Advertisement
ಮಗುವಿನ ಆಹಾರ ಕ್ರಮಗಳು ತಾಯಿ ಹಾಲು ಮಗುವಿಗೆ ಶ್ರೇಷuವಾದ ಹಾಲು. ಎದೆಹಾಲು ಶಿಶುಗಳಿಗೆ ಶಕ್ತಿ ಹಾಗೂ ಪೋಷಕಾಂಶದ ಮೂಲವಾಗಿದೆ. ಇದು ಮಗುವಿಗೆ 6 ತಿಂಗಳಿನವರೆಗೆ ಅವಶ್ಯವಿರುವ ಪೌಷ್ಟಿಕಾಂಶವನ್ನು ಸಂಪೂರ್ಣವಾಗಿ ಪೂರೈಸುತ್ತದೆ. ಶಿಶು ಜನನವಾದ ಅನಂತರ ಮೊದಲಿಗೆ ಸ್ತನದಿಂದ ಸ್ರವಿಸಲ್ಪಡುವಂತಹ ದಪ್ಪವಾದ ಹಳದಿಯುಕ್ತ ಹಾಲಾದ ಕೊಲೊಸ್ಟ್ರಮ್ ತಪ್ಪದೇ ನೀಡಬೇಕು. ಈ ಕೊಲೊಸ್ಟ್ರಮ್‌ನಲ್ಲಿ ಬಿಳಿ ರಕ್ತಕಣಗಳು, ರೋಗ ನಿರೋಧಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿ ಇರುವುದಲ್ಲದೆ, ಪ್ರೊಟೀನು, ಖನಿಜಾಂಶಗಳು ಮತ್ತು ಕೊಬ್ಬಿನಲ್ಲಿ ಕರಗುವ ವಿಟಮಿನ್‌ಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ನವಜಾತ ಶಿಶುಗಳಿಗೆ ಈ ಕೊಲೊಸ್ಟ್ರಮ್ ಹೊಂದಿದ ಹಾಲು ಸಿಗುವುದು ಬಹಳ ಮುಖ್ಯ.
Related Articles
6 ತಿಂಗಳ ಬಳಿಕದ ಅವಧಿಯಲ್ಲಿ ಮಗುವಿನ ಬೆಳವಣಿಗೆಯ ಗತಿಯು ಸ್ವಲ್ಪ$ ನಿಧಾನವಾಗಿ ಸಾಗುತ್ತದೆ. ಆದರೆ, ಈ ಸಂದರ್ಭದಲ್ಲಿ ಮಗುವಿನ ಆರೋಗ್ಯವನ್ನು ಕಾಪಾಡುವಲ್ಲಿ ಪೋಷಕಾಂಶಗಳು ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಮಗುವಿಗೆ 6 ತಿಂಗಳ ಬಳಿಕವೇ ಪೂರಕ ಆಹಾರವನ್ನು ನೀಡಲು ಪ್ರಾರಂಭಿಸಬೇಕು. 6 ತಿಂಗಳ ಬಳಿಕ ತಾಯಿಯ ಎದೆ ಹಾಲಿನಲ್ಲಿ ದೊರಕುವ ಪೌಷ್ಟಿಕಾಂಶಗಳು ಮಗುವಿನ ಬೆಳವಣಿಗೆಗೆ ಸಾಕಾಗುವುದಿಲ್ಲ. ಆದ್ದರಿಂದ ಮಗುವಿಗೆ ತಾಯಿಯ ಎದೆ ಹಾಲಿನೊಂದಿಗೆ ಚಿಕ್ಕ ಪ್ರಮಾಣದಲ್ಲಿ ಬೇಯಿಸಿದ ಧಾನ್ಯ, ತರಕಾರಿ ಮತ್ತು ಆಯಾ ಕಾಲದಲ್ಲಿ ಸಿಗುವ ಹಣ್ಣುಗಳನ್ನು ಹಿಸುಕಿ ಮೆದು ಮಾಡಿ ನೀಡಬೇಕು. 6 ತಿಂಗಳಿನಲ್ಲಿ ದಿನಕ್ಕೆ ಒಂದು ಸಲ ಆಹಾರ ಕೊಡಲು ಪ್ರಾರಂಭಿಸಬೇಕು. ಬಳಿಕ ನಿಧಾನವಾಗಿ ಹೆಚ್ಚು ಸಲ ಕೊಡಲು ಪ್ರಾರಂಭ ಮಾಡಿ 9 ತಿಂಗಳ ವೇಳೆ ಕನಿಷ್ಠ 3 ಸಲ ಆಹಾರ ನೀಡಬೇಕು. 9 ರಿಂದ 11 ತಿಂಗಳವರೆಗೆ ದಿನಕ್ಕೆ 4 ಬಾರಿ ಮತ್ತು 1 ರಿಂದ 2 ವರ್ಷದವರೆಗೆ ಮಗುವಿಗೆ ದಿನಕ್ಕೆ 5 ಬಾರಿ ಆಹಾರ ನೀಡಬೇಕು.
