ಉಮೇಶ ಬಳಬಟ್ಟಿ
ಇಂಡಿ: ಬಿಜೆಪಿ ಮಂಡಲ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಆರಂಭವಾಗಿದ್ದು, ನವೆಂಬರ್ ಅಂತ್ಯದಲ್ಲಿ ಅಥವಾ ಡಿಸೆಂಬರ್ ತಿಂಗಳ ಮೊದಲ ವಾರದಲ್ಲಿ ಪೂರ್ಣಗೊಳ್ಳಲಿದ್ದು, ಇದೀಗ ಇಂಡಿ ಮಂಡಲದಲ್ಲಿ ಮಂಡಲ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಶುರುವಾಗಿದೆ.
ಈಗಾಗಲೇ ಒಂದೆರಡು ಬಾರಿ ಜಿಲ್ಲಾ ಹಾಗೂ ರಾಜ್ಯ ನಾಯಕರು ಮಂಡಲ ಆಕಾಂಕ್ಷಿಗಳ ಅರ್ಜಿ ಪಡೆದುಕೊಂಡು ಹೋಗಿದ್ದಾರೆ. ಮಂಡಲ ಅಧ್ಯಕ್ಷ ಆಕಾಂಕ್ಷಿಗಳು ತಮ್ಮನ್ನೇ ಅಧ್ಯಕ್ಷ ಮಾಡಬೇಕೆಂದು ನಾಯಕರಿಗೆ ಒತ್ತಡ ಹೇರುತ್ತಿರುವುದು ತಲೆನೋವು ತಂದಿಟ್ಟಿದೆ.
18 ಜನ ಆಕಾಂಕ್ಷಿಗಳು: ಈಗಾಗಲೇ ಜಿಲ್ಲಾ ಅಧ್ಯಕ್ಷರ ಮುಂದೆ 18 ಜನ ಆಕಾಂಕ್ಷಿಗಳು ಹೆಸರು ನೋಂದಾಯಿಸಿದ್ದಾರೆ. ಅಲ್ಲದೇ ಸಂಸದ ರಮೇಶ ಜಿಗಜಿಣಗಿ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಕವಟಗಿ, ವಿ.ಪ ಸದಸ್ಯ ಅರುಣ ಶಹಾಪುರ ನಿವಾಸಿಗಳಿಗೆ ತೆರಳಿ ತಮ್ಮ ಹೆಸರನ್ನೇ ಮಂಡಲ ಅಧ್ಯಕ್ಷ ಸ್ಥಾನಕ್ಕೆ ಸೂಚಿಸಬೇಕೆಂದು ಮನವಿ ಮಾಡಿಕೊಂಡು ಬಂದಿದ್ದಾರೆ ಎಂದು ತಿಳಿದು ಬಂದಿದೆ.
ಇಂಡಿ ಕ್ಷೇತ್ರದಲ್ಲಿ ಅನೇಕ ಹಿರಿಯರು, ಯುವಕರು ಪಕ್ಷಕ್ಕಾಗಿ ಹಗಲಿರುಳು ಶ್ರಮಿಸಿದ್ದಾರೆ. ಅಂಥವರಲ್ಲಿ ಬಹಳಷ್ಟು ಜನ ಮಂಡಲ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.
ಆಕಾಂಕ್ಷಿಗಳು ಯಾರ್ಯಾರು?: ಶರಣಗೌಡ ಬಂಡಿ, ಪುಟ್ಟಣಗೌಡ ಪಾಟೀಲ, ಶೀಲವಂತ ಉಮರಾಣಿ, ಅನೀಲಗೌಡ ಬಿರಾದಾರ, ಅನೀಲ ಜಮಾದಾರ, ಸುನೀಲ ರಬಶೆಟ್ಟಿ, ದೇವೇಂದ್ರ ಕುಂಬಾರ, ಹಣಮಂತ್ರಾಯಗೌಡ ಪಾಟೀಲ, ಮಲ್ಲಿಕಾರ್ಜುನ ಕಿವುಡೆ, ಬುದ್ದುಗೌಡ ಪಾಟೀಲ, ಮಹಾದೇವ ಗುಡ್ಡೊಡಗಿ, ರಮೇಶ ಧರೆಣ್ಣವರ, ರಾಜಕುಮಾರ ಸಗಾಯಿ, ಶ್ರೀಮಂತ ಮೊಗಲಾಯಿ, ಅಪ್ಪುಗೌಡ ಪಾಟೀಲ, ಪಾಪು ಕಿತ್ತಲಿ ಸೇರಿದಂತೆ ಒಟ್ಟು 18 ಜನ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಪಕ್ಷಕ್ಕಾಗಿ ಸಾವಿರಾರು ಕಾರ್ಯಕರ್ತರು ದುಡಿದಿದ್ದಾರೆ. ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿ ಮಂಡಲ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿದರೆ ಒಳಿತಾಗುತ್ತದೆ ಎಂಬುದು ಸ್ಥಳೀಯ ಕಾರ್ಯಕರ್ತರ ಅಭಿಪ್ರಾಯ.