ಇಂಡಿ: ದೇವರಿಗೆ ಹಣ್ಣು-ಹಂಪಲು, ಹೋಳಿಗೆ-ಕಡಬು, ಅನ್ನ-ಸಾರು ಅಷ್ಟೇ ಏಕೆ ಮನೆಯಲ್ಲಿ ಮಾಡಿದ ಅಡುಗೆಯನ್ನು ಒಂದು ಪಾತ್ರೆಯಲ್ಲಿ ಸ್ವಲ್ಪ ಸ್ವಲ್ಪ ಹಾಕಿ ನೈವೇದ್ಯ ಮಾಡುವುದನ್ನು ನೋಡಿದ್ದೇವೆ. ಆದರೆ ಇಲ್ಲೊಂದು ದೇವರಿಗೆ ಮದ್ಯವನ್ನೇ (ಸಾರಾಯಿ) ನೈವೇದ್ಯ ಮಾಡಲಾಗುತ್ತದೆ.
ಈ ದೇವರಿಗೆ ಮದ್ಯವನ್ನು ಯಾಕೆ ನೈವೇದ್ಯ ಮಾಡುತ್ತಾರೆ? ಹಾಗೆ ಮಾಡುವುದರಿಂದ ಏನು ಪ್ರಯೋಜನ? ಎಂಬ ಪ್ರಶ್ನೆಗಳಿಗೆ ಭಕ್ತರಿಂದ ಬರುವ ಉತ್ತರ ಒಂದೇ “ಇದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದ ಪದ್ಧತಿ. ಈ ರೀತಿ ಮಾಡುವುದರಿಂದ ನಮ್ಮ ಕೆಲಸಗಳು ನಿರ್ವಿಘ್ನವಾಗಿ ನಡೆಯುತ್ತವೆ’.
ಹೌದು. ಈ ದೇವರಿರುವುದು ಇಂಡಿ ತಾಲೂಕಿನ ಇಂಗಳಗಿ ಗ್ರಾಮದಲ್ಲಿ. ಈ ದೇವರನ್ನು ಧರ್ಮರ ದೇವರು (ಮರುಳ ಸಿದ್ಧೇಶ್ವರ) ಎಂದೇ ಕರೆಯುತ್ತಾರೆ. ಪಟ್ಟಣದಿಂದ ಸುಮಾರು ಆರು ಕಿಮೀ ದೂರದಲ್ಲಿರುವ ಈ ಗ್ರಾಮದಲ್ಲಿ ಮರುಳಸಿದ್ಧೇಶ್ವರ ಎಂಬ ದೇವರು ಹಾಗೂ ನಿಜಲಿಂಗ ತಾಯಿ ಎಂಬ ದೇವತೆ ಇದ್ದಾಳೆ. ಈ ಕ್ಷೇತ್ರದ ಜಾತ್ರೆ ಪ್ರತಿ ವರ್ಷ ಶಿವರಾತ್ರಿ ಅಮಾವಾಸ್ಯೆಯಾದ ಮೊದಲ ಸೋಮವಾರ ಮತ್ತು ಮೊದಲ ಗುರುವಾರ ನಡೆಯುತ್ತದೆ. ಈ ಬಾರಿ ಫೆ.23 ರವಿವಾರ ಶಿವರಾತ್ರಿ ಅಮಾವಾಸ್ಯೆ ಇರುವುದರಿಂದ ಫೆ.24 ಸೋಮವಾರ ಧರ್ಮರ ದೇವರು (ಮರುಳಸಿದ್ಧೇಶ್ವರ),ಫೆ. 27 ರಂದು ನಿಜಲಿಂಗತಾಯಿ ದೇವತೆಯ ಜಾತ್ರಾ ಮಹೋತ್ಸವವಿದೆ.