Advertisement
– ದ್ವಿದಳ ಧಾನ್ಯಗಳು, ಬೇಳೆ ಕಾಳುಗಳುಗಳನ್ನು ಸೇರಿಸಿ ಹಾಲಿನಲ್ಲಿ ಮಾಡಿದ ಮಣ್ಣಿಯನ್ನು ತಿನ್ನಿಸಬಹುದು– ಬೇಯಿಸಿದ ಆಲೂಗಡ್ಡೆ, ಕ್ಯಾರೆಟ್, ಇತ್ಯಾದಿ ತರಕಾರಿಗಳು, ಬಾಳೆಹಣ್ಣು, ಪಪ್ಪಾಯ, ಮಾವಿನ ಹಣ್ಣುಗಳನ್ನು ಮೆದು ಮಾಡಿಕೊಡಬಹುದು.
– ಪ್ರತೀ ದಿನ ಮನೆಯಲ್ಲಿ ಮಾಡುವ ತಿಂಡಿಗಳಾದ ಇಡ್ಲಿ, ದೋಸೆ, ಉಪ್ಪಿಟ್ಟು ಇವುಗಳನ್ನು ನೀಡಬಹುದು.
– ಪ್ರಾರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ತೆಳುವಾದ ಆಹಾರವನ್ನು ನೀಡಿ ನಿಧಾನವಾಗಿ ದಪ್ಪಆಹಾರವನ್ನು ಹೆಚ್ಚು ಬಾರಿ ನೀಡಬೇಕು.
– ಮಗುವಿನ ಮೆದುಳು ಮತ್ತು ಶರೀರದ ಬೆಳವಣಿಗೆಗ ಕಬ್ಬಿಣಾಂಶ ತುಂಬಾ ಸಹಕಾರಿಯಾಗಿದೆ. ಆದ್ದರಿಂದ ಕಬ್ಬಿಣಾಂಶ ಜಾಸ್ತಿ ಇರುವ ಹಸಿರು ಸೊಪ್ಪು ತರಕಾರಿಗಳು, ಮೊಳಕೆ ಬರಿಸಿದ ಕಾಳುಗಳು, ಮೊಟ್ಟೆ, ಮಾಂಸ ಇವುಗಳನ್ನು ನೀಡಬೇಕು.
– ಆಹಾರದಲ್ಲಿ ಕಬ್ಬಿಣಾಂಶವನ್ನು ಜೀರ್ಣಿಸಿಕೊಳ್ಳುವ ಸಲುವಾಗಿ ವಿಟಮಿನ್ ಸಿ ಹೇರಳವಾಗಿರುವ ಕಿತ್ತಳೆ, ಮಾವು, ಕಲ್ಲಂಗಡಿ, ಟೊಮೆಟೊ, ನಿಂಬೆ ನೀಡಬೇಕು.
– ಮಗುವಿನ ಸಾಮಾನ್ಯ ಬೆಳವಣಿಗೆಗೆ, ದೃಷ್ಟಿ ದೋಷ ಉಂಟಾಗದಂತೆ, ಸಾಮಾನ್ಯ ಕಾಯಿಲೆಯಿಂದ ರಕ್ಷಿಸುವ ಸಲುವಾಗಿ ವಿಟಮಿನ್ ಎ ಅಧಿಕವಾಗಿರುವ ಬಸಳೆ ಸೊಪ್ಪು$, ಕ್ಯಾರೆಟ್, ಮಾವು, ಪಪ್ಪಾಯ, ಹಾಲು, ಮೊಸರು, ಮೊಟ್ಟೆ ಇವುಗಳನ್ನು ಆಹಾರದಲ್ಲಿ ಸೇರಿಸಬೇಕು.
– ಶಕ್ತಿವರ್ಧನೆಗಾಗಿ ಮಗುವಿನ ಆಹಾರಕ್ಕೆ ತುಪ್ಪ ಅಥವಾ ಎಣ್ಣೆ ಸೇರಿಸುವುದು ಉತ್ತಮ.
– 2 ವರ್ಷದವರೆಗೂ ಮಗುವಿಗೆ ಬೇಕಾದಾಗೆಲ್ಲ ತಾಯಿಯ ಎದೆ ಹಾಲು ನೀಡಬೇಕು.
