಾಗಿದ್ದು, ಜನ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು. ಜತೆಗೆ ಸೋಂಕನ್ನು ನಿರ್ಲಕ್ಷಿಸಬಾರದು ಎಂದರು.
ಜನರು ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸರ್‌ನ್ನು ಕಡ್ಡಾಯವಾಗಿ ಬಳಕೆ ಮಾಡಬೇಕು. ವಿಮ್ಸ್ ಆಸ್ಪತ್ರೆಯಲ್ಲಿ ಒಂದಷ್ಟು ಅವ್ಯವಸ್ಥೆ ಇದೆ. ಅದಕ್ಕೆ ನಿರ್ಲಕ್ಷ ಎನ್ನುವಂತಿಲ್ಲ. ವೈದ್ಯರು ಸಾಕಷ್ಟು ಶ್ರಮಿಸುತ್ತಿದ್ದಾರೆ. ಕೆಲವರು ತಮಗೆ ಆಕ್ಸೀಜನ್, ಬೆಡ್ ನೀಡಬೇಕೆಂದು ಒತ್ತಾಯ ಮಾಡುತ್ತಾರೆ. ಅದು ಸರಿಯಲ್ಲ. ಸಕಾಲಕ್ಕೆ ವೈದ್ಯರು ನೀಡಲಿದ್ದಾರೆ. ಕೊರತೆ ಇರುವುದನ್ನು ಸರಿಪಡಿಸಲಾಗುವುದು. ಜಿಲ್ಲೆಯಲ್ಲಿ ಒಟ್ಟು 66 ವೆಂಟಿಲೇಟರ್‌ಗಳು ಇವೆ ಎಂದು ಸ್ಪಷ್ಟಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಸದ ವೈ. ದೇವೇಂದ್ರಪ್ಪ, ಐಜಿಪಿ ಎಂ. ನಂಜುಂಡಸ್ವಾಮಿ, ಶಾಸಕರಾದ ಜಿ. ಸೋಮಶೇಖರ ರೆಡ್ಡಿ, ಬಿ.ನಾಗೇಂದ್ರ, ಡಿಸಿ ಎಸ್.ಎಸ್. ನಕುಲ್, ಎಸ್‌ಪಿ ಸಿ.ಕೆ. ಬಾಬಾ, ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಇತರರಿದ್ದರು.