ಇಂಡಿ: ಕೋವಿಡ್-19 ವೈರಸ್ ತಾಲೂಕಿನಲ್ಲೂ ಹರಡುತ್ತಿರುವುದರಿಂದ ಜನ ಭಯ ಭೀತರಾಗಿದ್ದಾರೆ. ಈಗಾಗಲೇ ತಾಲೂಕಿನಲ್ಲಿ 18 ಜನರಿಗೆ ಕೋವಿಡ್ ಪಾಸಿಟಿವ್ ವರದಿ ಬಂದಿದೆ. ಮಹಾರಾಷ್ಟ್ರದಿಂದ ಬಂದ ಜನರಿಗೆ ಕಡ್ಡಾಯವಾಗಿ ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಬೇಕು. ಪ್ರತಿ ಸೋಮವಾರ ಕೋವಿಡ್-19 ರೋಗದ ಬಗ್ಗೆ ವಿಶೇಷ ಸಭೆ ಕರೆಯಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಹಾಗೂ ಕುಡಿಯುವ ನೀರು ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಕೋವಿಡ್ ಹರಡದಂತೆ ಅಧಿಕಾರಿಗಳು ಸಾಕಷ್ಟು ಪ್ರಯತ್ನ ಪಟ್ಟಿದ್ದೀರಿ. ಆದರೂ ಮಹಾರಾಷ್ಟ್ರ ಮತ್ತು ಅನ್ಯ ರಾಜ್ಯಗಳಿಂದ ಬಂದ ಜನರಿಂದ ತಾಲೂಕಿನಲ್ಲಿ ಕೋವಿಡ್ ವೈರಸ್ ಹರಡಿದೆ. ಅ ಧಿಕಾರಿಗಳು ಇನ್ನಷ್ಟು ಜಾಗರುಕತೆಯಿಂದ ಕಾರ್ಯನಿರ್ವಹಿಸಿ ಕೋವಿಡ್ ವೈರಸ್ ಹರಡುವುದನ್ನು ತಡೆಗಟ್ಟಬೇಕು ಎಂದರು.
ತಾಲೂಕು ಆರೋಗ್ಯ ಅಧಿಕಾರಿ ಡಾ| ಅರ್ಚನಾ ಕುಲಕರ್ಣಿ ಮಾತನಾಡಿ, ಸಾರ್ವಜನಿಕರಿಗೆ ಅಪಘಾತಗಳು ಸಂಭವಿಸಿದಾಗ, ಕೋವಿಡ್ ಸೋಂಕು ಪತ್ತೆಯಾದಾಗ ಹಾಗೂ ತುರ್ತು ಸೇವೆ ಒದಗಿಸಬೇಕಾದರೆ 108 ಅಂಬ್ಯುಲೆನ್ಸ್ ಅವಶ್ಯಕತೆ ಇದೆ. ಆದರೆ, ತಾಲೂಕಿಗೆ ಅಂಬ್ಯುಲೆನ್ಸ್ ಒಂದೇ ಇರುವುದರಿಂದ ಸಮಸ್ಯೆಯಾಗಿದೆ. ಇನ್ನೊಂದು ವಾಹನದ ವ್ಯವಸ್ಥೆ ಮಾಡಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಅಂಬ್ಯುಲೆನ್ಸ್ ಬಗ್ಗೆ ಆರೋಗ್ಯ ಸಚಿವರ ಜೊತೆ ಮಾತನಾಡುವುದಾಗಿ ತಿಳಿಸಿದರು.
ಎಸ್ಸೆಸ್ಸೆಲ್ಸಿ ಪರೀಕ್ಷಾ ಸಮೀಪಿಸುತ್ತಿರುವುದರಿಂದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಿ. ಸ್ಯಾನಿಟೈಸರ್, ಮಾಸ್ಕ್ಹಾ ಕಿಕೊಳ್ಳುವಂತೆ ಸಲಹೆ ನೀಡಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಿಳಿಸಿದರು. ಕೃಷಿ ಅಧಿಕಾರಿ ಮಹಾದೇವಪ್ಪ ಏವೂರ ಮಾತನಾಡಿದರು. ತಾಪಂ ಅಧಿಕಾರಿ ಡಾ| ವಿಜಯಕುಮಾರ ಅಜೂರ, ಗಂಗಾಧರ ವಾಲಿ, ಎಸ್.ಎಸ್. ಕತ್ತಿ, ರಮೇಶ ಲಮಾಣಿ, ಡಾ| ಅರ್ಚನಾ ಕುಲಕರ್ಣಿ, ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ ಇದ್ದರು.