– ತಿಂಗಳಿಗೆ ಒಂದು ಬಾರಿ ಮಗುವಿನ ತೂಕವನ್ನು ಅಂಗನವಾಡಿ ಅಥವಾ ಆರೋಗ್ಯ ಕೇಂದ್ರದಲ್ಲಿ ಪರೀಕ್ಷಿಸಬೇಕು. ಇದರಿಂದ ಮಗು ಯಾವ ರೀತಿ ತನ್ನ ತೂಕವನ್ನು ಹೆಚ್ಚಿಸಿಕೊಳ್ಳುತ್ತಿದೆ ಎಂದು ತಿಳಿಯಬಹುದು.
– ಮಗುವಿಗೆ ಇತರ ಹಾಲು, ನೀರು ಅಥವಾ ಪಾನೀಯ ಕುಡಿಸಲು ತಟ್ಟೆ ಮತ್ತು ಚಮಚವನ್ನೇ ಉಪಯೋಗಿಸಬೇಕು. ಬಾಟಲಿಯನ್ನು ಬಳಸದೇ ಇರುವುದು ಉತ್ತಮ.
– ಮಗುವಿಗೆ ಆಹಾರ ನೀಡುವ ಮೊದಲು ಸ್ವತ್ಛವಾಗಿ ಕೈ ತೊಳೆದುಕೊಳ್ಳಬೇಕು. ಮಗುವಿಗೆ ಉಪಯೋಗಿಸುವ ತಟ್ಟೆ, ಲೋಟವನ್ನು ಕೂಡ ಸ್ವತ್ಛವಾಗಿ ತೊಳೆದಿಡಬೇಕು.
– ಮಗುವಿಗೆ ಪೂರಕ ಆಹಾರವನ್ನು ಪ್ರಾರಂಭಿಸಿದ ಬಳಿಕ ಆಹಾರ ದೊಂದಿಗೆ ಮಗುವಿಗೆ ಮನೆ ಯಲ್ಲಿಯೇ ಕುದಿಸಿ ಆರಿಸಿದ ನೀರನ್ನು ಕೊಡಬೇಕು. ಮಗುವಿಗೆ ಎದೆ ಹಾಲು, ಪೂರಕ ಆಹಾರದೊಂದಿಗೆ ವಯಸ್ಸಿಗನುಗುಣವಾಗಿ ಸರಿಯಾದ ಸಮಯಕ್ಕೆ ನೀಡುವ ಚುಚ್ಚುಮದ್ದು, ಲಸಿಕೆಗಳನ್ನು ತಪ್ಪದೇ ನೀಡಬೇಕು. ಮಣ್ಣಿ ತಯಾರಿಸುವ ವಿಧಾನ:
1 ಪಾಲು ಅಕ್ಕಿ/ಗೋಧಿ, 1/2 ಪಾಲು ರಾಗಿ + 1/2 ಪಾಲು ಬೇಳೆ ಹಿಟ್ಟು ಮಾಡಿ ಜರಡಿ ತೆಗೆದು ಹಿಟ್ಟನ್ನು ಹಾಲಿನಲ್ಲಿ/ಬಿಸಿ ನೀರಿನಲ್ಲಿ ಬೇಯಿಸಿ ಬೆಲ್ಲ ಸೇರಿಸಿ ನೀಡುವುದು. ಪೂರಕ ಆಹಾರದ ಸಲಹೆಗಳು
– ಮಗುವಿಗೆ 2 ವರ್ಷದ ವರೆಗೆ ಬೆಳಗ್ಗೆ ಎದ್ದ ತತ್‌ಕ್ಷಣ, ರಾತ್ರಿ ಮಲಗುವ ಮುಂಚೆ ಹಾಗೂ ಮಗುವಿಗೆ ಬೇಕೆನಿಸಿದಾಗೆಲ್ಲ ತಾಯಿಯ ಎದೆ ಹಾಲನ್ನು ತಪ್ಪದೇ ನೀಡಬೇಕು.
– ಮಗುವಿನ ಜೀವನಕ್ಕೆ, ಆರೋಗ್ಯಕ್ಕೆ ಹಾಗೂ ಬೆಳವಣಿಗೆಯ ಉತ್ತೇಜನಕ್ಕೆ ಉತ್ತಮವಾದ ಶಿಶು ಆಹಾರ ಅವಶ್ಯ
– ಡಾ| ಚೈತ್ರಾ ಆರ್.ರಾವ್,
ಸಹ ಪ್ರಾಧ್ಯಾಪಕರು,
ರಾಘವೇಂದ್ರ ಭಟ್ ಎಂ.ಆರೋಗ್ಯ ಸಹಾಯಕರು,
ಸಮುದಾಯ ವೈದ್ಯಕೀಯ ವಿಭಾಗ ಕೆ.ಎಂ.ಸಿ. ಮಣಿಪಾಲ