ಮದ್ಯವೇ ನೈವೇದ್ಯ-ತೀರ್ಥ: ಜಾತ್ರಾ ಮಹೋತ್ಸವ ದಿನ ರಾತ್ರಿ 08 ಗಂಟೆಗೆ ಈ ದೇವರುಗಳಿಗೆ ಭಕ್ತರು ನೈವೇದ್ಯ ರೂಪದಲ್ಲಿ ಸಾರಾಯಿಯನ್ನು ನೀಡುತ್ತಾರೆ. ನೈವೇದ್ಯ ಆದ ಮೇಲೆ ಅದೇ ಸಾರಾಯಿಯನ್ನು ಎಲ್ಲ ಭಕ್ತಾದಿಗಳು (ಗಂಡಸರು ಮಾತ್ರ) ತೀರ್ಥ ಎಂದು ಸ್ವೀಕರಿಸುತ್ತಾರೆ. ಈ ಕ್ಷೇತ್ರಕ್ಕೆ ಗಡಿ ಭಾಗ ಮಹಾರಾಷ್ಟ್ರದಿಂದಲೂ ಭಕ್ತರು ಆಗಮಿಸುತ್ತಾರೆ.ದೇವರುಗಳ ದರ್ಶನ ಪಡೆಯುತ್ತಾರೆ. ತೀರ್ಥ(ಮದ್ಯ) ಸ್ವೀಕರಿಸಿ ನುಡಿಮುತ್ತು (ಹೇಳಿಕೆ) ಕೇಳಿಕೊಂಡು ಹೋಗುವುದು ವಾಡಿಕೆ.
ಹೇಳಿಕೆ ಅಂದ್ರೆ ಏನು: ದೇವತೆಗಳ ಪೂಜಾ ಕಾರ್ಯಕ್ರಮ ಮುಗಿದ ಮೇಲೆ ತೆಂಗಿನ ಕಾಯಿಗಳ ಮುಖಾಂತರ ಹೇಳಿಕೆಗಳು ನಡೆಯುತ್ತವೆ. ತೆಂಗಿನಕಾಯಿ ಒಡೆದಾಗ ಅದರ ಮುಂಭಾಗದ ಹೊಳಿಕೆ ಆಕಾಶದ ಕಡೆ ಮುಖ ಮಾಡಿ ಬಿದ್ರೆ ಆತನಿಗೆ ವಿಘ್ನವಿಲ್ಲ ವರ್ಷವಿಡೀ ಉತ್ತಮ ಜೀವನ ಸಾಗಿಸುತ್ತಾನೆ ಎಂದರ್ಥ. ಅದು ಆಕಸ್ಮಾತ್ ಭೂಮಿ ಕಡೆ ಮುಖ ಮಾಡಿ ಬಿದ್ರೆ ಆತನಿಗೆ ತೊಂದರೆ, ವರ್ಷವಿಡೀ ವಿಘ್ನಗಳು ಬರುತ್ತವೆ ಎಂಬುದು ನಂಬಿಕೆ.
ದೀರ್ಘದಂಡ ನಮಸ್ಕಾರ: ಬೇಡಿಕೊಂಡ ಹರಕೆಗಳು ಕೈಗೊಡಿದಾಗ ಪ್ರತಿ ವರ್ಷ ಜಾತ್ರಾ ಮಹೋತ್ಸವದಂದು ಸಾಯಂಕಾಲ ದೀರ್ಘದಂಡ ನಮಸ್ಕಾರ ಹಾಕುವ ಪದ್ಧತಿ ಇದೆ. ವಿಶೇಷವೆಂದರೆ ಹಿಂದೂ-ಮುಸ್ಲಿಮರು ನಡೆದುಕೊಳ್ಳುತ್ತಾರೆ.
ಹಿಂದಿನ ಕಾಲದಿಂದಲೂ ಗ್ರಾಮಸ್ಥರು ಜಾತ್ರೆ ಮಾಡುತ್ತ ಬಂದಿದ್ದಾರೆ. ನಂಬಿಕೆ ಇಟ್ಟ ಭಕ್ತರನ್ನು ದೇವರುಗಳು ಕೈ ಬಿಟ್ಟಿಲ್ಲ. ಅನೇಕ ಜನರಿಗೆ ಮಕ್ಕಳಾಗಿರಲಿಲ್ಲ. ಇಲ್ಲಿ ಹರಕೆ ಹೊತ್ತು ಹೋದ ಎರಡು ವರ್ಷದಲ್ಲಿ ಸಂತಾನ ಪ್ರಾಪ್ತಿಯಾದ ಉದಾಹರಣೆಗಳಿವೆ.
ವಿಠ್ಠಲ ಜಾಧವ,
ಗ್ರಾಮದ ಹಿರಿಯ
ಉಮೇಶ ಬಳಬಟ್ಟಿ